ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌ ‘ಕಂದಾಯ ಗ್ರಾಮ’ವಾಗಿ ಘೋಷಣೆ

Last Updated 21 ನವೆಂಬರ್ 2020, 16:54 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ (ಕೃಷ್ಣರಾಜ ಸಾಗರ) ಗ್ರಾಮವನ್ನು ಕಂದಾಯ ಗ್ರಾಮ ಎಂದು ಸರ್ಕಾರ ಘೋಷಿಸಿದೆ.

ನ. 19ರಂದು ಸರ್ಕಾರ ಈ ಸಂಬಂಧ ಗೆಜೆಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. 110 ಎಕರೆ ವಿಸ್ತೀರ್ಣದ ಈ ಗ್ರಾಮವನ್ನು 1979ರಲ್ಲಿ ಅಧಿಸೂಚಿತ (ನೋಟಿ ಫೈ) ಪ್ರದೇಶ ಎಂದು ಘೋಷಿಸಲಾಗಿತ್ತು. ಕೆಆರ್‌ಎಸ್‌ ಗ್ರಾಮವನ್ನು ಅಧಿಸೂಚಿತ ಪ್ರದೇಶ ಪಟ್ಟಿಯಿಂದ ಕೈಬಿಟ್ಟು ಕಂದಾಯ ಗ್ರಾಮ ಎಂದು ಘೋಷಿಸಬೇಕು ಎಂದು 2018ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. 2019ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಶಾಸಕ ಮತ್ತು ಸ್ಥಳೀಯರು ಮನವಿ ಕೊಟ್ಟು ಒತ್ತಾಯಿಸಿದ್ದರು.

ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ಜಿಲ್ಲಾಡಳಿತ ಕೆಆರ್‌ಎಸ್‌ ಜನವಸತಿ ಪ್ರದೇಶದ ಸರ್ವೆ ನಡೆಸಿ, ಅದಕ್ಕೆ ಪಕ್ಕದ ಹುಲಿಕೆರೆ ಮತ್ತು ಹೊಂಗಹಳ್ಳಿ ಗ್ರಾಮಗಳ ವ್ಯಾಪ್ತಿಯ ವಿವಿಧ ಸ.ನಂ.ಗಳನ್ನು ಒಳಗೊಂಡಂತೆ ಕಂದಾಯ ಗ್ರಾಮವೆಂದು ನಮೂದಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದಾದ ಒಂದು ವರ್ಷದಲ್ಲಿ ಕೆಆರ್‌ಎಸ್‌ ಗ್ರಾಮವನ್ನು ಕಂದಾಯ ಗ್ರಾಮವೆಂದು ಘೋಷಿಸಿ ಗೆಜೆಟ್‌ ಮೂಲಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸುಮಾರು 12 ಸಾವಿರ ಜನಸಂಖ್ಯೆ ಇರುವ ಕೆಆರ್‌ಎಸ್‌ನ ಒಂದು ಬಡಾವಣೆಯನ್ನು (ಮದ್ದೂರು ಫೈಲ್‌) ಸರ್‌.ಎಂ. ವಿಶ್ವೇಶ್ವರಯ್ಯಪುರ ಗ್ರಾಮ (ಮಜರೆ) ಗ್ರಾಮವೆಂದು ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಕೆಆರ್‌ಎಸ್‌ ಜನ ವಸತಿ ಪ್ರದೇಶವು ‘ಅಧಿಸೂಚಿತ ಪ್ರದೇಶ’ವಾಗಿದ್ದ ಕಾರಣಕ್ಕೆ ಇಲ್ಲಿನ 1,800ಕ್ಕೂ ಹೆಚ್ಚು ಮನೆಗಳಿಗೆ ಖಾತೆ ವಗೈರೆ ದಾಖಲೆಗಳು ಇರಲಿಲ್ಲ. ಸರ್ಕಾರ ಒಕ್ಕೆಲೆಬ್ಬಿಸಿದರೆ ಏನು ಗತಿ ಎಂಬ ಆತಂಕವೂ ಇಲ್ಲಿನ ಜನರಲ್ಲಿ ಇತ್ತು. ಸದ್ಯ ಕೆಆರ್‌ಎಸ್‌ ಕಂದಾಯ ಗ್ರಾಮವೆಂದು ಗೆಜೆಟ್‌ನಲ್ಲಿ ಘೋಷಣೆ ಹೊರ ಬಿದ್ದಿರುವುದರಿಂದ ಜನರು ನಿಟ್ಟುಸಿರು ಬಿಡುತ್ತಿದ್ದಾರೆ.

‘100 ವರ್ಷಗಳ ಹಿಂದೆ ಮೈಸೂರು ಅರಸರು ನೀಡಿದ್ದ ಭೂಮಿಯಲ್ಲಿ ನಮ್ಮ ಪೂರ್ವಜರು ಮನೆ ಕಟ್ಟಿಕೊಂಡಿದ್ದರು. ಅಧಿಸೂಚಿತ ಪ್ರದೇಶ ಆಗಿದ್ದುದರಿಂದ ಕೆಆರ್‌ಎಸ್‌ ಗ್ರಾಮ ರಾಜ್ಯದ ನಕ್ಷೆಯಲ್ಲೇ ಇರಲಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬರುತ್ತಿರಲಿಲ್ಲ. ಸದ್ಯ ಸರ್ಕಾರ ಕಂದಾಯ ಗ್ರಾಮವೆಂದು ಘೋಷಿಸಿರುವುದು ಸಂತಸ ತಂದಿದೆ. ನ.19, 2020 ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ’ ಎಂದು ಗ್ರಾ.ಪಂ. ಮಾಜಿ ಸದಸ್ಯರಾದ ವಿಜಯಕುಮಾರ್‌, ಸಿ. ಮಂಜುನಾಥ್‌ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.

ಊರಿಗೊಂದೇ ಗ್ರಾ.ಪಂ.: ಕೆಆರ್‌ಎಸ್‌ ಒಂದು ಊರಿಗೆ ಒಂದೇ ಗ್ರಾಮ ಪಂಚಾಯಿತಿ. 1998ರಲ್ಲಿ ಕೆಆರ್‌ಎಸ್‌ ಗ್ರಾಮ ಪಂಚಾಯಿತಿ ರಚನೆಯಾಗಿದ್ದು, 2000ನೇ ಇಸವಿಯಲ್ಲಿ ಪ್ರಥಮ ಚುನಾವಣೆ ನಡೆಯಿತು. ಈ ಗ್ರಾ.ಪಂ.ನಲ್ಲಿ 22 ಸದಸ್ಯರು, ಎಂಟು ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT