ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ| ವಾರ್ಡ್‌ಗೆ ಸಿಗದ ಅನುದಾನ: ಆಕ್ರೋಶ

ಶ್ರೀರಂಗಪಟ್ಟಣ: ಪುರಸಭೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರ ಅಸಮಾಧಾನ
Last Updated 23 ಫೆಬ್ರುವರಿ 2023, 4:31 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ನಗರೋತ್ಥಾನ ಯೋಜನೆಯ 4ನೇ ಹಂತದಲ್ಲಿ ಬಿಡುಗಡೆಯಾಗಿದ್ದ ₹ 5.45 ಕೋಟಿ ಅನುದಾನದಲ್ಲಿ ಕಾಂಗ್ರೆಸ್‌ ಸದಸ್ಯರ ವಾರ್ಡ್‌ಗಳಿಗೆ ಬಿಡಿಗಾಸೂ ನೀಡದೆ ಅನ್ಯಾಯ ಮಾಡಲಾಗಿದೆ’ ಎಂದು ಸದಸ್ಯರಾದ ಎಂ.ಎಲ್‌.ದಿನೇಶ್‌, ಎಸ್‌.ಎನ್‌.ದಯಾನಂದ್‌, ವಸಂತಕುಮಾರಿ ಲೋಕೇಶ್‌, ರಾಧಾ ಶ್ರೀಕಂಠು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯ ಆರಂಭದಲ್ಲೇ ಈ ವಿಷಯ ಪ್ರಸ್ತಾಪಿಸಿದರು. ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ಎದುರು ಪ್ರತಿಭಟಿಸಲು ಕಾಂಗ್ರೆಸ್‌ನ 8 ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಮುಂದಾದರು.‌ ಏಕೆ ಈ ತಾರತಮ್ಯ ಎಂದು ಪ್ರಶ್ನಿಸಿದರು.

ಆಡಳಿತಾರೂಢ ಜೆಡಿಎಸ್‌ ಸದಸ್ಯರು ತಮ್ಮ ವಾರ್ಡ್‌ಗಳಿಗೆ ₹ 5.45 ಕೋಟಿ ಅನುದಾನವನ್ನು ಹಂಚಿಕೊಂಡಿದ್ದೀರಿ. ಕಾಂಗ್ರೆಸ್‌ ಸದಸ್ಯರು ಮತ್ತು ಇಬ್ಬರು ಪಕ್ಷೇತರ ಸದಸ್ಯರ ವಾರ್ಡ್‌ಗಳ ಜನರಿಗೆ ದ್ರೋಹ ಬಗೆದಿದ್ದಾರೆ. ಕಾಂಗ್ರೆಸ್‌ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಲ್ಲಿ ಜೆಡಿಎಸ್‌ಗೆ ಮತ ನೀಡಿದ ಜನರಿಗೂ ಅನ್ಯಾಯ ಮಾಡಿದ್ದಾರೆ. ಇದು ವಂಚನೆ ಅಲ್ಲವೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಮತ್ತು ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಪಟ್ಟಣದ ಅಭಿವೃದ್ಧಿಗೆ ₹ 5.45 ಕೋಟಿ ಅನುದಾನ ಬಂದಿದೆ. ಕಾಂಗ್ರೆಸ್‌ ಸದಸ್ಯರು ಇರುವ ವಾರ್ಡ್‌ಗಳ ಜನರೂ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಾರೆ. ಈ ಪರಿಜ್ಞಾನ ಬೇಡವೆ? ನಿಮ್ಮನ್ನು ದಾರಿ ತಪ್ಪಿಸಿದವರು ಯಾರು? ಎಂದು ದಯಾನಂದ್‌ ಕೇಳಿದರು.

ಸದ್ಯ ಪುರಸಭೆಗೆ ₹ 4 ಕೋಟಿ ವಿಶೇಷ ಅನುದಾನ ಬಂದಿದೆ. ಈ ಅನುದಾನವನ್ನು ನಗರೋತ್ಥಾನ ಅನುದಾನದಿಂದ ವಂಚಿತವಾದ ವಾರ್ಡ್‌ಗಳಿಗೆ ನೀಡಬೇಕು. ಭರವಸೆ ನೀಡದಿದ್ದರೆ ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದು ಪಟ್ಟು ಹಿಡಿದರು.

ಹಿರಿಯ ಸದಸ್ಯ ಕೃಷ್ಣಪ್ಪ ಕಾಂಗ್ರೆಸ್‌ ಸದಸ್ಯರನ್ನು ಸಮಾಧಾನಪಡಿಸಿದರು. ಅನುದಾನ ಹಂಚಿಕೆ ಬಗ್ಗೆ ಇರುವ ಗೊಂದಲ ಪರಿಹರಿಸಲು ಎರಡೂ ಕಡೆಯ ಹಿರಿಯ ಸದಸ್ಯರು ಚರ್ಚಿಸಿ ಕ್ರಿಯಾ ಯೋಜನೆ ರೂಪಿಸೋಣ ಎಂದು ಕೃಷ್ಣಪ್ಪ ತಿಳಿಸಿದರು.

ಪಟ್ಟಣದಲ್ಲಿ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಸಂಜೆ ವೇಳೆ ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ ಎಂದು ಸದಸ್ಯೆ ಪಾರ್ವತಿ ಸಮಸ್ಯೆ ತೋಡಿಕೊಂಡರು.

6ನೇ ವಾರ್ಡ್‌ಗೆ ಸಮರ್ಪಕವಾದ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮ ವಹಿಸಿ ಎಂದು ಪಕ್ಷೇತರ ಸದಸ್ಯ ಎಸ್‌. ನಂದೀಶ್‌ ಮನವಿ ಮಾಡಿದರು. ಅಂಗಡಿ, ಹೋಟೆಲ್‌ಗಳ ಬಾಕಿ ತೆರಿಗೆಯನ್ನು ವಸೂಲಿ ಮಾಡಿ ಎಂದು ಸದಸ್ಯರಾದ ಎಸ್‌.ಟಿ.ರಾಜು, ಶ್ರೀನಿವಾಸ್‌ ಸೂಚಿಸಿದರು.

ಪಟ್ಟಣದ 14ನೇ ವಾರ್ಡ್‌ನ ಬೋವಿ ಕಾಲೊನಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ನಿರ್ಮಿಸಿರುವ ಮನೆಗಳು ಶಿಥಿಲವಾಗಿದ್ದು, ದುರಸ್ತಿಗೆಕ್ರಮ ವಹಿಸಲು ಸಭೆ ಒಪ್ಪಿಗೆ ನೀಡಿತು. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಬೂದಿಗುಂಡಿ ಕೊಳಚೆ ಪ್ರದೇಶ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸಭೆ ಒಪ್ಪಿಗೆ ಸೂಚಿಸಿತು. ಕಾವೇರಿ ಸಂಗಮದಲ್ಲಿ ವಾಹನಗಳ ಪಾರ್ಕಿಂಗ್‌ ಶುಲ್ಕ ವಸೂಲಿ ಅವಧಿ ವಿಸ್ತರಿಸುವ ಪ್ರಸ್ತಾವವನ್ನು ಸಭೆ ಅನುಮೋದಿಸಿತು.

ಪುರಸಭೆ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ನರಸಿಂಹೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಲಿಂಗರಾಜು, ಮುಖ್ಯಾಧಿಕಾರಿ ಸಂದೀಪ್‌, ಸದಸ್ಯರಾದ ಗಂಜಾಂ ಶಿವು, ವನಿತಾ, ಚೈತ್ರ, ರವಿಕುಮಾರ್‌, ಪ್ರಕಾಶ್‌, ರಾಮಕೃಷ್ಣ, ಪುಟ್ಟರಾಮು, ವಿಶ್ವನಾಥ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT