ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರಿಗೆ ಅಭಿವೃದ್ಧಿ ಗೊತ್ತಿಲ್ಲ

ಬೆಳಗಾವಿ ಉತ್ತರ: ಕಾಂಗ್ರೆಸ್‌ನ ಫಿರೋಜ್‌ ಸೇಠ್‌ ಮಾತು
Last Updated 26 ಏಪ್ರಿಲ್ 2018, 8:36 IST
ಅಕ್ಷರ ಗಾತ್ರ

ಬೆಳಗಾವಿ: ‘ಬಿಜೆಪಿಯವರಿಗೆ ಅಭಿವೃದ್ಧಿ ಎಂದರೆ ಗೊತ್ತಿಲ್ಲ. ಧರ್ಮ– ಧರ್ಮಗಳ ನಡುವೆ ಬೆಂಕಿ ಹಚ್ಚುವುದು, ಕಲ್ಲು ಹೊಡೆಯುವುದು ಮಾತ್ರ ಗೊತ್ತಿದೆ...’ ಎನ್ನುತ್ತಾರೆ ಫಿರೋಜ್‌ ಸೇಠ್‌ ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ. ಕಳೆದ ಎರಡು ಚುನಾವಣೆಗಳಲ್ಲಿ ಜಯಗಳಿಸಿರುವ ಅವರು, ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿದ್ದಾರೆ. ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಮತದಾರರ ಮನವೊಲಿಸುವಲ್ಲಿ ನಿರತರಾಗಿದ್ದಾರೆ.

ಪೆಟ್ರೋಲಿಯಂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಫಿರೋಜ್‌ ಸೇಠ್‌ ಯಶಸ್ವಿ ಉದ್ಯಮಿಯಾಗಿದ್ದಾರೆ. 2008ರಲ್ಲಿ ರಾಜಕೀಯ ಪ್ರವೇಶಿಸಿದ ಅವರು, 2013ರಲ್ಲಿಯೂ ಜಯಗಳಿಸಿದರು. ಜಿಲ್ಲಾ ಮಟ್ಟದ ಪ್ರಮುಖ ಕಾಂಗ್ರೆಸ್‌ ನಾಯಕರಾಗಿ ಹೊರಹೊಮ್ಮಿದ್ದಾರೆ. ಕೆಪಿಸಿಸಿ ಹಾಗೂ ಎಐಸಿಸಿ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಕಳೆದ ಎರಡು ಚುನಾವಣೆಗಳಿಗಿಂತ ಈ ಸಲ ತೀವ್ರ ಪೈಪೋಟಿ ಎದುರಿಸುತ್ತಿರುವ ಅವರು, ಪ್ರಚಾರದ ನಡುವೆ ಬಿಡುವು ಮಾಡಿ
ಕೊಂಡು ‘ಪ್ರಜಾವಾಣಿ’ಗೆ ಮುಖಾಮುಖಿಯಾದರು.

ಮೂರನೇ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದೀರಿ ಜನರ ಪ್ರತಿಕ್ರಿಯೆ ಹೇಗಿದೆ?

ತುಂಬಾ ಚೆನ್ನಾಗಿದೆ. ಇಷ್ಟು ವರ್ಷಗಳ ಕಾಲ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಫಲ ಪಡೆದುಕೊಂಡವರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಎಲ್ಲ ಜಾತಿ, ಧರ್ಮದವರು ನಮ್ಮನ್ನು ಸಮಾನವಾಗಿ ಸ್ವೀಕರಿಸಿದ್ದಾರೆ.

ನೀವು ಒಂದೆಡೆ ಕೋಮು ಸಾಮರಸ್ಯ ಬಗ್ಗೆ ಮಾತನಾಡುತ್ತೀರಿ. ಇನ್ನೊಂದೆಡೆ, ಬೆಳಗಾವಿ ಉತ್ತರ ಕ್ಷೇತ್ರವು ಕೋಮು ಸೂಕ್ಷ್ಮ ಪ್ರದೇಶವಾಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಾರಲ್ಲ?

ನನ್ನ ಕ್ಷೇತ್ರದ ವ್ಯಾಪ್ತಿಯೊಳಗೆ ಬರುವ ಚವಾಟ್‌ ಗಲ್ಲಿ ಹಾಗೂ ಭಡಕಲ್‌ ಗಲ್ಲಿಯಲ್ಲಿ ಮಾತ್ರ ಕೋಮು ಗಲಭೆಗಳು ಸಂಭವಿಸುತ್ತವೆ. ಏಕೆಂದರೆ ಈ ಕ್ಷೇತ್ರದಲ್ಲಿ ಬಿಜೆಪಿ, ಬಜರಂಗದಳ, ಆರ್‌ಎಸ್‌ಎಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೇ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ ಬೆನಕೆ ಅವರ ಕಚೇರಿಯೂ ಇದೆ. ಇವರೆಲ್ಲರೂ ಸೇರಿ ಉದ್ದೇಶಪೂರ್ವಕವಾಗಿ ಕೋಮು ಸಾಮರಸ್ಯ ಕದಡುವ ಪ್ರಯತ್ನ ಮಾಡುತ್ತಾರೆ. ಈ ಪ್ರದೇಶವನ್ನು ಹೊರತುಪಡಿಸಿದರೆ ಬೇರೆಲ್ಲೂ ಕೋಮು ಗಲಭೆಗಳು ಆಗುವುದಿಲ್ಲ. ಇಲ್ಲಿ ಹಿಂದೂ, ಮರಾಠಾ, ಮುಸ್ಲಿಂ, ದಲಿತರು ಸೇರಿದಂತೆ ಎಲ್ಲ ಜಾತಿ, ಧರ್ಮದವರು ಒಟ್ಟಾಗಿ ವಾಸಿಸುತ್ತಿದ್ದಾರೆ. ಚವಾಟ್‌ ಗಲ್ಲಿ ಹಾಗೂ ಭಡಕಲ್‌ ಗಲ್ಲಿಗಳಲ್ಲಿ ನಡೆಯುವ ಕೋಮು ಗಲಭೆಗಳನ್ನು ತಡೆಯಲು ಹಲವು ಕ್ರಮಕೈಗೊಂಡಿದ್ದೇನೆ. ಸಿಸಿಟಿವಿಗಳನ್ನು ಖರೀದಿಸಿ, ಹಾಕಿಸಿದ್ದೆ. ಬಿಗಿ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೆ.

 ಕ್ಷೇತ್ರದಲ್ಲಿ ನೀವು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಯಾವುವು?

ರಸ್ತೆ, ನೀರು, ವಿದ್ಯುತ್‌ ಪೂರೈಕೆಯಂತಹ ಮೂಲ ಸೌಕರ್ಯ ಕಲ್ಪಿಸಿದ್ದೇನೆ. ಜನನ ಪ್ರಮಾಣ ಪತ್ರದಿಂದ ಹಿಡಿದು, ಮರಣ ಪ್ರಮಾಣ ಪತ್ರದವರೆಗೆ ಪ್ರತಿಯೊಬ್ಬರಿಗೆ ಅವಶ್ಯಕ ಇರುವ ಎಲ್ಲ ಸರ್ಕಾರಿ ಸೇವೆಗಳನ್ನು ತಲುಪಿಸಲು ಕ್ರಮಕೈಗೊಂಡಿದ್ದೇನೆ. ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್‌ ಸೌಲಭ್ಯ ಸೇರಿದಂತೆ ಹಲವು ಕಾರ್ಯಕ್ರಮಗಳು ತಲುಪುವಂತೆ ನೋಡಿಕೊಂಡಿದ್ದೇನೆ. ಶಿಕ್ಷಣದ ಗುಣಮಟ್ಟ ಸುಧಾರಿಸಲು ಪ್ರಯತ್ನಿಸಿದ್ದೇನೆ. ಮಹಿಳೆಯರಿಗಾಗಿ ಸರ್ಕಾರಿ ಕಾಲೇಜು (ಸರ್ದಾರ್ಸ್‌ ಕಾಲೇಜ್‌) ಆರಂಭಿಸಿದ್ದೇನೆ. ಗುಣಮಟ್ಟ ಹೆಚ್ಚಿಸಲು ಶಿಕ್ಷಕರಿಗೆ ವಿಶೇಷ ತರಬೇತಿ ಕೊಡಿಸಿದ್ದೇನೆ. ಕ್ಷೇತ್ರದ ಮೈದಾನಗಳನ್ನು ಕ್ರೀಡಾಂಗಣಗಳನ್ನಾಗಿ ಮಾಡಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇರುವುದರಿಂದ ನನಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಯಿತು.

ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಅಭಿವೃದ್ಧಿ ವಿಷಯ ಮುಖ್ಯವಲ್ಲ. ಇದು ಹಿಂದೂ– ಮುಸ್ಲಿಮರ ನಡುವಿನ ಚುನಾವಣೆ ಎಂದು ಬಿಜೆಪಿಯ ಶಾಸಕ ಸಂಜಯ ಪಾಟೀಲ ಹೇಳಿಕೆ ನೀಡಿದ್ದಾರೆ. ಇದಕ್ಕೆ ಏನಂತೀರಿ?

ಬಿಜೆಪಿಯವರಿಗೆ ಯಾವತ್ತೂ ಅಭಿವೃದ್ಧಿ ಬೇಡ. ಅವರದ್ದು ಏನಿದ್ದರೂ ಧರ್ಮ– ಧರ್ಮಗಳ ನಡುವೆ ಹಾಗೂ ಜಾತಿ– ಜಾತಿಗಳ ನಡುವೆ ಬೆಂಕಿ ಹಚ್ಚುವುದೇ ಕೆಲಸ. ಕಲ್ಲು ಹೊಡೆಯುವುದು, ಸಾರ್ವಜನಿಕರ ಆಸ್ತಿ– ಪಾಸ್ತಿಗಳಿಗೆ ಹಾನಿ ಮಾಡುವುದಷ್ಟೇ ಗೊತ್ತು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 4 ವರ್ಷ ಆಗಿದೆ. ಯಾವುದಾದರೂ ಅಭಿವೃದ್ಧಿ ಪರ ಕೆಲಸ ಮಾಡಿದ್ದಾರೆಯೇ? ಕೇವಲ ಕೋಮು ಭಾವನೆಯನ್ನು ಕೆರಳಿಸುವುದನ್ನೇ ಅಜೆಂಡಾ ಮಾಡಿಕೊಂಡಿದ್ದಾರೆ. ಜೈನ ಧರ್ಮಕ್ಕೆ ಸೇರಿರುವ ಸಂಜಯ ಪಾಟೀಲ ಅವರು ಮತಗಳನ್ನು ಒಡೆಯುವುದಗೋಸ್ಕರ ಇಂತಹ ಹೇಳಿಕೆ ನೀಡುವುದನ್ನು ಬಿಡಬೇಕು. ತಮ್ಮ ಧರ್ಮದ ತತ್ವ ಸಿದ್ಧಾಂತವಾದ ‘ಅಹಿಂಸಾ ಪರಮೋಧರ್ಮ‘ವನ್ನು ಪಾಲಿಸಲಿ.

ನಿಮ್ಮ ಕ್ಷೇತ್ರದಲ್ಲಿ ವೀರಶೈವ/ಲಿಂಗಾಯತ ಮತದಾರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಕೆಲವರು ಬೆಂಬಲ ನೀಡುತ್ತಿದ್ದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಚುನಾವಣೆ ಮೇಲೆ ಪರಿಣಾಮ ಬೀರುವುದೇ?

ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆಂದು ಆ ಸಮಾಜದಿಂದಲೇ ಬೇಡಿಕೆ ಬಂದಿತ್ತು. ಅದನ್ನು ಮನ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಿತಿ ರಚಿಸಿದರು. ಸಮಿತಿಯ ಶಿಫಾರಸ್ಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪ್ರಜೆಗಳಿಂದ ಆಯ್ಕೆಯಾದ ಸರ್ಕಾರವು ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್‌ ಮಾಡಿದೆ.
ಲಿಂಗಾಯತರು ‘ಹಿಂದುತ್ವ’ ಛಾಯೆಯಿಂದ ಹೊರಹೋದರೆ ತಮ್ಮ ಅಸ್ತಿತ್ವಕ್ಕೆ ಕುತ್ತು ಬರಲಿದೆ ಎಂದು ಬಿಜೆಪಿಯವರು ಹೆದರಿದ್ದಾರೆ. ಕ್ಷೇತ್ರದ ವೀರಶೈವ/ ಲಿಂಗಾಯತರು ಸಂಪೂರ್ಣವಾಗಿ ನನ್ನೊಂದಿಗಿದ್ದಾರೆ ಎನ್ನುವ ವಿಶ್ವಾಸವಿದೆ.

ಕ್ಷೇತ್ರದ ಜನರು ನಿಮಗೆ ಏಕೆ ಮತ ಹಾಕಬೇಕು?

ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಪ್ರಾಮಾಣಿಕನಾಗಿದ್ದೇನೆ. ಎಲ್ಲ ಸಮುದಾಯದವರನ್ನೂ ಒಂದೇ ರೀತಿಯಲ್ಲಿ ನೋಡುತ್ತೇನೆ. ಇದನ್ನು ನೋಡಿ ಜನರು ನನಗೆ ಮತ ಹಾಕಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT