ಮಂಗಳವಾರ, ಜನವರಿ 25, 2022
28 °C
ಇಂದು ಮೆಗಾ ಲಸಿಕಾ ಮೇಳ: ಜಿಲ್ಲಾಧಿಕಾರಿ ಎಸ್‌.ಅಶ್ವತಿ ಅಧಿಕಾರಿಗಳಿಗೆ ಸೂಚನೆ

ಮಂಡ್ಯ: ಪೋಷಕರಿಗೆ 2 ಡೋಸ್‌ ಲಸಿಕೆ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಶಾಲಾ ಮಕ್ಕಳ ಆರೋಗ್ಯ ದೃಷ್ಟಿಯಿಂದ ಪೋಷಕರು ಕಡ್ಡಾಯವಾಗಿ 2 ಡೋಸ್‌ ಲಸಿಕೆ ಪಡೆದಿರಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಮಕ್ಕಳ ಪೋಷಕರಿಗೆ ಲಸಿಕೆ ಹಾಕಲು ಪ್ರಮುಖ ಆದ್ಯತೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ಲಸಿಕೆ ನೀಡುವ ಸಂಬಂಧ ಮಂಗಳವಾರ ವಿವಿಧ ತಾಲ್ಲೂಕಿನ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.

‘ಮಕ್ಕಳ ಆರೋಗ್ಯ ಕಾಪಾಡುವುದು ಎಲ್ಲರ ಪ್ರಮುಖ ಆದ್ಯತೆಯಾಗಬೇಕು. ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಶಾಲಾ-ಕಾಲೇಜು ಮಕ್ಕಳ ಪೋಷಕರನ್ನು ಕೇಂದ್ರಿಕರಿಸಿ ಲಸಿಕೆ ನೀಡಬೇಕು. ಶಾಲಾಮಕ್ಕಳ ಕುಟುಂಬದಲ್ಲಿರುವ ಎಲ್ಲಾ ಸದಸ್ಯರಿಗೂ ಲಸಿಕೆ ನೀಡಲು ಕ್ರಮವಹಿಸಬೇಕು. ಬುಧವಾರ ಜಿಲ್ಲೆಯದ್ಯಾಂತ ಮೆಗಾ ಲಸಿಕಾ ಮೇಳ ನಡೆಯುತ್ತಿದ್ದು, ಈ ಸಂಬಂಧ ಕ್ರಿಯಾಯೋಜನೆಯನ್ನು ತಯಾರಿಸಿ, ಅಂಗನವಾಡಿ, ಶಾಲಾ-ಕಾಲೇಜು ಮಕ್ಕಳ ಕುಟುಂಬದ ಎಲ್ಲಾ ಸದಸ್ಯರಿಗೆ ಲಸಿಕೆ ನೀಡಿ ಜಿಲ್ಲೆಯು ಶೇ 100 ರಷ್ಟು ಲಸಿಕೀಕರಣ ಗುರಿಯನ್ನು ಯಶಸ್ವಿಗೊಳಿಸಬೇಕು’ ಎಂದರು.

‘ಜಿಲ್ಲೆಯಲ್ಲಿ ಒಂದು ಲಸಿಕೆ ಪಡೆಯದೇ ಬಾಕಿ ಉಳಿದಿರುವವರನ್ನು ಗುರುತಿಸಿ ಲಸಿಕೆ ಹಾಕಬೇಕು. 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಹಾಕುವುದು ಸಮರೋಪಾದಿಯಲ್ಲಿ ಸಾಗಬೇಕು. ಎರಡನೇ ಡೋಸ್‍ನ ಅರ್ಹ ಫಲಾನುಭವಿಗಳು ಲಸಿಕೆಯನ್ನು ಪಡೆಯಲು ತಹಶೀಲ್ದಾರ್, ಆರೋಗ್ಯಾಧಿಕಾರಿಗಳು ಕ್ರಮವಹಿಸಿ ಅರ್ಹರನ್ನು ಪತ್ತೆ ಮಾಡಬೇಕು’ ಎಂದರು.

‘ಅಂಗನವಾಡಿ, ಶಾಲಾ- ಕಾಲೇಜು ಮಕ್ಕಳ ಪೋಷಕರ ಲಸಿಕಾಕರಣ ಸಂಬಂಧ ಶಾಲಾ ಮುಖ್ಯ ಶಿಕ್ಷಕರು, ಬಿಇಒ, ಸಿಡಿಪಿಒ, ಡಿಡಿಪಿಯು ಕ್ರಮ ವಹಿಸಬೇಕು. ಅರ್ಹ ಫಲಾನುಭವಿಗಳಿಗೆ ಬಾಕಿ ಉಳಿದಿರುವ ಲಸಿಕೆ ನೀಡಲು ಆಶಾ ಕಾರ್ಯಕರ್ತೆಯರು, ಶಿಕ್ಷಕರು ಜಾಗೃತಿ ಮೂಡಿಸಿ ಕಡ್ಡಾಯವಾಗಿ ಲಸಿಕೆ ನೀಡಬೇಕು. ತಾಲ್ಲೂಕಿನಲ್ಲಿ ಲಸಿಕೀಕರಣವನ್ನು ಹೆಚ್ಚು ಮಾಡಲು ತಹಶೀಲ್ದಾರ್, ಆರೋಗ್ಯಾಧಿಕಾರಿ ನಗರದಲ್ಲಿ ನಗರಸಭೆ, ಪುರಸಭೆ ಅಧಿಕಾರಿಗಳು ಕ್ರಮವಹಿಸಬೇಕು’ ಎಂದು ಸೂಚಿಸಿದರು.

ಸಭೆಯಲ್ಲಿ ಜಿ.ಪಂ ಸಿಇಒ ದಿವ್ಯಾಪ್ರಭು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್‌.ಧನಂಜಯ, ಉಪವಿಭಾಗಾಧಿಕಾರಿ ಐಶ್ವರ್ಯಾ, ಜಿಲ್ಲಾ ಲಸಿಕಾಧಿಕಾರಿ ಡಾ.ಸೋಮಶೇಖರ್, ಮಿಮ್ಸ್ ನಿರ್ದೇಶಕ ಎಂ.ಆರ್ ಹರೀಶ್, ಡಿಡಿಪಿಐ ಜವರೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು