ಮಂಗಳವಾರ, ಏಪ್ರಿಲ್ 7, 2020
19 °C
ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗದಲ್ಲಿ ಉಪನ್ಯಾಸರಾಗಿ ಸೇವೆ

ಮಾಸ್ಟರ್ಸ್‌ ಅಥ್ಲೆಟಿಕ್ಸ್‌ಗೆ ಶ್ರೀರಂಗಪಟ್ಟಣದ ಸಿ.ಟಿ.ದೇವರಾಜು

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಚಂದಗಿರಿಕೊಪ್ಪಲು ಗ್ರಾಮದ ಪ್ರತಿಭಾವಂತ ಕ್ರೀಡಾಳು ಸಿ.ಟಿ. ದೇವರಾಜು ತಮ್ಮ ಪರಿಶ್ರಮದಿಂದಲೇ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.

ಮೈಸೂರು ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ದೇವರಾಜು ಬರುವ ನ.5ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ‘ಮಾಸ್ಟರ್ಸ್‌ ಅಥ್ಲೆಟಿಕ್ಸ್‌’ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. 400 ಮೀಟರ್‌ ಹರ್ಡಲ್ಸ್‌, ಟ್ರಿಪಲ್‌ ಜಂಪ್‌ ಮತ್ತು ಎತ್ತರ ಜಿಗಿತ ಸ್ಪರ್ಧೆಗಳಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ನಡೆದ ಅಂತರರಾಷ್ಟ್ರೀಯ ಮಾಸ್ಟರ್‌ ಅಥ್ಲೆಟಿಕ್ಸ್‌ನ ಎತ್ತರ ಜಿಗಿತದಲ್ಲಿ ದ್ವಿತೀಯ, ಟ್ರಿಪಲ್‌ ಜಂಪ್‌ನಲ್ಲಿ ದ್ವಿತೀಯ ಹಾಗೂ 400 ಮೀಟರ್‌ ಹರ್ಡಲ್ಸ್‌ನಲ್ಲಿ ಕಂಚು ಗೆದ್ದಿದ್ದರು.

ಬೆಳೆವ ಸಿರಿ ಮೊಳಕೆಯಲ್ಲಿ: ಸಿ.ಟಿ. ದೇವರಾಜು ಪ್ರೌಢಶಾಲೆಯಲ್ಲಿ ಇದ್ದಾಗಲೇ ಜಿಲ್ಲಾ ಮತ್ತು ರಾಜ್ಯ ಮಟ್ಟದ ಆಟೋಟ ಸ್ಪರ್ಧೆಗಳಲ್ಲಿ ಗಮನ ಸೆಳೆದಿದ್ದರು. ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಎಂ.ಶೆಟ್ಟಹಳ್ಳಿಯಲ್ಲಿ ಪ್ರೌಢಶಾಲೆ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಪಿಯು ಮುಗಿಸಿದರು. ಪಿಯುಸಿ ಓದುವಾಗ ಲಾಂಗ್‌ ಜಂಪ್‌, ಹೈ ಜಂಪ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕ ಗೆದ್ದಿದ್ದರು. ಮಹಾರಾಜ ಕಾಲೇಜಿನಲ್ಲಿ ಪದವಿ ಓದುವಾಗ ಎರಡು ವರ್ಷ ಕಾಲೇಜಿನ ಕಬಡ್ಡಿ ತಂಡದ ನಾಯಕರಾಗಿದ್ದರು. ಬಿ.ಪಿಎಡ್‌, ಎಂಪಿಎಡ್‌ ಮತ್ತು ಮಾನಸ ಗಂಗೋತ್ರಿಯಲ್ಲಿ ಎಂ.ಎ (ಇತಿಹಾಸ) ಓದುವಾಗಲೂ ಮೈಸೂರು ವಿವಿ ಕಬಡ್ಡಿ ತಂಡದ ನಾಯಕರಾಗಿ ಹೆಸರು ಮಾಡಿದ್ದರು. ಎಂ.ಪಿ.ಎಡ್‌ ಓದುವಾಗ ಡೆಕಥ್ಲಾನ್‌ (10 ಕ್ರೀಡಾ ಚಟುವಟಿಕೆಗಳ ಗುಂಪು) ಮೈಸೂರು ವಿವಿಯನ್ನು ಪ್ರತಿನಿಧಿಸಿದ್ದುದು ಇವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.

ತಮಿಳುನಾಡಿನಲ್ಲಿ 2016ರಲ್ಲಿ ನಡೆದ ಮಾಸ್ಟರ್‌ ಆಫ್‌ ಅಥ್ಲೆಟಿಕ್ಸ್‌ ಮೀಟ್‌ನಲ್ಲಿ ಪೋಲೋ ವಾಲ್ಟ್‌ನಲ್ಲಿ ಪಾಲ್ಗೊಂಡಿದ್ದ ದೇವರಾಜು 4ನೇ ಸ್ಥಾನ ಪಡೆದಿದ್ದರು. ಮಂಗಳೂರಿನಲ್ಲಿ 2019ರಲ್ಲಿ ನಡೆದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಹೈ ಜಂಪ್‌ನಲ್ಲಿ ಪ್ರಥಮ, ಲಾಂಗ್‌ ಜಂಪ್‌ನಲ್ಲಿ ದ್ವಿತೀಯ ಹಾಗೂ ಹರ್ಡಲ್ಸ್‌ ದ್ವಿತೀಯ ಸ್ಥಾನ ಗಳಿಸಿದ್ದರು. ಮಾಸ್ಟರ್‌ ಅಥ್ಲೆಟಿಕ್ಸ್‌ ಕೂಟದಲ್ಲಿ ಎರಡು ಬಾರಿ ರಾಜ್ಯವನ್ನು ಪ್ರತಿನಿಧಿಸಿ ವಿವಿಧ ಪದಕಗಳನ್ನು ಕೊರಳಿಗೇರಿಸಿಕೊಂಡ ಕೀರ್ತಿ ಇವರದ್ದು.

ನನಗೆ ಚಿಕ್ಕಂದಿನಿಂದಲ ಕ್ರೀಡೆ ಎಂದರೆ ಪಂಚಪ್ರಾಣ. ಆ ಕಾರಣಕ್ಕೆ ಬಿ.ಪಿ.ಎಡ್‌, ಎಂ.ಪಿ.ಎಡ್‌ ಮತ್ತು ಕಬಡ್ಡಿಯಲ್ಲಿ ಪಿಎಚ್‌ಡಿ ಮಾಡಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮಾಸ್ಟರ್‌ ಅಥ್ಲೆಟಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ನಿಜಕ್ಕೂ ಸಂತಸ ಉಂಟುಮಾಡಿದೆ ಎಂದು ದೇವರಾಜು ಹರ್ಷ ವ್ಯಕ್ತಪಡಿಸುತ್ತಾರೆ.

ಕಬಡ್ಡಿ ವಿಷಯದಲ್ಲಿ ಪಿಎಚ್‌.ಡಿ

ಸಿ.ಟಿ.ದೇವರಾಜು ಕಬಡ್ಡಿಯಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಡಾ.ಸಿ. ವೆಂಕಟೇಶ್‌ ಅವರ ಮಾರ್ಗದರ್ಶನದಲ್ಲಿ ‘ರಿಲೇಷನ್‌ಷಿಪ್‌ ಆಫ್‌ ಸೆಲೆಕ್ಟೆಡ್‌ ಮೋಟಾರ್‌ ಫಿಟ್ನೆಸ್‌ ಅಂಡ್‌ ಆಂತ್ರೋಪೊರಮೆಟ್ರಿಕ್‌ ವೇರಿಯೇಬಲ್ಸ್‌ ಹೈಸ್ಕೂಲ್‌ ಬಾಯ್ಸ್‌ ಕಬಡ್ಡಿ ಪ್ಲೇಯರ್ಸ್‌’ ಎಂಬ ಪ್ರಬಂಧವನ್ನು ಮೈಸೂರು ವಿವಿಯಲ್ಲಿ ಮಂಡಿಸಿ ಪಿಎಚ್‌.ಡಿ ಪಡೆದಿದ್ದಾರೆ. ಜತೆಗೆ ತಮಿಳುನಾಡಿನ ಸೇಲಂನ ವಿನಾಯಕ ಮಿಷನ್‌ ವಿವಿಯಿಂದ 2008ರಲ್ಲಿ ಎಂ.ಫಿಲ್‌ ಪದವಿ ಕೂಡ ಗಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು