ಬುಧವಾರ, ಅಕ್ಟೋಬರ್ 23, 2019
20 °C
ನೀತಿ ಸಂಹಿತೆ ಜಾರಿ, ಸೆ.23ರಂದು ಅಧಿಸೂಚನೆ, ನಾಮಪತ್ರ ಸಲ್ಲಿಸಲು ಸೆ. 30 ಕೊನೆಯ ದಿನ

ಅ.21ಕ್ಕೆ ಕೆ.ಆರ್‌.ಪೇಟೆ ಉಪಚುನಾವಣೆ

Published:
Updated:
Prajavani

ಮಂಡ್ಯ: ಕೆ.ಆರ್‌.ಪೇಟೆ ವಿಧಾನಸಭೆ ಉಪಚುನಾವಣೆ ದಿನಾಂಕ ನಿಗದಿ ಯಾಗಿದ್ದು, ತತ್‌ಕ್ಷಣದಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೆ. 23ರಂದು ಅಧಿಸೂಚನೆ ಹೊರಬೀಳಲಿದ್ದು, ಸೆ.30 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಅ. 1ರಂದು ನಾಮಪತ್ರ ಪರಿಶೀಲನೆ, ಅ.3ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ, ಅ.21ರಂದು ಮತದಾನ ನಡೆಯಲಿದ್ದು, ಅ.24ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ. ಚುನಾವಣಾ ಪ್ರಕ್ರಿಯೆ ಅ.27ರಂದು ಮುಗಿಯಲಿದೆ’ ಎಂದು ತಿಳಿಸಿದರು.

ಸೆ. 20ರ ಪ್ರಕಾರ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 258 ಮತಗಟ್ಟೆಗಳಿದ್ದು, ಪುರುಷ ಮತದಾರರು 1,05,848, ಮಹಿಳಾ ಮತದಾರರು 1,02,533, ಇತರೆ ಮೂರು ಸೇರಿದಂತೆ ಒಟ್ಟು 2,08,384 ಮತದಾರರಿದ್ದಾರೆ ಎಂದರು.

516 ಕಂಟ್ರೋಲ್‌ ಯುನಿಟ್‌, ಬ್ಯಾಲೆಟ್‌ ಯೂನಿಟ್‌, ವಿವಿ ಪ್ಯಾಟ್‌ಗಳು ಮೈಸೂರಿನಿಂದ ಕೆ.ಆರ್‌.ಪೇಟೆಗೆ ಚುನಾವಣೆಯ ಸಂದರ್ಭದಲ್ಲಿ ರವಾನೆಯಾಗಲಿದೆ. ಕೆ.ಆರ್‌.ಪೇಟೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಓರ್ವ ನೋಡಲ್‌ ಅಧಿಕಾರಿ, 4 ಸ್ಥಿರ ಜಾಗೃತಿ ತಂಡ (ಎಸ್‌ಎಸ್‌ಟಿ), 6 ಸಂಚಾರಿ ತಪಾಸಣಾ ದಳ (ಎಫ್‌ಎಸ್‌ಟಿ), 3 ವಿಡಿಯೊ ಜಾಗೃತಿ ತಂಡ (ವಿಎಸ್‌ಟಿ), 1 ವಿಡಿಯೊ ವೀಕ್ಷಣಾ ತಂಡ (ವಿವಿಟಿ) ಕಾರ್ಯ ನಿರ್ವಹಣೆ ಮಾಡಲಿದ್ದು, ಚುನಾವಣಾ ಆಯೋಗದ ದೂರವಾಣಿ ಸಂಖ್ಯೆ 1950ಕ್ಕೆ ಕರೆ ಮಾಡಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರು ನೀಡಬಹುದು ಎಂದು ಹೇಳಿದರು.

ನೀತಿ ಸಂಹಿತೆ ಜಾರಿ ಇರುವುದರಿಂದ ಕ್ಷೇತ್ರದಲ್ಲಿ ಜಾಹೀರಾತುಗಳನ್ನು ತೆರವುಗೊಳಿಸಲಾಗುವುದು. ಅವಶ್ಯಕ, ತುರ್ತು ಕಾಮಗಾರಿಗೆ ಅವಕಾಶ ನೀಡಲಾಗಿದ್ದು, ಬರ ಪರಿಹಾರ, ಕುಡಿಯುವ ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಬಹುದು. ಯಾವುದಾದರೂ ಕಾಮಗಾರಿ ಕೈಗೊಳ್ಳಬೇಕಿದ್ದರೆ ಚುನಾವಣಾಧಿಕಾರಿ ಗಮನಕ್ಕೆ ತರಬೇಕು. ಚುನಾವಣಾ ಜಾಹೀರಾತಿಗೆ ಸಂಬಂಧಿಸಿದಂತೆ ಅನುಮತಿ ಪಡೆಯಬೇಕು. ಚುನಾವಣೆಗಾಗಿ ಜಿಲ್ಲಾ ಮತ್ತು ತಾಲ್ಲೂಕಿನಲ್ಲಿ ಕಂಟ್ರೋಲ್‌ ರೂಂ ತೆರೆಯಲಾಗುತ್ತದೆ. ನಿಷ್ಪಕ್ಷಪಾತ, ಪಾರದರ್ಶಕ, ಮುಕ್ತ ಚುನಾವಣೆಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕೆ.ಆರ್‌.ಪೇಟೆಯನ್ನು ಹೊರತು ಪಡಿಸಿ ಉಳಿದ ತಾಲ್ಲೂಕಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಯಾವುದೇ ನಿರ್ಬಂಧವಿಲ್ಲ. ಬೇರೆ ತಾಲ್ಲೂಕುಗಳಲ್ಲಿ ಎಂದಿನಂತೆ ಅ.15 ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ತಿದ್ದುಪಡಿ, ಸೇರ್ಪಡೆ, ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್‌, ವಾರ್ತಾಧಿಕಾರಿ ಹರೀಶ್‌ ಇದ್ದರು.

ಹೆಸರು ಸೇರ್ಪಡೆಗೆ ಸೆ.23 ಕೊನೇ ದಿನ

ಕೆ.ಆರ್‌.ಪೇಟೆ ಚುನಾವಣಾ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರಿಸುವವರು ಸೆ. 23ರಂದು ಸಂಜೆಯೊಳಗೆ ಅರ್ಜಿ ಸಲ್ಲಿಸಹುದು. ಹೆಸರು ತೆಗೆಸಲು, ತಿದ್ದುಪಡಿ ಮಾಡಲು ಯಾವುದೇ ಅವಕಾಶವಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಸ್ಪಷ್ಟಪಡಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)