ಶನಿವಾರ, ನವೆಂಬರ್ 23, 2019
18 °C
ಅಂಬರಹಳ್ಳಿಯಲ್ಲಿ ರಾಗಿಮುದ್ದೆ ಉಣ್ಣುವ ಸ್ಪರ್ಧೆ‌

ಪೈಪೋಟಿಯಲ್ಲಿ ಆರು ಮುದ್ದೆ ತಿಂದು ಬಹುಮಾನ ಗೆದ್ದ ಚಿಕ್ಕರಸಿನಕೆರೆ ಭೂಪ!

Published:
Updated:
Prajavani

ಭಾರತೀನಗರ: ಸಮೀಪದ ಅಂಬರಹಳ್ಳಿ ಗ್ರಾಮದಲ್ಲಿ ಗೆಳೆಯರ ಬಳಗದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಶನಿವಾರ ಆಯೋಜಿಸಿದ್ದ ನಾಟಿ ಕೋಳಿ ಸಾರಿನಲ್ಲಿ ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಚಿಕ್ಕರಸಿನಕೆರೆ ಸುರೇಶ ಅವರು ಆರು ಮುದ್ದೆ ಮುದ್ದೆ (3 ಕೆ.ಜಿ.) ಉಂಡು ಪ್ರಥಮ ಬಹುಮಾನವಾಗಿ ₹4000 ಪಡೆದರು.

ಶ್ರೀರಂಗಪಟ್ಟಣ ತಾಲ್ಲೂಕು ಹುರುಳಿಕ್ಯಾತನಹಳ್ಳಿ ಗ್ರಾಮದ ವೆಂಕಟೇಶ ಅವರು 2.5 ಕೆ.ಜಿ ಮುದ್ದೆ ಉಂಡು ದ್ವಿತೀಯ ಬಹುಮಾನ (₹2000 ನಗದು) ಪಡೆದರು. ಅಂಬರಹಳ್ಳಿ ಸೋಮಶೇಖರ್‌ 2.3 ಕೆ.ಜಿ. ಮುದ್ದೆ ಉಂಡು ತೃತೀಯ ಬಹುಮಾನ (₹500) ಪಡೆದುಕೊಂಡರು.

ಗ್ರಾಮದ ಹಾಲಿನ ಡೇರಿ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ 30ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು. ರಾಗಿಮುದ್ದೆ ಉಣ್ಣುವ ಸ್ಪರ್ಧೆಯನ್ನು ಗ್ರಾಮಸ್ಥರು ಬಹಳ ಕುತೂಹಲದಿಂದ ವೀಕ್ಷಿಸಿದರು.

15 ವರ್ಷ ಮೇಲ್ಪಟ್ಟ ಗ್ರಾಮದ ಪುರುಷ ಮತ್ತು ಮಹಿಳೆಯರಿಗಾಗಿ ನಡೆದ ಮಡಕೆ ಹೊಡೆಯುವ ಸ್ಪರ್ಧೆ ರೋಚಕವಾಗಿತ್ತು.

ಪುರುಷರ ವಿಭಾಗದಲ್ಲಿ ಎ.ಎಂ. ಮಾದೇಗೌಡ ಅವರು ಪ್ರಥಮ ಬಹುಮಾನವಾಗಿ ಎಲ್‌ಇಡಿ ಟಿ.ವಿ ಪಡೆದರು. ಮಹಿಳೆಯರ ವಿಭಾಗದಲ್ಲಿ ವಿದ್ಯಾ ಪ್ರಥಮ ಬಹುಮಾನವಾಗಿ ಎಲ್‌ಇಡಿ ಟಿ.ವಿ ಪಡೆದರು. ಪಾಲ್ಗೊಂಡಿದ್ದ ಸ್ಪರ್ಧಾರ್ಥಿಗಳಿಗೆ ಸಸಿ ವಿತರಿಸಲಾಯಿತು.

ದಾರಿದೀಪ ಕ್ರಿಯಾ ಸಮಿತಿಯ ಅಧ್ಯಕ್ಷ ಗೆಜ್ಜಲಗೆರೆ ಶಿವಸ್ವಾಮಿ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ‘ವಿಜ್ಞಾನ ಬೆಳೆದಂತೆಲ್ಲಾ ನಮ್ಮ ಆಹಾರ ಸಂಸ್ಕೃತಿಯೂ ಬದಲಾಗುತ್ತಿದೆ. ನಮ್ಮ ಪೂರ್ವಜರ ಆಹಾರ ಸಂಸ್ಕೃತಿಯೇ ಶ್ರೇಷ್ಠ. ಅದನ್ನು ರೂಢಿಸಿಕೊಂಡರೆ ನಮ್ಮ ಉಳಿವು ಸಾಧ್ಯ’ ಎಂದರು.

ಮುಖಂಡ ಬೆಕ್ಕಳಲೆ ಮಲ್ಲೇಶ, ದಸಂಸ ತಾಲ್ಲೂಕು ಸಂಚಾಲಕ ಗುಡಿಗೆರೆ ಬಸವರಾಜ ಮಾತನಾಡಿದರು. ಗ್ರಾ.ಪಂ ಸದಸ್ಯರಾದ ಎ.ಎಸ್. ಮನೋಹರ, ಚಿಕ್ಕಬೊಮ್ಮಯ್ಯ, ಪದಾಧಿಕಾರಿಗಳಾದ ಎ.ಕೆ. ಗೌರೀಶ, ರಘು, ಶಂಕರ, ಪ್ರಸನ್ನ, ನವೀನ, ಎ.ಎಸ್. ಶೇಖರ, ರವಿ, ಪ್ರಭಾಕರ, ಭಾಸ್ಕರ, ಅರುಣ, ರಾಮಣ್ಣ, ಸ್ವಾಮಿ, ನಾಗೇಶ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)