ಗುರುವಾರ , ಸೆಪ್ಟೆಂಬರ್ 23, 2021
28 °C

ಮಂಡ್ಯ: ಸ್ಫೋಟಕ ದುರುಪಯೋಗ, ತನಿಖೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ವಶಪಡಿಸಿಕೊಳ್ಳಲಾಗಿದ್ದ ಸ್ಫೋಟಕ ದುರುಪಯೋಗ ಪ್ರಕರಣದಲ್ಲಿ ಇಲ್ಲಿವರೆಗೆ ಮೂವರನ್ನು ಮಾತ್ರ ಬಂಧಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಪೊಲೀಸರೇ ಪ್ರಮುಖ ಆರೋಪಿಗಳಾಗಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಒತ್ತಾಯಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಕ್ರಮ ಸ್ಫೋಟಕ ಸಾಗಣೆ ಪ್ರಕರಣಗಳಲ್ಲಿ ಪೊಲೀಸರು ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದರು. ಸ್ಫೋಟಕಗಳನ್ನು ನಾಶಪಡಿಸುವವರೆಗೂ ಪೊಲೀಸರು ಅಧಿಕೃತ ಪರವಾನಗಿ ಪಡೆದಿದ್ದ ಪಾಂಡವಪುರ ತಾಲ್ಲೂಕು, ರಂಗನಕೊಪ್ಪಲು ಗ್ರಾಮದಲ್ಲಿ ನಾಜೀಮುಲ್ಲಾ ಷರೀಷ್‌ಗೆ ಸೇರಿದ ಮ್ಯಾಗಜಿನ್‌ ( ಸ್ಫೋಟಕ ಸಂಗ್ರಹಾಲಯ) ಸಂಗ್ರಹಿಸಿ ಸ್ವೀಕೃತಿ ಪಡೆದಿದ್ದರು’ ಎಂದರು.

‘ಬೆಂಗಳೂರಿನ ಬಿಡಿಡಿಎಸ್ ತಂಡದ ಅಧಿಕಾರಿಗಳು ಸ್ಫೋಟಕ ನಾಶಪಡಿಸಲು ಬಂದಾಗ ಕೆಲ ಪ್ರಮಾಣದ ಸ್ಫೋಟಕ ನಾಪತ್ತೆಯಾಗಿರುವುದು ಪತ್ತೆಯಾಗಿತ್ತು. 6 ಸಾವಿರ ಎಲೆಕ್ಟ್ರಿಕ್ ಡಿಟೋನೇಟರ್‌ ಪೈಕಿ ಕೇವಲ 2 ಸಾವಿರ ಮಾತ್ರ ಇದ್ದು, ಉಳಿದ 4 ಸಾವಿರ ಡಿಟೋನೇಟರ್‌ ಇರಲಿಲ್ಲ. 800 ನಾನ್ ಎಲೆಕ್ಟ್ರಿಕ್ ಡಿಟೋನೇಟರ್‌ ಪೈಕಿ ಕೇವಲ 220 ಇದ್ದವು, ಉಳಿದ 580 ಇರಲಿಲ್ಲ. 14,400 ಜಿಲೆಟಿನ್‌ ಪೈಕಿ ಒಂದೂ ಜಿಲೆಟಿನ್‌ ಇರಲಿಲ್ಲ ಎಂದು ಬಿಡಿಡಿಎಸ್ ಅಧಿಕಾರಿಗಳು ವರದಿ ನೀಡಿದ್ದರು’ ಎಂದರು.

‘ವರದಿ ಆಧಾರದ ಮೇಲೆ  ನಾಜೀಮುಲ್ಲಾ ಷರೀಫ್ ವಿರುದ್ಧ ಪಾಂಡವಪುರ ಪಿಎಸ್ಐ ಪೂಜಾ ಕುಂಟೋಜಿ ದೂರು ನೀಡಿದ್ದರು. ನಂತರ ಎಫ್‌ಐಆರ್‌ ದಾಖಲು ಮಾಡಲಾಗಿತ್ತು. ಪ್ರಕರಣದಲ್ಲಿ ನಾಜೀಮುಲ್ಲಾ ಷರೀಫ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಗಣಿ ಮಾಲೀಕರು ಸೇರಿ ಒಟ್ಟು 24 ಮಂದಿಯನ್ನು ಈವರೆಗೂ ಬಂಧಿಸಿಲ್ಲ’ ಎಂದು ಆರೋಪಿಸಿದರು.

‘ಪೊಲೀಸರು ಸ್ಫೋಟಕಗಳನ್ನು ಒಂದೆಡೆ ಸಂಗ್ರಹಿಸಿದ ನಂತರ ಅಲ್ಲಿಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕಾಗಿತ್ತು. ಸ್ಪೋಟಕಗಳನ್ನು ಬೇರೊಬ್ಬರ ವಶಕ್ಕೆ ನೀಡುವ ಮೂಲಕ ಪೊಲೀಸರು ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಗಣಿ ಮಾಲೀಕರನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ದಸಂಸ ಮುಖಂಡ ಗುರುಪ್ರಸಾದ್‌ ಕೆರಗೋಡು, ಮುಖಂಡರಾದ ಲಿಂಗಪ್ಪಾಜಿ, ಮಂಚೇಗೌಡ, ರವಿಕುಮಾರ್ ಇದ್ದರು.

ಎಸ್‌ಪಿ ಪ್ರತಿಕ್ರಿಯೆ: ‘ಸ್ಫೋಟಕ ವಶಕ್ಕೆ ಪಡೆದ ನಂತರ ಪಂಚನಾಮೆ ಮಾಡಿ ಕೋರ್ಟ್‌ ಅನುಮತಿ ಮೇರೆಗೆ ಸಂಗ್ರಹಾಲಯದಲ್ಲಿ ಸಂಗ್ರಹಿಸಲಾಗಿತ್ತು. ಸಂಗ್ರಹಿಸಿದ್ದ ಸ್ಫೋಟಕ ದುರುಪಯೋಗ ಆಗಿರುವುದು ಗೊತ್ತಾದ ಕೂಡಲೇ ಆರೋಪಿಗಳ ವಿರುದ್ಧ ಎಫ್‌ಐಆರ್‌ ಮಾಡಿ ಬಂಧಿಸಲಾಗಿದೆ. ಇದರಲ್ಲಿ ಪೊಲೀಸರು ನಿಯಮಾನುಸಾರ ಕೆಲಸ ಮಾಡಿದ್ದಾರೆ. ಇಲ್ಲಿ ಯಾರನ್ನೂ ರಕ್ಷಣೆ ಮಾಡಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಸ್‌.ಅಶ್ವಿನಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.