ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾ ಕುಣಿತದ ಪ್ರವೀಣ ಎಸ್‌. ಸುನಿಲ್ ಕುಮಾರ್

ಗ್ರಾಮೀಣ ಭಾಗದ ಕಲಾವಿದ, ಉತ್ಸವಗಳಲ್ಲಿ ಪ್ರದರ್ಶನ
Last Updated 7 ಮೇ 2019, 19:59 IST
ಅಕ್ಷರ ಗಾತ್ರ

ಕೆರಗೋಡು: ಕಲೆ ಯಾರ ಸ್ವತ್ತೂ ಅಲ್ಲ, ಪ್ರತಿಭೆ ಇದ್ದವರನ್ನು ಅಪ್ಪುತ್ತದೆ. ಹಾಗೆಯೇ ಶ್ರಮ ವಹಿಸಿ ಕಲಿತರೆ ಫಲಶತಸಿದ್ಧ ಎನ್ನುವಂತೆ ಜನಪದ ಕುಣಿತದ ಪಟ್ಟುಗಳನ್ನು ಪರಿಶ್ರಮದಿಂದ ಕಲಿತು ವಿವಿಧೆಡೆ ಪ್ರದರ್ಶನ ನೀಡಿ ಉತ್ತಮ ಹೆಸರು ಮಾಡಿದ್ದಾರೆ ಮಂಡ್ಯ ತಾಲ್ಲೂಕಿನ ಸಂತೆಕಸಲಗೆರೆ ಗ್ರಾಮದ ಯುವಕ ಎಸ್. ಸುನಿಲ್‌ ಕುಮಾರ್.

ಸುನಿಲ್‌ ಅವರಿಗೆ ತನ್ನ 13ನೇ ವಯಸ್ಸಿನಲ್ಲೇ ಜನಪದ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿತು. ಸೋದರ ಮಾವ ದೇವೇಗೌಡ ಪ್ರದರ್ಶಿಸುತ್ತಿದ್ದ ಪೂಜಾ ಕುಣಿತದ ವರಸೆ, ಸುತ್ತಮುತ್ತಲ ಗ್ರಾಮಗಳಲ್ಲಿ ನಡೆಯುತ್ತಿದ್ದ ಹಬ್ಬಗಳಲ್ಲಿ ಬಾರಿಸುತ್ತಿದ್ದ ತಮಟೆ, ನಗಾರಿ, ತಾರಸಿಗಳ ಕಿವಿಗಡಚಿಕ್ಕುವ ಸದ್ದಿಗೆ, ಜನರು ಕುಣಿಯುತ್ತಿದ್ದ ರಂಗದ ಕುಣಿತದ ಹೆಜ್ಜೆಗೆ ಮನಸೋತ ಸುನಿಲ್ ತಾನೂ ತಮಟೆ ಸದ್ದು ನೆನೆದು ನಿಂತಲ್ಲಿಯೇ ಹೆಜ್ಜೆ ಹಾಕಲು ನಿರತರಾದರು.

ಬಳಿಕ ಕಾರಸವಾಡಿಯ ಶಂಕರ್ ಅವರನ್ನು ಭೇಟಿ ಮಾಡಿದ ಸುನಿಲ್‌, ಕಲೆಯಲ್ಲಿರುವ ಆಸಕ್ತಿ ಬಗ್ಗೆ ತಿಳಿಸಿ, ಅವರ ಜತೆ ಸೇರಿದರು. ಶಂಕರ್ ಅವರು ಸುನಿಲ್‌ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಜತೆಗೆ ಹಲವಾರು ಕಡೆ ಕಾರ್ಯಕ್ರಮಕ್ಕೆ ಕರೆದೊಯ್ದು ವೇದಿಕೆ ಒದಗಿಸಿಕೊಟ್ಟರು. ಇದೇ ಉತ್ತಮ ಅವಕಾಶ ಎಂದರಿತ ಸುನಿಲ್ ಶ್ರಮಪಟ್ಟು ಒಂದೆರಡು ವರ್ಷಗಳಲ್ಲಿಯೇ ಉತ್ತಮ ಕಲಿಕೆ ಹಾಗೂ ತನ್ನ ಪ್ರದರ್ಶನದಲ್ಲಿದ್ದ ಓರೆಕೋರೆಗಳನ್ನು ಅರಿತು, ಪರಿಹಾರ ಕಂಡುಕೊಂಡು ಸಮರ್ಥ ಪೂಜಾ ಕುಣಿತದ ಪಟುವಾಗಿ ಬೆಳೆದರು.

ಇವರ ಪೂಜಾ ಕುಣಿತ ಪ್ರದರ್ಶನವನ್ನು ನೋಡುವುದೇ ಚೆಂದ. ಏಣಿ, ಮಡಕೆ ಹಾಗೂ ಲೋಟಗಳ ಮೇಲೆ ಚಲಿಸಿ ತಲೆಯ ಮೇಲೆ ಪಟ ಹೊತ್ತು ನೃತ್ಯ ಮಾಡುತ್ತಾ ಗಮನ ಸೆಳೆಯುತ್ತಾರೆ. ಒಮ್ಮೆ ತಮಟೆ ಬಾರಿಸುತ್ತಾ ನೃತ್ಯ ಪ್ರದರ್ಶಿಸಿದರೆ, ಮಗದೊಮ್ಮೆ ಹಲ್ಲಿನಲ್ಲಿ ಪಟ ಕಚ್ಚಿಕೊಂಡು ಕುಣಿಯುತ್ತಾರೆ. ಇನ್ನೊಮ್ಮೆ ಇಬ್ಬರೂ ಕಲಾವಿದರನ್ನು ಕಂಕುಳಲ್ಲಿ ಹಿಡಿದು ತಮಟೆ ಸದ್ದಿಗೆ ಕುಣಿದು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುತ್ತಾರೆ.

ಕಲೆಯನ್ನೇ ಉಸಿರಾಗಿಸಿಕೊಂಡು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ, ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ಈ ಸಂದರ್ಭದಲ್ಲಿ ನೆರವಾದದ್ದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಸುಗ್ಗಿ– ಹುಗ್ಗಿ, ಹೊರನಾಡು ಉತ್ಸವ, ಮೈಸೂರು ದಸರಾ ಮಹೋತ್ಸವ, ಕರಾವಳಿ ಕಲೋತ್ಸವ, ಜಾನಪದ ಜಾತ್ರೆ, ಸಂಸ್ಕೃತಿ ಕುಂಭ– ಮಲೆನಾಡ ಉತ್ಸವ, ಪುರಂದರದಾಸರ ಆರಾಧನೋತ್ಸವ, ಕಲಾ ಪ್ರತಿಭೋತ್ಸವ, ಜಾನಪದ ಸಂಭ್ರಮ, ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಕ್ಕಿದೆ.

ದೇಶದ ವಿವಿಧೆಡೆ ಪ್ರದರ್ಶನ

ರಾಜ್ಯದ ಉದ್ದಗಲಕ್ಕೂ ಸಂಚರಿಸಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿರುವ ಇವರು ದೆಹಲಿ, ಮುಂಬೈ, ವಾರಾಣಸಿ, ಅಮೃತಸರ ಮತ್ತು ಜಮ್ಮು ಕಾಶ್ಮೀರದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಪೂಜಾ ಕುಣಿತ, ಡೊಳ್ಳುಕುಣಿತ, ತಮಟೆ ವಾದ್ಯ, ಪಟಕುಣಿತ, ಕಂಸಾಳೆ, ಕೊಂಬುಕಹಳೆ ಮತ್ತು ಕೋಲಾಟಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ಇದೀಗ ತಾನೇ 20 ಸದಸ್ಯರನ್ನು ಒಳಗೊಂಡ ಒಂದು ತಂಡ ರಚಿಸಿ, ವಿವಿಧ ಕಡೆ ಪ್ರದರ್ಶನ ನೀಡುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT