ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ, ಮಾರ್ಗ ಸ್ಪಷ್ಟವಿದ್ದರೆ ತಲ್ಲಣಗಳ ಭಯವಿಲ್ಲ: ಸಾಹಿತಿ ಪ್ರದೀಪ್ ಕುಮಾರ್

Last Updated 26 ಫೆಬ್ರುವರಿ 2020, 10:54 IST
ಅಕ್ಷರ ಗಾತ್ರ

ಮಂಡ್ಯ: ‘ವಚನಗಳ ಅರಿವಿನಿಂದ ನಮ್ಮೊಳಗಿನ ಅಂತಃಶಕ್ತಿಯ ಪರಿಚಯವಾಗುತ್ತದೆ, ಗುರಿ, ಮಾರ್ಗಗಳು ಗಟ್ಟಿಯಾಗುತ್ತವೆ. ನಾವು ನಡೆಯುವ ಮಾರ್ಗ, ಗುರಿ ಸ್ಪಷ್ಟವಾಗಿದ್ದರೆ ವರ್ತಮಾನಗಳ ತಲ್ಲಣಗಳ ಭಯ ಕಾಡುವುದಿಲ್ಲ’ ಎಂದು ಹಿರಿಯ ಸಾಹಿತಿ ಡಾ.ಪ್ರದೀಪ್‌ ಕುಮಾರ್‌ ಹೆಬ್ರಿ ಅಭಿಪ್ರಾಯಪಟ್ಟರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಸರ್ಕಾರಿ ಮಹಿಳಾ ವಿದ್ಯಾಲಯದ ಆವರಣದಲ್ಲಿ ಬುಧವಾರ ನಡೆದ ‘ವರ್ತಮಾನದ ತಲ್ಲಣಗಳಿಗೆ ವಚನ ಸಾಂತ್ವನ’ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

‘ವ್ಯಕ್ತಿ ಯಾರೇ ಆಗಿರಲಿ, ನಾನತ್ವ ಬೆಳೆಸಿಕೊಂಡಾಗ ಇಡೀ ಬದುಕು ಮರೆತು ಹೋಗುತ್ತದೆ. ಬೀಗುವವರು ಬಾಗುವುದನ್ನೂ ಕಲಿಯಬೇಕು. ದೃಷ್ಟಿ ಆಕಾಶದತ್ತ ಇದ್ದರೆ ಪಾದ ನೆಲದ ಮೇಲಿರಬೇಕು. ವಚನ ಎಂದರೆ ಕೇವಲ ಸಾಹಿತ್ಯ ಮಾತ್ರವೇ ಅಲ್ಲ, ಅದೊಂದು ಬದುಕು. ನಮ್ಮೊಳಗಿನ ಅರಿವಿನ ಜ್ಯೋತಿ ಬೆಳಗಬೇಕಾದರೆ ವಚನ ಪ್ರಜ್ಞೆ ಬೆಳೆಯಬೇಕು’ ಎಂದು ಹೇಳಿದರು.

‘ಕಾಲೇಜು ಎಂದರೆ ಅನುಭವ ಮಂಟಪವಿದ್ದಂತೆ. ಕಾಲೇಜಿನಲ್ಲಿ ನಡೆಯುವ ಪ್ರತಿ ಚಟುವಟಿಕೆಗಳಿಗೆ ಪೂರಕವಾಗಿ ಸ್ಪಂದಿಸಬೇಕಾದುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ. ಅರಿವೆಂದರೆ ಜ್ಞಾನ, ತಿಳಿವಳಿಕೆಯಷ್ಟೇ ಅಲ್ಲ, ಅರಿವನ್ನು ಆಚರಣೆಗೆ ತರುವುದೇ ಆಗಿದೆ. ನಮಗೆ ಬೇಕಾದದ್ದು, ಬೇಡವಾದದ್ದನ್ನು ಅರಿವಿನ ದೃಷ್ಟಿಯಲ್ಲಿ ನೋಡಬೇಕು. ದುರ್ಜನತ್ವ ನೀಗುವ ವಚನಗಳು ತಲ್ಲಣಗಳಿಗೆ ಉತ್ತರ ನೀಡುತ್ತವೆ’ ಎಂದರು.

‘ನಡೆನುಡಿ ಸಿದ್ಧಾಂತ, ಕಾಯಕ ತತ್ವ, ದಾಸೋಹ ಕೇವಲ ಶರಣರಿಗೆ ಮಾತ್ರ ಸೀಮಿತವಲ್ಲ. ಪ್ರತಿಯೊಬ್ಬರೂ ವಚನಗಳ ಮೂಲಕ ಬದುಕು ತಿದ್ದಿಕೊಂಡು ಸಾಧನೆಯ ಹಾದಿಯಲ್ಲಿ ನಡೆಯಬಹುದು. ಸಾಧನೆಯ ಶರೀರವಿದು, ವಚನಗಳಿಗೆ ನಮ್ಮನ್ನು ನಾವು ತೆರೆದುಕೊಂಡರೆ ಸಮಕಾಲೀನ ತಲ್ಲಣಗಳಿಗೆ ಸಾಂತ್ವನ ಸಿಗುತ್ತದೆ’ ಎಂದು ಹೇಳಿದರು.

‘ವಚನಗಳು ಸಾಮಾಜಿಕ ಕ್ರಾಂತಿಯ ಮೂರ್ತ ರೂಪ. ಬಸವಾದಿ ಶರಣರಲ್ಲಿ ಹಾಗೂ ಅವರ ಹಿಂದಿನ ಹಲವಾರು ಸಾಮಾಜಿಕ ಚಿಂತಕರಲ್ಲಿ ಗಟ್ಟಿಯಾಗಿ ನಲೆಗೊಂಡಿದ್ದ ಧಾರ್ಮಿಕ, ಸಾಮಾಜಿಕ ಪ್ರಜ್ಞೆ ಆಚಾರ–ವಿಚಾರಗಳನ್ನು ಪ್ರಶ್ನೆ ಮಾಡುವ ಎದಿಗಾರಿಕೆ ತಂದುಕೊಟ್ಟವು. ವಚನ ಧರ್ಮಬೋಧನೆಯ ಮಾಧ್ಯಮವಾಗಿ ಮೂಡಿ ಬಂದರೂ ಅದರಲ್ಲಿನ ವಿಚಾರಗಳು ಜೀವಂತ ಸಂವೇದನೆಯ ಸ್ವರೂಪಗಳಾಗಿ, ಸ್ವಾನುಭಾವದಿಂದ ಪರಿಪಾಕಗೊಂಡ ನುಡಿಗಳಾಗಿ ಆವಿರ್ಭವಿಸಿದವು’ ಎಂದರು.

‘ಬದುಕು ನಿರ್ಮಲವಾಗಿರಬೇಕು, ನೆಮ್ಮದಿಯಿಂದ ಇರಬೇಕು. ತನ್ನದನ್ನೇ ಹಂಚಿ ಉಂಡು ಆನಂದ ಕಾಣಬೇಕೆನ್ನುವ ನಿಲುವು ವಚನಗಳಲ್ಲಿರುವಾಗ ಪರ ಆಸೆ ಸರ್ವಥಾ ಉಚಿತವಲ್ಲ. ಬೇಕುಗಳ ಬಯಕೆಯಲ್ಲೇ ಬದುಕು ಹಾಳಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಬೇಕು ಎಂಬುದು ತಲ್ಲಣಗಳಿಗೆ ಕಾರಣವಾದ್ದರೂ ಅದರ ಬಲೆಯಿಂದ ಹೊರಬರಲು ನಾವಾರೂ ಸಿದ್ಧರಿಲ್ಲ’ ಎಂದರು.

ಪ್ರಾಚಾರ್ಯ ಪ್ರೊ.ಕೆ.ಬಿ.ನಾರಾಯಣ ಮಾತನಾಡಿ ‘12ನೇ ತಶಮಾನದ ಮನಸ್ಥಿತಿ ಈಗಲೂ ಅಳಿದಿಲ್ಲ, ಜಾತಿ ಸಮಸ್ಯೆ, ಲಿಂಗ ಅಸಮಾನತೆ, ಅಂಧಶ್ರದ್ಧೆ, ಭ್ರಷ್ಟಾಚಾರ ಇವುಗಳು ಈಗಲೂ ಜೀವಂತವಾಗಿವೆ. ಇವುಗಳನ್ನು ಕಂಡು ವಚನಕಾರರು ರಚಿಸಿದ ವಚನಗಳು ಈಗಲೂ ಪ್ರಸ್ತುತವಾಗಿವೆ. ಸಮಕಾಲೀನ ಸಮಸ್ಯೆಗಳಿಗೆ ವಚನಗಳು ಉತ್ತಮ ಔಷಧಿಯಾಗಿವೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಕೊರತೆ ಇದೆ. ಪ್ರಸ್ತುತ ಕಾಲಘಟ್ಟಕ್ಕೆ ಅವಶ್ಯವಾಗಿರುವ ಕೌಶಲಗಳ ಅರಿವು ಯುವಜನರಿಗೆ ಇಲ್ಲವಾಗಿದೆ. ಸರ್ಕಾರ ಮೃದು ಕೌಲಶ ಕಲಿಕೆಗೆ ಕೋಟ್ಯಂತರ ರೂಪಾಯಿ ಹಣ ವೆಚ್ಚ ಮಾಡುತ್ತದೆ. ಕಾಲೇಜುಗಳು ವಚನಗಳನ್ನು ಅರಿತುಕೊಂಡರೆ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಎಸ್‌.ಶಿವಪ್ರಕಾಶ್‌, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರತಿಭಾಂಜಲಿ ಡೇವಿಡ್‌, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಮದನ್‌ಕುಮಾರ್‌, ಎಂ.ಯು.ಶ್ವೇತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT