ಗುರುವಾರ , ನವೆಂಬರ್ 14, 2019
18 °C

ಕನ್ನಡದ 'ತಿರುವಳ್ಳವರ್' ಇನ್ನಿಲ್ಲ

Published:
Updated:

ಮಂಡ್ಯ: ತಿರುವಳ್ಳವರ್‌ನ ‘ತಿರುಕ್ಕುರುಳ್‌’ ಕೃತಿಯನ್ನು ಕನ್ನಡಕ್ಕೆ ತಂದು ನಾಲ್ಕು ದಶಕಗಳ ಕಾಲ ಕನ್ನಡ ಹಾಗೂ ತಮಿಳು ಭಾಷೆಗಳ ನಡುವಿನ ಕೊಂಡಿಯಂತಿದ್ದ, ನಿಘಂಟು ತಜ್ಞ ಡಾ.ಪಾ.ಶಾ.ಶ್ರೀನಿವಾಸ್‌ (ಪಾಶಾಶ್ರೀ) (80) ನಗರದ ಗಾಂಧಿನಗರದ ನಿವಾಸದಲ್ಲಿ ಶನಿವಾರ ಅನಾರೋಗ್ಯದಿಂದ ನಿಧನರಾದರು.

ಭಾನುವಾರ ಬೆಳಿಗ್ಗೆ 10 ಗಂಟೆವರೆಗೆ ಅವರ ಮನೆಯಲ್ಲಿ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಧುರೈ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಂಸ್ಥಾಪಕ ಅಧ್ಯಕ್ಷರಾಗಿ ಅವರು 25 ವರ್ಷ ಸೇವೆ ಸಲ್ಲಿಸಿದ್ದರು. ಮದ್ರಾಸ್‌ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಪೀಠದ ಪ‍್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು. ಸಂದರ್ಶನ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ತಮಿಳು–ಕನ್ನಡ ನಿಘಂಟು, ಜ್ಞಾನರಥ, ಪ್ರಸಾದ, ಸಾರೂಪ್ಯ, ವಿಚಾರಣಾ ಕಮೀಷನ್‌, ಕಾವೇರಿ ಸಾಹಿತ್ಯ, ಚಿತ್ತಾರ ಮುಂತಾದ ಕೃತಿ ರಚಿಸಿದ್ದರು. ತಿರುವಳ್ಳವರ್‌ನ ‘ತಿರುಕ್ಕುರುಳ್‌’ ಕೃತಿಯನ್ನು ಕನ್ನಡಕ್ಕೆ ತಂದ ನಂತರ ಅವರು ಕನ್ನಡದ ತಿರುವಳ್ಳವರ್‌ ಎಂದೇ ಪ್ರಸಿದ್ಧಿ ಪಡೆದಿದ್ದರು.

ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಪಾಂಡೇಶ್ವರದವರು. ಅವರ ತಂದೆ ಶಂಕರ್‌ ನಾರಾಯಣ ಬಾಯರಿ ಹೋಟೆಲ್‌ ಕಾಯಕ ಅರಸಿ ನಗರಕ್ಕೆ ಬಂದು ನೆಲೆಸಿದ್ದರು. ಮಂಡ್ಯದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗಲೇ ‘ಕಿರಣ ಸಾಹಿತ್ಯ ಸಂಘ’ ಕಟ್ಟಿ ಕನ್ನಡಪರ ಕಾರ್ಯಕ್ರಮ ಆಯೋಜನೆ ಮಾಡಿದ್ದರು.

ಪ್ರತಿಕ್ರಿಯಿಸಿ (+)