ಸೋಮವಾರ, ನವೆಂಬರ್ 18, 2019
20 °C
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿ

ನಾಯಿಯನ್ನು ಹೊತ್ತೊಯ್ದ ಚಿರತೆ: ವೈರಲ್ ಆಯ್ತು ಸಿಸಿಟಿವಿ ಕ್ಯಾಮೆರಾ ದೃಶ್ಯ

Published:
Updated:
Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಗ್ರಾಮದ ಬಳಿ ತೋಟದ ಮನೆಗೆ ನುಗ್ಗಿದ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದಿದೆ ಎನ್ನಲಾದ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಹದೇವಪುರ ಬೋರೆ ಬಳಿಯ ತೋಟದ ಮನೆ ಆವರಣಕ್ಕೆ ರಾತ್ರಿ ವೇಳೆ ಬಂದಿರುವ ಚಿರತೆ ಮನೆಯ ಮೆಟ್ಟಿಲುಗಳ ಮೇಲೆ ಮಲಗಿದ್ದ ಕಪ್ಪು ಬಣ್ಣದ ನಾಯಿಯನ್ನು ಕಚ್ಚುವ ಹಾಗೂ ನಾಯಿ ತಪ್ಪಿಸಿಕೊಂಡು ಓಡುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿ ಸೋಮವಾರದಿಂದ ಹೆಚ್ಚು ವೈರಲ್‌ ಆಗಿದ್ದು, ಕುತೂಹಲ ಮತ್ತು ಆತಂಕ ಮೂಡಿಸಿದೆ.

ಆದರೆ, ಮಹದೇವಪುರದಲ್ಲಿ ಚಿರತೆ ನಾಯಿಯನ್ನು ಹೊತ್ತೊ ಯ್ದಿರುವ ಬಗ್ಗೆ ಮಾಹಿತಿ ಬಂದಿಲ್ಲ ಎಂದು ಆರ್‌ಎಫ್‌ಒ ಸುನೀತಾ ಹೇಳಿದ್ದಾರೆ.

ಮಹದೇವಪುರದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಪೊಲೀಸ್‌ ಠಾಣೆಗೆ ಇದುವರೆಗೆ ಯಾರೂ ದೂರು ಕೊಟ್ಟಿಲ್ಲ ಎಂದು ಅರಕೆರೆ ಠಾಣೆ ಎಸ್‌ಐ ಸತೀಶ್‌ ತಿಳಿಸಿದ್ದಾರೆ.

‘ಗಣಂಗೂರು ಮತ್ತು ಸಿದ್ದಾಪುರ ಗ್ರಾಮಗಳ ನಡುವೆ, ಅರಣ್ಯದ ಅಂಚಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ ಮೂರು ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಶಾಲೆಯ ಶಿಕ್ಷಕರು ಮಾಹಿತಿ ನೀಡಿದ್ದಾರೆ. ಬೊಮ್ಮಕೂರು ಅಗ್ರಹಾರ ಬಳಿಯೂ ಚಿರತೆ ಜನರ ಕಣ್ಣಿಗೆ ಬಿದ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ನಮ್ಮಲ್ಲಿ ಸದ್ಯ ಒಂದು ಬೋನು ಮಾತ್ರ ಇದ್ದು, ಅದನ್ನು ಗಣಂಗೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ ಇರಿಸಲಾಗುವುದು’ ಎಂದು ಆರ್‌ಎಫ್‌ಒ ಸುನೀತಾ ತಿಳಿಸಿದ್ದಾರೆ.

ಪಟ್ಟಣ ಸಮೀಪದ ಚಂದಗಾಲು ರಸ್ತೆಯಲ್ಲಿ ಚಿರತೆಯೊಂದು ಹಗಲು ಹೊತ್ತಿನಲ್ಲೇ ಓಡಾಡುತ್ತಿದೆ. ಮೂರು ತಿಂಗಳ ಹಿಂದೆಯೂ ಕಾವೇರಿ ನದಿ ದಡದ ತೋಟದಲ್ಲಿ ಚಿರತೆಯು ಕರುವನ್ನು ತಿಂದು ಹಾಕಿತ್ತು. ರೈತರು ತಮ್ಮ ಜಮೀನುಗಳಿಗೆ ಹೋಗಿ ಬರಲು ಹೆದರುತ್ತಿದ್ದಾರೆ. ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗಂಜಾಂನ ಪೂರ್ಣಚಂದ್ರ, ಕುಮಾರ್‌ ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)