ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯೇ ಇಲ್ಲಿ ಬಸ್‌ ನಿಲ್ದಾಣ!

ತಂಗುದಾಣ ಪ್ರವೇಶಿಸದ ಸಾರಿಗೆ ಸಂಸ್ಥೆ ಬಸ್‌ಗಳು; ಪ್ರಯಾಣಿಕರ ಪರದಾಟ
Last Updated 25 ಮೇ 2018, 8:46 IST
ಅಕ್ಷರ ಗಾತ್ರ

ನರಗುಂದ: ತಾಲ್ಲೂಕಿನ ಕೊಣ್ಣೂರು ಗ್ರಾಮದಲ್ಲಿ ಚಾಲಕರು ಬಸ್‌ಗಳನ್ನು ರಸ್ತೆ ಮೇಲೆ ನಿಲ್ಲಿಸುತ್ತಿದ್ದಾರೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯೇ ಇಲ್ಲಿ ಬಸ್‌ ನಿಲ್ದಾಣ ಆಗಿ ಪರಿವರ್ತನೆ ಆಗಿದ್ದು, ಪ್ರಯಾಣಿಕರು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಆರಂಭವಾಗಿದೆ. ಸದ್ಯ ಬಸ್‌ನಿಲ್ದಾಣದ ಎದುರಿಗೆ ಕಾಮಗಾರಿ ನಡೆಯುತ್ತಿದೆ. ಇದನ್ನೇ ನೆಪ ಮಾಡಿಕೊಂಡು ಒಂದು ಭಾಗದಿಂದ ಬಸ್‌ಗಳು ನಿಲ್ದಾಣದೊಳಗೆ ಪ್ರವೇಶಿಸಲು ಅವಕಾಶ ಇದ್ದರೂ, ಬಸ್‌ಗಳು ನಿಲ್ದಾಣದೊಳಗೆ ಪ್ರವೇಶಿಸದ ಕಾರಣ ಪ್ರಯಾಣಿಕರು ಉರಿ ಬಿಸಿಲಿನಲ್ಲಿ ಹೆದ್ದಾರಿಯಲ್ಲಿ ಬಸ್‌ಗಾಗಿ ಕಾಯುತ್ತಾ ನಿಲ್ಲುವುದು ಅನಿವಾರ್ಯವಾಗಿದೆ. ಬಿಸಿಲಿನ ಜತೆ ದೂಳಿನ ಸಮಸ್ಯೆ ಕೂಡ ಸಹಿಸಿಕೊಳ್ಳಬೇಕು.

ಮಹಿಳೆಯರು, ವೃದ್ದರು, ಗರ್ಭಿಣಿಯರ ಪಾಡಂತೂ ಹೇಳತೀರದು. ಹೆದ್ದಾರಿ ಮೇಲೆ ಜನದಟ್ಟಣೆ ಹೆಚ್ಚಾಗಿ ಅಪಘಾತವಾಗುವ ಸಾಧ್ಯತೆ ಕೂಡ ಹೆಚ್ಚಾಗಿದೆ.

ಕೊಣ್ಣೂರು ತಾಲ್ಲೂಕಿನ ದೊಡ್ಡ ಗ್ರಾಮವಾಗಿದೆ. ಇದು ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಬಾಗಲಕೋಟೆ, ಇಳಕಲ್‌, ಬಾದಾಮಿ, ವಿಜಯಪುರ, ಸೊಲ್ಲಾಪುರ, ಹುಬ್ಬಳ್ಳಿ, ಬೆಂಗಳೂರಿಗೆ ಹೋಗುವ ಬಸ್‌ಗಳು ಇದೇ ಹೆದ್ದಾರಿ ಮೂಲಕ ಸಂಚರಿಸುತ್ತವೆ. ನಿತ್ಯ ಸಾರಿಗೆ ಸಂಸ್ಥೆಯ 100ಕ್ಕೂ ಹೆಚ್ಚು ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಅಲ್ಲದೆ, ಖಾಸಗಿ ವಾಹನಗಳ ಅಬ್ಬರ ಈ ರಸ್ತೆಯಲ್ಲಿ ಜೋರಾಗಿದೆ.

‘2 ಎಕರೆ ವಿಶಾಲವಾಗಿರುವ ಬಸ್ ನಿಲ್ದಾಣದೊಳಗೆ ಪ್ರವೇಶಿಸಲು ಅವಕಾಶ ಇದ್ದರೂ ಚಾಲಕರು ರಸ್ತೆಯ ಮೇಲೆಯೇ ಬಸ್‌ ನಿಲ್ಲಿಸುತ್ತಾರೆ. ಕೇಳಿದರೆ, ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಪ್ರಯಾಣಿಕರು ಗೋಳು ತೋಡಿಕೊಂಡರು.

**
ನಿಲ್ದಾಣ ಪ್ರವೇಶಿಸಿಸದ ಬಸ್‌ಗಳ ಮೇಲೆ ಗಮನಹರಿಸುವಂತೆ ನಿಲ್ದಾಣ ನಿಯಂತ್ರಣಾಧಿಕಾರಿಗೆ ಸೂಚಿಸಲಾಗುವುದು. ಈ ಕುರಿತು ಕೂಡಲೇ ಕ್ರಮ ವಹಿಸಲಾಗುವುದು
– ಬಿ.ಪಿ.ಬೆಳವಟಗಿ, ನರಗುಂದ ಸಾರಿಗೆ ವಿಭಾಗದ ವ್ಯವಸ್ಥಾಪಕ

ಬಸವರಾಜ ಹಲಕುರ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT