ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀನಗರ:ಮೂವರನ್ನು ಬಲಿ ಪಡೆದ ‘ಅನೈತಿಕ ಸಂಬಂಧ’

Last Updated 4 ನವೆಂಬರ್ 2020, 1:27 IST
ಅಕ್ಷರ ಗಾತ್ರ

ಭಾರತೀನಗರ: ಸಮೀಪದ ಬೋರಾಪುರ ಗ್ರಾಮದಲ್ಲಿ ಸೋಮವಾರ ಮಹಿಳೆಯೋರ್ವರು ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ ತಾನು ಕೂಡ ವಿಷವನ್ನುಂಡು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಯಲ್ಲಿ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಮತ್ತು ಪುತ್ರ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದು, ಈ ಘಟನೆಯಲ್ಲಿ ವಿಷವನ್ನುಂಡಿದ್ದ ಒಟ್ಟು ಮೂವರು ಮೃತಪಟ್ಟಂತಾಗಿದೆ.

ಗ್ರಾಮದ ನೇತ್ರಾವತಿ (32) ಎಂಬುವವರು ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ಸೋಮವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯಲ್ಲಿ ನೇತ್ರಾವತಿ ಅವರ 9 ವರ್ಷದ ಪುತ್ರಿ ಶೋಭಿತಾ ಸೋಮವಾರವೇ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ತಾಯಿ ನೇತ್ರಾವತಿ ಅವರು ಮಂಡ್ಯದ ಮಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು.7 ವರ್ಷದ ಪುತ್ರ ನಂದೀಶನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಚೆಲುವಾಂಬ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಿಗ್ಗೆ ತಾಯಿ ಮತ್ತು ಪುತ್ರ ಇಬ್ಬರೂ ಮೃತರಾದರು.

ಮೃತರಾದ ತಾಯಿ ಮಕ್ಕಳ ಶವವನ್ನು ಗ್ರಾಮಕ್ಕೆ ತಂದಾಗ ನೂರಾರು ಜನರು ನೆರೆದು, ಘಟನೆಗೆ ಮರುಕಪಟ್ಟು ಕಣ್ಣೀರಿಟ್ಟರು. ಮೂವರನ್ನು ಅಕ್ಕಪಕ್ಕದಲ್ಲೇ ಮಲಗಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ನಡೆದಿದ್ದೇನು: ಗೆಜ್ಜಲಗೆರೆ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ನೇತ್ರಾವತಿ ಅವರು ಕಳೆದ 11 ವರ್ಷಗಳ ಹಿಂದೆ ಸೋಮ ಎಂಬಾತನನ್ನು ಮದುವೆಯಾಗಿದ್ದರು. ಮದ್ಯವ್ಯಸನಿಯಾಗಿದ್ದ ಸೋಮ ಕಳೆದ 4 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಮೃತರಾಗಿದ್ದರು.

ಗಂಡನನ್ನು ಕಳೆದುಕೊಂಡು ನೊಂದಿದ್ದ ನೇತ್ರಾವತಿಗೆ ಅದೇ ಗ್ರಾಮದ ಆನಂದ್‌ ಎಂಬಾತ ಮದುವೆಯಾಗುವುದಾಗಿ ನಂಬಿಸಿ, ಅಕ್ರಮ ಸಂಬಂಧ ಬೆಳೆಸಿದ್ದ. ಆದರೆ ಆನಂದ್‌ ಅವರು ಕಳೆದ 15 ದಿನಗಳ ಹಿಂದೆ ಅದೇ ಗ್ರಾಮದ ಸಿದ್ದೇಗೌಡ ಅವರ ಪತ್ನಿ ಸಿಂಧೂ ಅವರ ಜೊತೆ ಓಡಿ ಹೋಗಿ ತಲೆ ಮರೆಸಿಕೊಂಡಿದ್ದ. ಈ ವಿಚಾರ ತಿಳಿದ ನೇತ್ರಾವತಿ ಮಾನಸಿಕ ಖಿನ್ನತೆಗೊಳಗಾಗಿದ್ದರು. ಸೋಮವಾರ ತನ್ನಿಬ್ಬರು ಮಕ್ಕಳಿಗೆ ವಿಷ ನೀಡಿ ತಾನು ವಿಷ ಕುಡಿದಿದ್ದರು. ಇದನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು.

‌ನೇತ್ರಾವತಿ ಅತ್ತೆ ಗೌರಮ್ಮ ಅವರ ದೂರಿನನ್ವಯ ತನಿಖೆ ಕೈಗೊಂಡ ಭಾರತೀನಗರ ಪೊಲೀಸರು ಆತ್ಮಹತ್ಯೆಗೆ ಕಾರಣನಾದ ಆನಂದ್‌ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಆತನ ಜತೆಯಲ್ಲಿ ಒಬ್ಬ ಪುತ್ರಿಯನ್ನು ಬಿಟ್ಟು ಓಡಿ ಹೋಗಿದ್ದ ಸಿದ್ದೇಗೌಡ ಅವರ ಪತ್ನಿ ಸಿಂಧೂ ಅವರನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT