ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಪೊಲೀಸರಿಗೆ ಹಿಡಿದು ಕೊಟ್ಟ ವ್ಯಾಪಾರಿಗಳು

ವಂಚಿಸುತ್ತಿದ್ದ ನಕಲಿ ಮಹಿಳಾ ಅಧಿಕಾರಿ ಬಂಧನ

Published:
Updated:
Prajavani

ಕಿಕ್ಕೇರಿ: ಆಹಾರ ಪರಿವೀಕ್ಷಕಿ ಅಧಿಕಾರಿ ಎಂದು ಹೇಳಿ ಪಟ್ಟಣದಲ್ಲಿ ವ್ಯಾಪಾರಿಗಳನ್ನು ವಂಚಿಸುತ್ತಿದ್ದ ಮಹಿಳೆಯನ್ನು ಗುರುವಾರ ವ್ಯಾಪಾರಿಗಳೇ ತರಾಟೆಗೆ ತೆಗೆದುಕೊಂಡು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಶೋಭಾ ಬಂಧಿತಳು. ಮಹಿಳೆ ಪಟ್ಟಣಕ್ಕೆ ಆಗಾಗ ಬಂದು ಆಹಾರ ಪರಿವೀಕ್ಷಕಿ, ಆಹಾರ ಸುರಕ್ಷತೆ ಗುಣಮಟ್ಟ ಕಾನೂನು ಬಾಹಿರ ವ್ಯಾಪಾರ ನಿರ್ಮೂಲನಾ ಹೋರಾಟ ದಳದವಳು ಎಂದು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಳು. ಜೊತೆಗೆ ಮಾರಾಟ ಲೈಸೆನ್ಸ್ ಪಡೆಯಬೇಕು. ತಮಗೆ ಲೈಸೆನ್ಸ್ ಕೊಡಿಸುವುದಾಗಿ ತಿಳಿಸಿ 20ಕ್ಕೂ ರಸ್ತೆಬದಿಯ ವ್ಯಾಪಾರಿಗಳು, ಕಾಫಿ, ಟೀ ಅಂಗಡಿ, ಕಿರಾಣಿ ಅಂಗಡಿಗಳಿಂದ ₹ 2 ಸಾವಿರ ಹಣ ಪಡೆದಿದ್ದಳು.

ವ್ಯಾಪಾರಿಗಳು ಅನುಮಾನ ಬಂದು ಗಲಾಟೆ ಮಾಡಿದ್ದಾರೆ. ನಂತರ ಮಹಿಳೆ ವರ್ತನೆ, ಬೆದರಿಕೆ ಹಾಕುವುದನ್ನು ಕಂಡು ತೀವ್ರ ವಿಚಾರಣೆ ನಡೆಸಿದಾಗ ಮಾಲೀಕರಲ್ಲಿ ನಕಲಿ ಅಧಿಕಾರಿ ಎಂದು ಖಾತ್ರಿಯಾಗಿದೆ. ನಂತರ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಈಕೆಯ ಹಿಂದೆ ದೊಡ್ಡ ಜಾಲವಿದ್ದು, ಬೆಂಗಳೂರಿನ ನಿವಾಸಿ ಮಂಜೇಗೌಡ ಮಹಿಳೆ ಹಿಂದಿನ ಮಾಸ್ಟರ್ ಮೈಂಡ್. ಆತ  ಕನ್ನಡಪರ ಸಂಘಟನೆ ಹೆಸರಿನಲ್ಲಿ ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ’ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

ಕಿಕ್ಕೇರಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಆರೋಗ್ಯಾಧಿಕಾರಿಗಳ ತಂಡ ಭೇಟಿ: ವಿಷಯ ತಿಳಿದ ಕೂಡಲೇ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಅಂಕಿತ ಅಧಿಕಾರಿ ಡಾ. ಬಾಲಕೃಷ್ಣ ಆರೋಗ್ಯಾಧಿಕಾರಿಗಳ ತಂಡದೊಂದಿಗೆ ಗ್ರಾಮಕ್ಕೆ ಬಂದು ಈಕೆಯ ಮಾಹಿತಿ ಪಡೆದರು.

‘ಆರೋಪಿತ ಮಹಿಳೆ ಯಾವುದೇ ಸರ್ಕಾರಿ ನೌಕರಿಯಲ್ಲಿಲ್ಲ. ಗ್ರಾಮದಲ್ಲಿನ ವಿವಿಧ ಅಂಗಡಿಗಳಿಗೆ ತೆರಳಿ ನಕಲಿ ಅಧಿಕಾರಿಗಳ ಕುರಿತು ಎಚ್ಚರಿಕೆ ಇರಲಿ. ಅಧಿಕೃತ ಅನುಮತಿಯನ್ನು ಪಡೆಯಲು ಗ್ರಾಮ ಪಂಚಾಯಿತಿಯಲ್ಲಿ ಮೊದಲು ಸಂಪರ್ಕವಿಟ್ಟುಕೊಳ್ಳಿ. ಮಧ್ಯವರ್ತಿಗಳೊಂದಿಗೆ ಯಾವುದೇ ವ್ಯವಹಾರ ನಡೆಸಿ ಮೋಸ ಹೋಗದಿರಿ’ ಎಂದು ಡಾ. ಬಾಲಕೃಷ್ಣ  ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಹರೀಶ್, ಹಿರಿಯ ಆಹಾರ ಸುರಕ್ಷತಾಧಿಕಾರಿ ನಾಗರಾಜು, ಆರೋಗ್ಯ ಸಹಾಯಕರಾದ ಧರ್ಮೆಂದ್ರ, ನಾಗೇಂದ್ರ, ಬಸವರಾಜು ಇದ್ದರು.

Post Comments (+)