ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾಮತಸ್ಥರನ್ನು ಎಸ್‌ಟಿಗೆ ಸೇರಿಸಲು ಗಡುವು: ನಾಗರಾಜ ಮಣ್ಣೂರು

Last Updated 26 ಜನವರಿ 2023, 5:49 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪ್ರವರ್ಗ–1ರಲ್ಲಿರುವ ಗಂಗಾಮತಸ್ಥ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಗಂಗಾಮತಸ್ಥರ (ಬೆಸ್ತ)ರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ನಾಗರಾಜ ಮಣ್ಣೂರು ಆಗ್ರಹಿಸಿದರು.

ಪಟ್ಟಣದ ಟಿಎಪಿಸಿಎಂಎಸ್‌ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ನಿಜ ಶರಣ ಅಂಬಿಗರ ಚೌಡಯ್ಯ ಅವರ 903ನೇ ಜಯಂತಿ ಹಾಗೂ ಗಂಗಾಮತಸ್ಥ (ಬೆಸ್ತರ)ರ ಸಂಘದ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದ ಬಿಜೆಪಿ ಸರ್ಕಾರ ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಹೇಳುತ್ತಾ ಕಾಲ ಕಳೆಯುತ್ತಿದೆ. ಈ ಸರ್ಕಾರದ ಅವಧಿ ಮುಗಿಯುವುದರ ಒಳಗೆ ಈ ಬಗ್ಗೆ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಗಂಗಾಮತಸ್ಥರು ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಲಿದ್ದೇವೆ ಎಂದು ಎಚ್ಚರಿಸಿದರು. ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ವಾಲ್ಮೀಕಿ ಭವನ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಂಗಾ ಮತಸ್ಥರನ್ನು ಎಸ್‌ಟಿಗೆ ಸೇರಿಸಲು ನನ್ನ ಸಹಮತ ಇದೆ. ಈ ವಿಷಯದಲ್ಲಿ ಸಮುದಾಯದ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು. ನಾನೂ ಕೈ ಜೋಡಿಸುತ್ತೇನೆ ಎಂದರು.

ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಸಮುದಾಯದ ಜನರು ನೆಮ್ಮದಿಯ ಬದುಕು ನಡೆಸಲು ಸರ್ಕಾರಗಳು ವಿಶೇಷ ಯೋಜನೆ ರೂಪಿಸಬೇಕು. ಗಂಗಾಮತಸ್ಥರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಗಂಗಾಮತಸ್ಥ (ಬೆಸ್ತರ)ರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ತಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಟಿ. ಬಾಲರಾಜು, ಉಪಾಧ್ಯಕ್ಷ ದೇವರಾಜು, ಖಜಾಂಚಿ ಹಾಲಪ್ಪ, ಪುರಸಭೆ ಸದಸ್ಯರಾದ ಗಂಜಾಂ ಶಿವು, ಎಸ್‌.ಟಿ. ರಾಜು, ಎಂ. ಶ್ರೀನಿವಾಸ್‌. ಮಾಜಿ ಅಧ್ಯಕ್ಷ ಎಲ್‌. ನಾಗರಾಜು, ಜಿ.ಪಂ. ಮಾಜಿ ಅಧ್ಯಕ್ಷ ಬಿ. ಲಿಂಗಯ್ಯ, ನಾರಾಯಣಪ್ಪ, ಶಿವರಾಜು, ರಮೇಶ್‌, ಗಾಮನಹಳ್ಳಿ ಪ್ರಕಾಶ್‌, ದಿನೇಶ್‌ ಇತರರು ಇದ್ದರು.

ಶ್ರೀರಂಗನಾಥಸ್ವಾಮಿ ದೇವಾಲಯದಿಂದ ಟಿಎಪಿಸಿಎಂಎಸ್‌ ಕಲ್ಯಾಣ ಮಂಟಪದ ವರೆಗೆ ಅಂಬಿಗರ ಚೌಡಯ್ಯ ಅವರ ಭಾವಚಿತ್ರವನ್ನು ಬೆಳ್ಳಿ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ಡೊಳ್ಳು ಕುಣಿತ, ವೀರಗಾಸೆ, ಪಟದ ಕುಣಿತ, ಕೋಲಾಟ, ಚರ್ಮ ವಾದ್ಯ ಕಲಾವಿದರು ಮೆರವಣಿಗೆಗೆ ಮೆರಗು ನೀಡಿದರು. ಪೂರ್ಣಕುಂಭ ಹೊತ್ತ ಮಹಿಳೆಯರು ಹೆಜ್ಜೆ ಹಾಕಿದರು. ತೆಪ್ಪದ ಮೇಲೆ ಕುಳಿತ ವ್ಯಕ್ತಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT