ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ವರ್ತಮಾನಕ್ಕೆ ಧ್ವನಿಯಾದ ರಂಗಪ್ರಯೋಗ

ರಾಜಪ್ಪ ದಳವಾಯಿ ಅವರ ‘ಭಾರತೀಯ ಪ್ರಜೆಗಳಾದ ನಾವು’ ನಾಟಕ ಪ್ರದರ್ಶನ
Last Updated 3 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ‘ಭಾರತೀಯ ಪ್ರಜೆಗಳಾದ ನಾವು’ ರಂಗಪ್ರಯೋಗ ವರ್ತಮಾನದಲ್ಲಿ ನಡೆಯುತ್ತಿರುವ ತಲ್ಲಣಗಳನ್ನು ಧ್ವನಿಸುವಲ್ಲಿ ಯಶಸ್ವಿಯಾಯಿತು. ಸಲ್ಲದ ವಿಚಾರಗಳ ಮೇಲೆ ಜನರನ್ನು ಒಡೆಯುತ್ತಿರುವ ಹೊತ್ತಿನಲ್ಲಿ ‘ಸಂವಿಧಾನದ ಅಂತರಂಗ’ದ ಅರಿವು ಜ್ಞಾನದ ಜ್ಯೋತಿಯಂತೆ ಕಂಗೊಳಿಸಿತು.

ಶಿವಮೊಗ್ಗ ರಂಗಾಯಣ ಕಲಾವಿದರು ಮಾರ್ಚ್‌ 1ರಂದು ನಗರದ ಕಲಾಮಂದಿರದಲ್ಲಿ ಡಾ.ರಾಜಪ್ಪ ದಳವಾಯಿ ರಚಿಸಿರುವ ಈ ನಾಟಕ ಪ್ರದರ್ಶಿಸಿದರು. ‘ಸಮಾನ ಮನಸ್ಕರ ವೇದಿಕೆ’ ಸದಸ್ಯರು ಪ್ರದರ್ಶನ ಆಯೋಜಿಸಿದ್ದರು.

ಭಾರತೀಯ ಸಂವಿಧಾನ ರಚನಾ ಸಭೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ನಿರ್ವಹಿಸಿದ ಜವಾಬ್ದಾರಿ, ಎದುರಿಸಿದ ಸವಾಲುಗಳು, ಸಭೆಯಲ್ಲಿ ಅವರಾಡಿದ ಮಾತುಗಳು ರಂಗದ ಮೇಲೆ ತೆರೆದುಕೊಂಡವು. ಭವಿಷ್ಯದ ಮುನ್ನೋಟ ಹೊಂದಿದ್ದ ಬಾಬಸಾಹೇಬರ ಚಿಂತನೆಗಳು ನಿನ್ನೆಮೊನ್ನೆಯ ಮಾತುಗಳಂತೆ ಮಾರ್ದನಿಸದವು.

ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ, ಸಭೆಯಲ್ಲಿ ಮಹಿಳೆಯರು ಆಡಿದ ಮಾತುಗಳಿಗೆ ಪ್ರಮುಖ ಆದ್ಯತೆ ವಿಚಾರಗಳು ಗಮನ ಸೆಳೆದವು. ಅಂಬೇಡ್ಕರ್‌ ಹಾಗೂ ಸಂವಿಧಾನದ ಸುತ್ತಲೂ ತಿರುಗುವ ನಾಟಕ ಸಮಕಾಲೀನ ಸಮಸ್ಯೆಗಳನ್ನು ರಂಗದ ಮೇಲೆ ಅನಾವರಣಗೊಳಿಸಿತು. ದೇಶದ ಹಲವು ಬೆಳವಣಿಗೆಗಳು, ದೌರ್ಜನ್ಯ ಪ್ರಕರಣಗಳು ಅಂಕಿ–ಅಂಶಗಳ ಸಮೇತ ತೆರೆದುಕೊಳ್ಳುತ್ತಾ ಸಾಗಿದವು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ವ್ಯಕ್ತಿಯಾಗಿ, ಸಂವಿಧಾನ ಶಿಲ್ಪಿಯಾಗಿ ಜನಸಮುದಾಯದಲ್ಲಿ ವಿವಿಧ ರೂಪಗಳಲ್ಲಿ ಈಗಲೂ ಜೀವಂತವಾಗಿದ್ದಾರೆ. ಸಂವಿಧಾನ ಎಂಬ ಗ್ರಂಥಕ್ಕೆ ಜೀವ ತುಂಬಿ ಈಗಲೂ ಜೀವಂತವಾಗಿದ್ದಾರೆ. ಇಂದಿನ ಜನರು ಅದರ ಅಂತರಂಗವನ್ನು ಅರಿತು ಸಾಮರಸ್ಯದಿಂದ ಜೀವನ ನಡೆಸಬೇಕು. ಅಂಬೇಡ್ಕರ್‌ ಅವರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಎಲ್ಲರೊಳಗೊಂದಾಗಿ ಸಹೋದರತ್ವ ಸಾರಬೇಕು ಮುಂತಾದ ಭಾವನೆಗಳು ನಾಟಕದ ಮೂಲಕ ಹೊರಹೊಮ್ಮಿದವು.

ಪ್ರಸ್ತುತ ಸಂದರ್ಭದ ಬೆಳವಣಿಗೆಗಳು, ಹೊಸ ಹೊಸ ಕಾನೂನಾತ್ಮಕ, ಸಾಮಾಜಿಕ ಆರ್ಥಿಕ ಸಮಸ್ಯೆಗಳು ನಡುವೆ ಸಂವಿಧಾನದ ತತ್ವಗಳನ್ನಾದರಿಸಿ ತೀರ್ಪು ಕೊಡುವ ನ್ಯಾಯಾಲಯಗಳ ಜವಾಬ್ದಾರಿಯ ಬಗ್ಗೆಯೂ ನಾಟಕ ಹೊಸ ನೋಟ ನೀಡಿತು. ಒಂದೂವರೆ ಗಂಟೆ ನಾಟಕ ನೋಡುಗರ ಮನಸ್ಸಿನೊಳಗೆ ಚಿಂತನೆಗಳ ಸಸಿಗೆ ನೀರೆರೆಯಿತು. ಸಂವಿಧಾನ ಹಾಗೂ ಸಂವಿಧಾನ ರೂಪಗೊಂಡ ಬಗ್ಗೆ ಒಳನೋಟ ಒದಗಿಸಿತು.

ಅತ್ಯಂತ ಗಂಭೀರ ಹಾಗೂ ವಾಸ್ತವದ ವಿಚಾರ ಹೊತ್ತ ನಾಟಕವನ್ನು ಶಿವಮೊಗ್ಗ ರಂಗಾಯಣದ ಕಲಾವಿದರು ಮನಮುಟ್ಟುವಂತೆ ಅಭಿನಯಿಸಿದರು. ರಂಗಪ್ರಯೋಗದ ಗಾಂಭೀರ್ಯಕ್ಕೆ ಒಗ್ಗುವಂತೆ ಅತ್ಯಂತ ಸೂಕ್ಷ್ಮ ಹಾಗೂ ಶಾಂತ ನದಿಯಂತೆ ಹರಿದ ಆರ್‌.ಚಂದ್ರಮ್ಮ ಅವರ ಸಂಗೀತ ಸಂಯೋಜನೆ ನೋಡುಗರಲ್ಲಿ ಪೂರಕ ವಾತಾವರಣ ಸೃಷ್ಟಿಸಿತು.

ನಾಟಕ ವಿನ್ಯಾಸದಲ್ಲಿ ಪ್ರಬುದ್ಧತೆ ಮೆರೆದಿರುವ ನಿರ್ದೇಶಕ ಕೆ.ಪಿ.ಲಕ್ಷ್ಮಣ್‌ ಸಂವಿಧಾನದ ಆಶಯವನ್ನು ಜನರ ಮನಸ್ಸಿಗೆ ಇಳಿಲೆತ್ನಿಸಿರುವ ಪರಿ ಜನರಿಗೆ ಇಷ್ಟವಾಯಿತು. ಪಾತ್ರಧಾರಿಗಳು ಪ್ರೇಕ್ಷಕರ ನಡುವೆ ನಿಂತು ಮಾತನಾಡುವ ಪ್ರಯತ್ನ ನಾಟಕೀಯತೆಯನ್ನು ಮೀರಿದ ವಾಸ್ತವಕ್ಕೆ ಸಾಮೀಪ್ಯವಾಯಿತು.

ನಾಲ್ವಡಿ ಕೃಷ್ಣರಾಜ ಕಲಾಮಂದಿರದ ಅವ್ಯವಸ್ಥೆಯ ನಡುವೆಯೂ ಒಂದೊಳ್ಳೆ ನಾಟಕ ಪ್ರದರ್ಶನಗೊಂಡಿತು. ಮತ್ತೆ ಮತ್ತೆ ಎದುರಾಗುತ್ತಿದ್ದ ಧ್ವನಿ ಸಮಸ್ಯೆ ಕಿರಿಕಿರಿ ಎನಿಸಿದರೂ ಕಲಾವಿದರು ಪ್ರೇಕ್ಷಕರ ಮನಮುಟ್ಟಿದರು. ‘ದ ಕಾಶ್ಮೀರ್‌ ಫೈಲ್ಸ್‌’ ಚಲನಚಿತ್ರದ ಜೋರು ಸದ್ದಿನ ನಡುವೆಯೂ ‘ಭಾರತೀಯ ಪ್ರಜೆಗಳಾದ ನಾವು’ ನಾಟಕ ಸದ್ದಿಲ್ಲದೇ ಜನರ ಮನಸ್ಸಿನ ಮನಸ್ಸಿಗೆ ಹರಿಯುತ್ತಿರುವುದು ವಿಶೇಷ ಎನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT