ಶನಿವಾರ, ಆಗಸ್ಟ್ 13, 2022
23 °C
ಜಿಲ್ಲಾಧಿಕಾರಿ ಕಚೇರಿಯಲ್ಲಿ ಫೈನಾನ್ಸ್, ವಿವಿಧ ಸಂಘಟನೆಗಳ ಮುಖಂಡರ ಸಭೆ

ಸಾಲ ವಸೂಲಾತಿಗೆ ಒತ್ತಡ ಬೇಡ: ಮಂಡ್ಯ ಜಿಲ್ಲಾಧಿಕಾರಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಕೋವಿಡ್‌ ಸಂದರ್ಭದಲ್ಲಿ ಇಡೀ ದೇಶ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಸಣ್ಣ ಹಣಕಾಸು ಸಂಸ್ಥೆ (ಮೈಕ್ರೋ ಫೈನಾನ್ಸ್‌)ಗಳು ಸಾಲ ವಸೂಲಾತಿಗೆ ಸಾಲಗಾರರ ಮೇಲೆ ಒತ್ತಡ ಹೇರಬಾರದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮೈಕ್ರೊ ಫೈನಾನ್ಸ್‌ ಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.

‘ಕೋವಿಡ್ ಕಾರಣಕ್ಕೆ ಜನರು ಇಡೀ ದೇಶದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಅಪಾರ ಸಂಖ್ಯೆಯ ಉದ್ದಿಮೆ ಸ್ಥಗಿತಗೊಂಡಿವೆ. ಜನರ ದುಡಿಯುವ ಅವಕಾಶಗಳು ಕಡಿಮೆಯಾಗಿವೆ. ಇಂತಹ ಸಂದರ್ಭದಲ್ಲಿ ಸಾಲ ವಿತರಣೆ ಮಾಡಿದ ಸಣ್ಣ ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗೆ ಬಲವಂತದ ಕ್ರಮ ಅನುಸರಿಸಬಾರದು. ಜನರ ಜೊತೆ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

‘ಕೊರೊನಾ ಸೋಂಕು ಎಲ್ಲೆಡೆ ಹರಡುತ್ತಿದ್ದು ದೇಶದಲ್ಲಿ ಅತ್ಯಂತ ಸಂದಿಗ್ಧ ಸನ್ನಿವೇಶ ನಿರ್ಮಾಣವಾಗಿದೆ. ಸಾಲ ವಸೂಲು ಮಾಡುವ ಹಣಕಾಸು ಸಂಸ್ಥೆಗಳ ಕೆಳಹಂತದ ನೌಕರರು ಜನರೊಂದಿಗೆ ಅನುಚಿತವಾಗಿ ವರ್ತಿಸಬಾರದು. ಸಾಲ ವಸೂಲಾತಿಗೆ ಬಲವಂತ ಮಾಡುತ್ತಿರುವ ಬಗ್ಗೆ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಸಾಲ ಕಟ್ಟುವ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಕಂತುಗಳಲ್ಲಿ ಸಾಲ ಮರುಪಾವತಿಗೆ ಅವಕಾಶ ನೀಡಬೇಕು’ ಎಂದು ಹೇಳಿದರು.

ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಸಾಲ ಮರುಪಾವತಿಗೆ ಆರ್‌ಬಿಐ ವಿನಾಯಿತಿ ನೀಡಿದ ಸಂದರ್ಭದಲ್ಲೂ ಸಣ್ಣ ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗೆ ಜನರ ಮೇಲೆ ಒತ್ತಡ ಹೇರುತ್ತಿವೆ. ವಾಹನ ಖರೀದಿಗೆ ಸಾಲ ನೀಡುವ ಹಣಕಾಸು ಸಂಸ್ಥೆಗಳು ಅಕ್ಷರಶಃ ಸಂಘಟಿತ ಗೂಂಡಾಗಿರಿ ನಡೆಸುತ್ತಿವೆ. ಇವರುಗಳ ಕಿರುಕುಳದಿಂದಾಗಿ ಜಿಲ್ಲೆಯ ಹಲವು ಜನರು ಊರು ತೊರೆದಿದ್ದಾರೆ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಹನಗಳ ಜಪ್ತಿ ಹೆಸರಲ್ಲಿ ರೌಡಿಗಳನ್ನು ಮುಂದಿಟ್ಟುಕೊಂಡು ಬೆದರಿಕೆ ಹಾಕುತ್ತಿದ್ದಾರೆ. ನಿಯಮಾನುಸಾರ ಸಾಲ ಕಟ್ಟಲು ಸ್ಥಳೀಯವಾಗಿ ಕಚೇರಿ ತೆರೆಯದೆ ಬೆಂಗಳೂರು, ಮೈಸೂರಿಗೆ ಜನರನ್ನು ಅಲೆಸುತ್ತಿದ್ಧಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಣ್ಣ ಹಣಕಾಸು ಸಂಸ್ಥೆಗಳ ಒಕ್ಕೂಟದ ಮುಖ್ಯಸ್ಥ ರವಿಚಂದ್ರ ಮಾತನಾಡಿ ‘ಜಿಲ್ಲೆಯಲ್ಲಿ ಸಣ್ಣ ಹಣಕಾಸು ಸಂಸ್ಥೆಗಳ ಮೂಲಕ ₹ 1.5 ಸಾವಿರ ಕೋಟಿ ಸಾಲ ವಿತರಣೆ ಮಾಡಲಾಗಿದೆ. ಸಾಲ ವಸೂಲಾತಿಯಲ್ಲಿ ಮಂಡ್ಯ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಸಾಲ ವಸೂಲಾತಿಗೆ ಯಾವುದೇ ರೀತಿಯ ಬಲವಂತದ ಕ್ರಮ ಅನುಸರಿಸುತ್ತಿಲ್ಲ. ಒತ್ತಡ ಹೇರುವ ಬದಲು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಲಾಗುವುದು’ ಎಂದು ಹೇಳಿದರು.

ಸಭೆಯಲ್ಲಿ ಮರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕ ಖದರಪ್ಪ, ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ವೇಣುಗೋಪಾಲ. ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ, ಚಂದ್ರಶೇಖರ, ಸಂದೀಪ್, ಶಂಕರ್, ಜಬೀವುಲ್ಲಾ, ಪ್ರಸನ್ನ, ನಯೀಮ್. ಝಾಕೀರ್ ಇದ್ದರು.

ನೋಟಿಸ್‌ ನೀಡಲು ಸೂಚನೆ

ವಾಹನ ಖರೀದಿಗೆ ಸಾಲ ವಿತರಣೆ ಮಾಡಿರುವ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಸಭೆಗೆ ಬಂದಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಗೈರು ಹಾಜರಾಗಿರುವವರಿಗೆ ನೋಟಿಸ್‌ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಸಾಲಗಾರರು ಸಾಲ ಹಾಗ ಬಡ್ಡಿ ಮರುಪಾವತಿ ಮಾಡದಿದ್ದಲ್ಲಿ ಫೈನಾನ್ಸ್‌ ಸಂಸ್ಥೆಗಳು ವಾಹನ ವಶಪಡಿಸಿಕೊಳ್ಳಬಾರದು. ಜನರಿಗೆ ಕಾಲಾವಕಾಶ ನೀಡಬೇಕು. ಇದು ಆರ್‌ಬಿಐ ನಿಯಮವೂ ಆಗಿದ್ದು ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು’ ಎಂದು ಡಾ.ಎಂ.ವಿ.ವೆಂಕಟೇಶ್‌ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.