ಶನಿವಾರ, ಜುಲೈ 31, 2021
28 °C

ಕಸ್ತೂರಿ ರಂಗನ್, ಗಾಡ್ಗಿಲ್ ವರದಿ ಬಗ್ಗೆ ಆತಂಕ ಬೇಡ: ಎಸ್.ಸುರೇಶ್‌ಕುಮಾರ್ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಂಡ್ಯ: ಕಸ್ತೂರಿ ರಂಗನ್ ಮತ್ತು ಗಾಡ್ಗಿಲ್ ವರದಿ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾಗಿದ್ದು, ಎರಡೂ ವರದಿಯಲ್ಲಿರುವ ಅಂಶಗಳನ್ನು ಪರಿಶೀಲಿಸಿ ಜನರ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ ಎಂದು ರಾಜಾಜಿನಗರ ಕ್ಷೇತ್ರದ ಶಾಸಕ ಎಸ್‌.ಸುರೇಶ್‌ಕುಮಾರ್‌ ಹೇಳಿದರು.

ನಗರದ ವಕೀಲರ ಸಂಘಕ್ಕೆ ಬುಧವಾರ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರ ಸರ್ಕಾರ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಬೇಕು. ಬಳಿಕ ಇರುವ ಆತಂಕಗಳೇನು ಎಂಬುದನ್ನು ತಿಳಿದುಕೊಂಡು ವರದಿ ಮಾರ್ಪಾಡು ಮಾಡುವ ಅಗತ್ಯವಿದೆ. ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುವ ಬದಲು ಪರಿಶೀಲನೆ ಮಾಡಬೇಕಿದೆ. ಈ ವರದಿಯಿಂದ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಕಾಡಿನಲ್ಲಿ ವಾಸಿಸುವ ಜನರಿಗೆ ತೊಂದರೆಯಾಗುತ್ತದೆ. ಅಲ್ಲಿ ವಾಸಿಸುವ ಜನತೆಗೆ ನಮ್ಮನ್ನು ಒಕ್ಕಲೆಬ್ಬಿಸಿ, ಕೃಷಿ ಚಟುವಟಿಕೆ ನಡೆಸದಂತೆ ತಡೆಯಬಹುದೆಂಬ ಆತಂಕವಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯದ ಸಂಗ್ರಹಿಸಿ, ಅಂತಿಮವಾಗಿ ತನ್ನ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ ಎಂದರು.

‘ಕೊಡಗಿನಲ್ಲಿ ಜಲಪ್ರವಾಹ ಉಂಟಾಗಲು ನಿಖರ ಕಾರಣ ಗೊತ್ತಾಗಿಲ್ಲ. ಜಲಪ್ರಳಯ, ಭೂಕಂಪ, ಭೂ ಕುಸಿತ ಅಥವಾ ಭೂಮಿ ತನ್ನ ಧಾರಣಾ ಶಕ್ತಿ ಕಳೆದುಕೊಂಡಿದ್ದರಿಂದ ಆಗಿರುವ ಅನಾಹುತವೇ ಎಂಬುದು ತಿಳಿದುಬಂದಿಲ್ಲ. ಜಲಪ್ರವಾಹದಿಂದ ನಾವು ಪ್ರಕೃತಿಯನ್ನು ಹಾನಿ ಮಾಡದೇ ಕಾಪಾಡಬೇಕು ಎಂಬುದನ್ನು ಕಲಿತ್ತಿದ್ದೇವೆ. ನಾವು ಪ್ರಕೃತಿ ನಾಶ ಮಾಡಿದರೆ, ಪ್ರಕೃತಿ ಕೂಡ ನಮ್ಮನ್ನು ನಾಶ ಮಾಡುತ್ತದೆ’ ಎಂದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಆರ್ಥಿಕ ನೆರವು ಪಡೆಯಲು ದೆಹಲಿಗೆ ತೆರಳಿದ್ದಾರೆ. ಆ.31ರ ನಂತರ ಬಿಜೆಪಿ ಪ್ರಮುಖ ನಾಯಕರ ನಿಯೋಗ ಕೂಡ ದೆಹಲಿಗೆ ತೆರಳಲಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಗಿಗೆ ಬಂದು ಪ್ರವಾಹದಿಂದಾದ ನಷ್ಟವನ್ನು ಪರಿಶೀಲಿಸಿದ್ದಾರೆ ಎಂದರು.

ಸಂಸದ ಪ್ರತಾಪ್‌ಸಿಂಹ ಅವರು ವಿಸ್ತೃತ ವರದಿಯನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅವೆಲ್ಲವನ್ನೂ ಪರಿಶೀಲಿಸಿ ಬಿಜೆಪಿ ನಾಯಕರ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಕೊಡಗಿಗೆ ಅಗತ್ಯವಿರುವ ಹಣವನ್ನು ಬೇಡಿಕೆಯಿಟ್ಟು ಅನುದಾನ ತರುತ್ತಾರೆ. ವಕೀಲರ ಭವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಭವನ ಪೂರ್ಣಗೊಳ್ಳಲು ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರಸವೆ ನೀಡಿದರು.

ಬಿಜೆಪಿ ಜಿಲ್ಲಾ ಚುನಾವಣಾ ಉಸ್ತುವಾರಿ ಅಶ್ವಥನಾರಾಯಣ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮರೀಗೌಡ, ಕಾರ್ಯದರ್ಶಿ ಶಶಿಧರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಉಮೇಶ್‌ಚಂದ್ರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು