ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಳೆಯುತ್ತಿದೆ ದೇವೀರಮ್ಮಣ್ಣಿ ಕೆರೆ

ತುಂಬಿದ ಐತಿಹಾಸಿಕ ಕೆರೆ, ಕೆರೆ ಕೋಡಿಯಲ್ಲಿ ಮನಸೆಳೆಯುವ ಜಲಪಾತ
Last Updated 28 ಸೆಪ್ಟೆಂಬರ್ 2019, 14:02 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಪಟ್ಟಣದ ಪ್ರಸಿದ್ಧ ದೇವೀರಮ್ಮಣ್ಣಿ ಕೆರೆಯ ಏರಿ ಮೇಲೆ ನೀರು ಹರಿಯುತ್ತಿದ್ದು, ಪ್ರವಾಸಿ ತಾಣದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಹೋಗುವ ವಾಹನ ಸವಾರರು ಕೆಲಕಾಲ ನಿಂತು ಮನೋಹರ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಬಹಳ ವರ್ಷಗಳ ನಂತರ ಕೆರೆಯು ಭರ್ತಿಯಾಗಿದ್ದು, ನೀರು ಕೋಡಿ ಬಿದ್ದಿರುವುದನ್ನು ನೋಡಲು ಪಟ್ಟಣದ ಜನರು ಮಕ್ಕಳೊಂದಿಗೆ ಬಂದು ಸಂತಸ ಪಡುತ್ತಿದ್ದಾರೆ. ವರ್ಷಧಾರೆಯೊಂದಿಗೆ ಕಾಲುವೆಯಲ್ಲೂ ನೀರು ಹರಿದು ಬಂದ ಪರಿಣಾಮವಾಗಿ ಕೆರೆಯು ಸಂಪೂರ್ಣವಾಗಿ ಭರ್ತಿಯಾಗಿ ನೋಡುಗರ ಕಣ್ಮನ ಸೆಳೆಯುತ್ತಿದೆ.

ವಳಗೆರೆಮೆಣಸ ದೊಡ್ಡಕೆರೆ, ಅಗ್ರ ಬಾಚಹಳ್ಳಿ ಕೆರೆ ಕೂಡ ಭರ್ತಿಯಾದ ಹಿನ್ನೆಲೆಯಲ್ಲಿ ದೇವೀರಮ್ಮಣ್ಣಿ ಕೆರೆಗೆ ಅಪಾರ ನೀರು ಹರಿದುಬರುತ್ತಿದೆ. ಜಲಪಾತದಂತೆ ನೀರು ಧುಮ್ಮಿಕ್ಕುತ್ತಿದ್ದು, ಕೆರೆಯ ಸೌಂದರ್ಯ ಇಮ್ಮಡಿಯಾಗಿದೆ. ಮೈಸೂರು ಸಂಸ್ಥಾನದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಉಪಪತ್ನಿಯಾಗಿದ್ದ ದೇವೀರ ಮ್ಮಣ್ಣಿ ಅವರ ಹೆಸರಿನಲ್ಲಿ ಲೋಕ ಕಲ್ಯಾಣಾರ್ಥವಾಗಿ ಈ ಕೆರೆಯನ್ನು ಕಟ್ಟಿಸಿದ್ದರೆಂದು ಇತಿಹಾಸ ಹೇಳುತ್ತದೆ.

ತಾಲ್ಲೂಕಿನ ಅತೀದೊಡ್ಡ ಕೆರೆಗಳಲ್ಲಿ ಒಂದಾಗಿರುವ ಈ ಕೆರೆಯನ್ನು ಕಟ್ಟಿಸಿ ಪಟ್ಟಣದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡಲು ಹಾಗೂ ರೈತರ ಬೇಸಾಯಕ್ಕೆ ಸಹಾಯ ಮಾಡಿದ್ದು ಇತಿಹಾಸ. ಕೆರೆಯ ಕೆಳಭಾಗದಲ್ಲಿ ಸಾವಿರಾರು ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಕಾರ್ಯ ಭರದಿಂದ ನಡೆಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಸ್ವಚ್ಛಚತೆ ಮಾಯ: ಇಂತಹ ದೊಡ್ಡ ಕೆರೆಯನ್ನು ಸ್ವಚ್ಛವಾಗಿ ಕಾಪಾಡಿ ಕೊಳ್ಳುವಲ್ಲಿ ಪುರಸಭೆ ಯಾಗಲಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿ ಗಳಾಗಲಿ ಮನಸ್ಸು ಮಾಡಿಲ್ಲ. ಕೆರೆಕೋಡಿಯ ಆವರಣವು ಗಬ್ಬೆದ್ದು ನಾರುತ್ತಿದ್ದು, ಗಿಡಗಂಟಿಗಳು ಬೆಳೆದು ನಿಂತಿವೆ. ನೀರು ಧುಮ್ಮಿಕ್ಕುವ ಪರಿಯನ್ನು ಸವಿಯಲು ಕೆರೆಕೋಡಿಯ ಬಳಿ ಬೆಳೆದಿರುವ ಗಿಡಗಂಟಿಗಳನ್ನು ತೆರವು ಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ಕೆರೆಯಲ್ಲಿ ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲಿ’

ಮೈಸೂರಿನ ಕಾರಂಜಿ ಕೆರೆಯ ಮಾದರಿಯಲ್ಲಿ ದೇವೀರಮ್ಮಣ್ಣಿ ಕೆರೆಯ ಸುತ್ತ ಪಾದಚಾರಿ ಮಾರ್ಗ, ಬದಿಗಳಲ್ಲಿ ಗಿಡ ಬೆಳೆಸುವ, ಕಲ್ಲಿನ ಬೆಂಚುಗಳನ್ನು ಹಾಕಿಸುವುದು, ಬೋಟಿಂಗ್ ಸೌಲಭ್ಯ ಕಲ್ಪಿಸುವುದು ಮುಂತಾದ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಈ ಭಾಗದ ಜನರು ಬಹುದಿನಗಳಿಂದ ಒತ್ತಾಯಿಸುತ್ತಿದ್ದಾರೆ.

ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ಕೂಡ ಇದೇ ಭರವಸೆ ನೀಡುತ್ತಿದ್ದಾರೆ. ಆದರೆ, ಇಲ್ಲಿಯವರೆಗೂ ಕೆಲಸವಾಗಿಲ್ಲ. ಕೆರೆಯ ಸೊಬಗು, ಜಲಪಾತದ ಸೌಂದರ್ಯವನ್ನು ಆಸ್ವಾದಿಸುವ ನಿಟ್ಟಿನಲ್ಲಿ ಮುಂಜಾನೆಯ ವಿಹಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾಯಕಲ್ಪ ನೀಡಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT