ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ಶುಲ್ಕ ವಸೂಲಿ: ಖಾಸಗಿ ಆಸ್ಪತ್ರೆಗಳ ಹಗಲು ದರೋಡೆ

ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರದ ವರದಿ
Last Updated 20 ಫೆಬ್ರುವರಿ 2018, 19:29 IST
ಅಕ್ಷರ ಗಾತ್ರ

ನವದೆಹಲಿ: ಚಿಕಿತ್ಸೆ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಸುಲಿಗೆ ಮಾಡಿರುವುದನ್ನು ಕೇಂದ್ರ ಸರ್ಕಾರದ ಸಂಸ್ಥೆ ಪತ್ತೆ ಹಚ್ಚಿದೆ.

ಔಷಧ, ವೈದ್ಯಕೀಯ ಸಲಕರಣೆಗಳಿಗಾಗಿ ಅಸಹಾಯಕ ರೋಗಿಗಳಿಂದ ಶೇ 1,192 ರಷ್ಟು ಹೆಚ್ಚಿಗೆ ಹಣವನ್ನು ಖಾಸಗಿ ಆಸ್ಪತ್ರೆಗಳು ಲೂಟಿ ಮಾಡಿವೆ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್‌ಪಿಪಿಎ) ವರದಿ ಹೇಳಿದೆ.

ಚಿಕಿತ್ಸೆಯ ನೆಪದಲ್ಲಿ ರೋಗಿಗಳಿಂದ ಹಣ ಲೂಟಿ ಮಾಡುತ್ತಿವೆ ಎಂದು  ದೆಹಲಿ ಹಾಗೂ ಸುತ್ತಮುತ್ತಲಿನ ನಾಲ್ಕು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ವಿರುದ್ಧ ಎನ್‌ಪಿಪಿಎ ದೂರು ಬಂದಿದ್ದವು.

ಬಿಲ್‌ಗಳ ಪರಿಶೀಲನೆ ಬಳಿಕ ಎನ್‌ಪಿಪಿಎ 20 ಪುಟಗಳ ವರದಿ ಬಿಡುಗಡೆ ಮಾಡಿದೆ.  ರೋಗಿಗಳ ದೂರಿನಲ್ಲಿ ಸತ್ಯಾಂಶ ಇದೆ ಎಂದಿದೆ.

ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಉತ್ಪಾದಕರಿಗಿಂತ ಖಾಸಗಿ ಆಸ್ಪತ್ರೆಗಳೇ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟಿದೆ.

ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಸ್ವಂತ ಫಾರ್ಮಸಿ ಹೊಂದಿದ್ದು, ಉತ್ಪಾದಕರಿಂದ ಅಗ್ಗದ ದರದಲ್ಲಿ ಔಷಧ ಖರೀದಿಸುತ್ತವೆ. ರೋಗಿಗಳಿಂದ ಹಲವು ಪಟ್ಟು ಹೆಚ್ಚಿನ ಹಣ ಲೂಟಿ ಮಾಡುತ್ತಿವೆ. ಔಷಧಗಳನ್ನು ಗರಿಷ್ಠ ಮಾರಾಟ ಬೆಲೆಗೆ ಮಾರಾಟ ಮಾಡಿದರೂ ಹಲವು ಪಟ್ಟು ಲಾಭಕ್ಕೆ ತೊಂದರೆಯಿಲ್ಲ ಎಂದು ಹೇಳಿದೆ.

ಅನೈತಿಕ ಲಾಭದ ಗಣಿ: ಒಮ್ಮೆ ಮಾತ್ರ ಬಳಸುವ ಸಿರಿಂಜ್‌ಗಳಲ್ಲಿ ಶೇ 1300–1700ರಷ್ಟು, ಗ್ಲುಕೋಸ್‌ ನೀಡಲು ಬಳಸುವ ಐ.ವಿ ಸೆಟ್‌ಗಳಲ್ಲಿ ಶೇ 2000ಕ್ಕಿಂತ ಹೆಚ್ಚು ಮತ್ತು ಔಷಧಗಳಲ್ಲಿ ಶೇ 600ರಷ್ಟು ಲಾಭ ಮಾಡಿಕೊಳ್ಳುತ್ತಿವೆ.

ತಯಾರಕರು ಐ.ವಿ ಸೆಟ್‌ಗಳನ್ನು ವಿತಕರಿಗೆ ₹5.20 ಮತ್ತು ಆಸ್ಪತ್ರೆಗಳಿಗೆ ₹8.39ಕ್ಕೆ ಮಾರಾಟ ಮಾಡುತ್ತಾರೆ. ಅದೇ ಐ.ವಿ ಸೆಟ್‌ಗಳಿಗೆ ಆಸ್ಪತ್ರೆಗಳು ರೋಗಿಗಳಿಗೆ ₹115 ವಿಧಿಸುತ್ತವೆ. ಅಂದರೆ, ಶೇ 2,112ರಷ್ಟು ಲಾಭ ಮಾಡಿಕೊಳ್ಳುತ್ತವೆ.

ಅದೇ ರೀತಿ ಒಮ್ಮೆ ಮಾತ್ರ ಬಳಸುವ ಸಿರಿಂಜ್‌ಗಳಲ್ಲಿ ಶೇ 1,286 ರಿಂದ ಶೇ 1,697ರವರೆಗೆ ಹೆಚ್ಚಿನ ದುಡ್ಡು ವಸೂಲು ಮಾಡುತ್ತವೆ. ಮೂತ್ರ ನಳಿಕೆ, ತೂರು ನಳಿಕೆ, ಮೂರು ವಾಲ್ವ್‌ ನಳಿಕೆಯಲ್ಲಿ ಶೇ 1700ರಷ್ಟು, ಶಸ್ತ್ರಚಿಕಿತ್ಸೆಗೆ ಬಳಸುವ ರಬ್ಬರ್‌ನ ಕೈಗವಸಿನಲ್ಲಿ ಶೇ 661, ಬ್ಯಾಂಡೇಜ್‌ಗಳಲ್ಲಿ ಶೇ 625ರಷ್ಟು ಲಾಭ ಗಳಿಸುತ್ತವೆ.

ಎಲ್ಲಿ, ಎಷ್ಟು ಲಾಭ?

ಅಡ್ರೆನಾರ್‌ ಇಂಜೆಕ್ಷನ್‌: ಶೇ 1,293

ಎಮ್‌ಟಿಗ್‌ ಇಂಜೆಕ್ಷನ್‌: ಶೇ 1,125

ಟ್ರೆಯೊನಮ್‌ ಇಂಜೆಕ್ಷನ್‌: ಶೇ 930

ಅಮ್ಲಿಪ್‌ ಮಾತ್ರೆ: ಶೇ 438

ಸಾಮಾನ್ಯ ದ್ರಾವಣ (ಸಲೈನ್‌): ಶೇ 680

ಐ.ವಿ ಕ್ಯಾನುಲಾ:  ಶೇ 249

ಇ.ಸಿ.ಜಿ ಎಲೆಕ್ಟ್ರೋಡ್‌:  ಶೇ 740

ಇಂಜೆಕ್ಷನ್‌ ನಂತರ ಬಳಸುವ ಹತ್ತಿ:  ಶೇ 344

ಪ್ಯಾನ್‌ಸ್ಲೇವ್‌ ಮಾತ್ರೆ:  ಶೇ 293

ಮೆರೋಪೆನೆಮ್‌ ಮಾತ್ರೆ:  ಶೇ 801

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT