ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಿರಮ್ಮಣ್ಣಿ ಆರಾಧ್ಯ ದೈವ ಕೆಂಕೇರಮ್ಮ

ಮಾದಾಪುರದಲ್ಲಿವೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಲವು ದೇವಾಲಯಗಳು
Last Updated 12 ಮೇ 2019, 6:24 IST
ಅಕ್ಷರ ಗಾತ್ರ

ಕಿಕ್ಕೇರಿ: ಮಂಡ್ಯ ಜಿಲ್ಲೆಯ ಗಡಿ ಕಿಕ್ಕೇರಿ ಹೋಬಳಿ ತುದಿಯ ಮಾದಾಪುರ ಗ್ರಾಮ ಹಲವು ವೈಶಿಷ್ಟ್ಯಗಳ ತವರೂರು. ಅಗ್ರಹಾರವಾಗಿದ್ದ ಗ್ರಾಮದಲ್ಲಿ ಹಲವು ದೇವಾಲಯಗಳಿದ್ದು, ಐತಿಹಾಸಿಕ ಹಿನ್ನೆಲೆ ಹೊಂದಿವೆ.

ಗ್ರಾಮದಲ್ಲಿ ಸದಾ ಪೂಜಾರಾಧನೆ ನಡೆಯುವ ಪ್ರತೀಕವಾಗಿ ಕೆಂಕೇರಮ್ಮ, ತ್ರಯಂಭಕೇಶ್ವರ, ಮಹಾಲಿಂಗೇಶ್ವರ, ಚನ್ನಕೇಶವ, ವೀರಭದ್ರೇಶ್ವರ, ಆಂಜನೇಯ ದೇಗುಲ, ಸನ್ಯಾಸಿ ಮಂಟಪ, ಈಶ್ವರ ದೇವಾಲಯ, ಮಾರಮ್ಮ ದೇವಾಲಯ, ಸಿಂಗಮ್ಮ ದೇವಾಲಯ, ರಾಮೇಶ್ವರ ದೇವಾಲಯ ಸೇರಿದಂತೆ ಹಲವು ದೇಗುಲಗಳಿದ್ದು, ಪಶ್ಚಿಮವಾಹಿನಿಯಾಗಿ ಹೇಮಾವತಿ ನದಿ ಪ್ರಕೃತಿದತ್ತವಾಗಿ ಹರಿಯುತ್ತಿರುವುದು ವಿಶೇಷವಾಗಿದೆ.

350 ವರ್ಷಗಳ ಇತಿಹಾಸವಿರುವ ಕೆಂಕೇರಮ್ಮ ದೇಗುಲಕ್ಕೆ ಭಕ್ತಿ ಶಕ್ತಿಯ ಮಹಿಮೆ ಇದೆ. ಇಲ್ಲಿ ಬಲು ಹಿಂದೆ ಕೆಂಕೆರೆ ಎಂಬ ಕೆರೆ ಇತ್ತು. ಕೆರೆಯ ನೀರು ಕೆಂಪು ಬಣ್ಣದಿಂದ ಕೂಡಿದ್ದು, ನೋಡುಗರ ಗಮನ ಸೆಳೆಯುತ್ತಿತ್ತು. ವಿಪ್ರ ಸಾತ್ವಿಕರು ಅಗ್ರಹಾರದಲ್ಲಿ ಸಂಧ್ಯಾವಂದನೆ ಮಾಡುತ್ತಿದ್ದರು. ಒಬ್ಬರು ಕೆರೆಯ ದಂಡೆಯ ಕಲ್ಲಿನ ಮೇಲೆ ಕುಳಿತು ಸಂಧ್ಯಾ ವಂದನೆ ಮಾಡುತ್ತಿದ್ದರು. ದೇವಿಯ ಅಶರೀರವಾಣಿ ಕನಸಿನಲ್ಲಿ ಬಂದು ‘ಸಂಧ್ಯಾವಂದನೆಯಲ್ಲಿ ನಿತ್ಯವೂ ನಾನು ತುಳಿಯುತ್ತಿರುವೆ, ನನಗೆ ನೆಲೆಯೊಂದು ಕಲ್ಪಿಸು’ ಎಂದು ಹೇಳಿತು. ಮರುದಿನ ಅವರು ಕೆರೆಯ ದಂಡೆಯಲ್ಲಿದ್ದ ಕಲ್ಲನ್ನು ಮಗುಚಿ ನೋಡಿದಾಗ ಕೃಷ್ಣಶಿಲೆಯ ಸುಂದರ ದೇವಿಯ ಮೂರ್ತಿ ಇರುವುದು ಕಂಡು ಬಂದಿತು. ದೇವಿಯಆಣತಿಯಂತೆ ಗುಡಿಯನ್ನು ನಿರ್ಮಿಸಿ ಪೂಜಿಸಲು ಆರಂಭಿಸಿದರು.

ತತ್ಪರಿಣಾಮ ಗ್ರಾಮದಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ಮೂಡುವಂತಾ ಯಿತು. ಗ್ರಾಮದ ಮಗಳು, ಮೈಸೂರು ಸಾಮ್ರಾಜ್ಯದ ಮಹಾರಾಣಿ ದೇವಿರಮ್ಮಣ್ಣಿ ಗ್ರಾಮದ ದೇವಿಯ ಮಹಿಮೆಯನ್ನು ಅರಿತು ಪೂಜಾ ಕೈಂಕರ್ಯವನ್ನು ಸದಾ ಮಾಡುತ್ತಿದ್ದರು. ಮಹಾರಾಜರ ಪರ್ಯಟನೆ ಸಮಯದಲ್ಲಿ ಗ್ರಾಮಕ್ಕೆ ಬಂದು ದೇವಿರಮ್ಮಣ್ಣಿಯನ್ನು ವರಿಸಿದರು. ದೇವಿರಮ್ಮಣ್ಣಿಯವರು ದೇವಿಯ ದೇಗುಲ ಪೂಜಾರಾಧನೆಗೆ ಸಾಕಷ್ಟು ದತ್ತಿಯಾಗಿ ನೂರಾರು ಎಕರೆ ಭೂಮಿ ಕೂಡ ನೀಡಿದ್ದಾರೆ. ಆದರೆ, ಈಗ ಆ ಭೂಮಿ ಪ್ರಭಾವಿಗಳ ಪಾಲಾಗಿದೆ.

ಗುಡಿಯ ಮುಂಭಾಗದಲ್ಲಿ ಅಶ್ವತ್ಥವೃಕ್ಷ ಕಟ್ಟೆ ಇದ್ದು ನಂಬುಗೆಯಿಂದ ಪೂಜಿಸಿದ್ದಲ್ಲಿ ಇಷ್ಟಾರ್ಥ ಸಿದ್ಧಿ, ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ದೀಪಾವಳಿಯ ಅಮಾವ್ಯಾಸೆಯಂದು ದೇವಿಯ ಜಾತ್ರೆ ನಡೆಯುತ್ತದೆ. ಹೋಮ, ಹವನ, ಅಭಿಷೇಕಾದಿಗಳು, ದೇವಿಯ ಮೆರವಣಿಗೆ ನಡೆಯಲಿದೆ ಏಳು ಗ್ರಾಮಗಳಿಂದ ಬರುವ ಸಿಡಿ ರಥದ ಜಾತ್ರೆ ಕಣ್ಮನ ಸೆಳೆಯುತ್ತದೆ.

ಹೊರ ರಾಜ್ಯಗಳಿಂದಲೂ ದೇವಿಗೆ ಭಕ್ತರಿದ್ದಾರೆ. ಜೊತೆಗೆ ಅಮೆರಿಕ, ಸಿಂಗಾಪುರ, ಲಂಡನ್, ಮಸ್ಕತ್‌, ಆಸ್ಟ್ರೇಲಿಯಾ, ಸೌದಿಯಲ್ಲಿ ನೆಲೆಸಿರುವ ದೇವರ ಒಕ್ಕಲಿನವರು ಇಲ್ಲಿಗೆ ಬರುತ್ತಾರೆ.

ಈ ಮಾರ್ಗದಲ್ಲಿ ಬನ್ನಿ

ಕಿಕ್ಕೇರಿಯಿಂದ ಗೋವಿಂದ ನಹಳ್ಳಿಯ ಪಂಚಲಿಂಗೇಶ್ವರ ದೇಗುಲದ ಮಾರ್ಗವಾಗಿ 13 ಕಿ.ಮೀ. ಅಂತರವಿದ್ದು, ಬಸ್ ಸೌಕರ್ಯವಿದೆ. ಚನ್ನರಾಯ ಪಟ್ಟಣ ಮಾರ್ಗವಾಗಿ 15 ಕಿ.ಮೀ ದೂರದಲ್ಲಿದ್ದು, ಶ್ರೀನಿವಾಸಪುರ ಮಾರ್ಗವಾಗಿ ಬರಬಹುದಾಗಿದೆ. ಹೊಳೆನರಸೀಪುರದಿಂದ 15 ಕಿ.ಮೀ. ಇದ್ದು, ಹಿಪ್ಪೇವು ಗ್ರಾಮದ ಮಾರ್ಗವಾಗಿ ಬರಬಹುದು. ಮಂದಗೆರೆ ರೈಲು ನಿಲ್ದಾಣದಿಂದ 10 ಕಿ.ಮೀ. ಅಂತರವಿದ್ದು, ಕೋಟಹಳ್ಳಿ ಮಾರ್ಗವಾಗಿ ಬರಬಹುದು.

‌ದೇವಾಲಯ ಜೀರ್ಣೋದ್ಧಾರಗೊಳಿಸಿ

ಗ್ರಾಮದ ಹೊರವಲಯದಲ್ಲಿ ಹೇಮಾವತಿ ನದಿಯ ದಂಡೆಯಲ್ಲಿ ಅಪರಕರ್ಮ ಕ್ರಿಯೆಗೆ ಪ್ರಶಸ್ತವಾದ ಸುಂದರ ಕಲ್ಲಿನ ಸನ್ಯಾಸಿ ಮಂಟಪವಿದೆ. ಅದು ಜೀರ್ಣೋದ್ಧಾರಗೊಳ್ಳಬೇಕಾಗಿದೆ. ಗ್ರಾಮದ ಉತ್ತರ ಭಾಗದ ಪಶ್ಚಿಮವಾಹಿನಿಯ ಬಳಿ ಇರುವ ರಾಮೇಶ್ವರ ದೇಗುಲ, ಗೋವಿನಕಲ್ಲು ಪ್ರಕೃತಿಯ ಸುಂದರ ಮಡಿಲಿನಲ್ಲಿದ್ದು, ಪ್ರವಾಸಿ ತಾಣದಂತಿದೆ. ಪ್ರವಾಸೋದ್ಯಮ ಇಲಾಖೆ ಈ ತಾಣವನ್ನು ಅಭಿವೃದ್ಧಿಗೊಳಿಸಬೇಕು ಎಂದು ಕೆಂಕೇರಮ್ಮ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಮಾದಾಪುರ ಸುಬ್ಬಣ್ಣ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT