ಗುರುವಾರ , ಜೂನ್ 24, 2021
29 °C
ಶ್ರೀರಂಗಪಟ್ಟಣ ತಾಲ್ಲೂಕು ಕಚೇರಿ ಮುಂದೆ ಧರಣಿ: ಪರಿಹಾರ ಘೋಷಿಸಲು ಆಗ್ರಹ

ತರಕಾರಿ, ಹೂವು ಸುರಿದು ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಸರ್ಕಾರ ಲಾಕ್‌ಡೌನ್‌ ಘೋಷಿಸಿದ ಬಳಿಕ ತರಕಾರಿ, ಹೂವು, ಹಣ್ಣು ಇತರ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಮಿನಿ ವಿಧಾನಸೌಧ ಎದುರು ತರಕಾರಿ, ಹಣ್ಣು ಮತ್ತು ಹೂ ಸುರಿದು ಪ್ರತಿಭಟಿಸಿದರು. ‘ಕಳೆದ 20 ದಿನಗಳಿಂದ ತರಕಾರಿ, ಹೂ, ಹಣ್ಣೂಗಳನ್ನು ಕೇಳುವವರೇ ಇಲ್ಲ. ಹೊಲದಿಂದ ಕೊಯ್ದ ಫಸಲನ್ನು ರೈತರು ಸಿಕ್ಕ ಸಿಕ್ಕಲ್ಲಿ ಸುರಿಯುತ್ತಿದ್ದಾರೆ. ಮತ್ತೆ ಕೆಲವರು ದನ, ಎಮ್ಮೆಗಳಿಗೆ ತಿನ್ನಿಸುತ್ತಿದ್ದಾರೆ. ಮತ್ತೂ ಕೆಲವರು ಬೇಸತ್ತು ಬೆಳೆಯನ್ನೇ ನಾಶ ಮಾಡುತ್ತಿದ್ದಾರೆ. ಶೇ 30ರಷ್ಟು ರೈತರು ಹಣ್ಣು, ತರಕಾರಿ ಬೆಳೆದು ಸಾಲದ ಸುಳಿಗೆ ಸಿಲುಕಿದ್ದಾರೆ. ಇಷ್ಟಾದರೂ ಶಾಸಕರು, ಸಚಿವರು, ಸಂಸದರು ಹಾಗೂ ಸರ್ಕಾರ ಬೆಳೆ ನಷ್ಟದ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಪಿಎಸ್‌ಎಸ್‌ಕೆ ನಿರ್ದೇಶಕ ಪಾಂಡು ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವರು ಕೊರೊನಾ, ಲಸಿಕೆ, ಆಸ್ಪತ್ರೆ, ಆಮ್ಲಜನಕದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇಲ್ಲದೆ ರೈತರ ಸಂಕಟದ ಸ್ಥಿತಿ ಅನುಭವಿಸುತ್ತಿದರೂ ಈ ಬಗ್ಗೆ ಮಾತನಾಡುತ್ತಿಲ್ಲ. ಕೃಷಿ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ ರೈತರಿಗೆ ಸೂಕ್ತ ಬೆಲೆ ನೀಡಬೇಕು. ಆಗದಿದ್ದರೆ ವೈಜ್ಞಾನಿಕ ಪರಿಹಾರ ಘೋಷಿಸಬೇಕು’ ಎಂದು ಆಗ್ರಹಿಸಿದರು.

‘ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಭತ್ತ ಮತ್ತು ರಾಗಿಯ ಹಣ ಸಾಕಷ್ಟು ರೈತರಿಗೆ ಬಂದಿಲ್ಲ. ತಕ್ಷಣ ಹಣ ಬಿಡುಗಡೆ ಮಾಡಬೇಕು. ಬೇಸಿಗೆ ಭತ್ತದ ಬೆಳೆ ಕಟಾವಿಗೆ ಯಂತ್ರಗಳನ್ನು ತರಿಸಲು ಕ್ರಮ ವಹಿಸಬೇಕು’ ಎಂದು ಜಯರಾಮೇಗೌಡ ಒತ್ತಾಯಿಸಿದರು.

ರೈತ ಸಂಘದ ಗೌರವಾಧ್ಯಕ್ಷ ಬಿ.ಎಸ್‌. ರಮೇಶ್‌, ಕಾರ್ಯದರ್ಶಿ ಶಂಕರೇಗೌಡ, ಪಾ.ಲ. ರಾಮೇಗೌಡ ಮಾತನಾಡಿದರು. ಕೃಷಿಕ ಸಮಾಜದ ನಿರ್ದೇಶಕ ಕಡತನಾಳು ಬಾಲಕೃಷ್ಣ, ಟಿ.ಸಿ. ದೇವೇಗೌಡ, ಕೆಂಪೇಗೌಡ, ಲೋಕೇಶ್‌, ತಮ್ಮೇಗೌಡ, ಸಬ್ಬನಕುಪ್ಪೆ ಮಧು, ಜಯರಾಮೇಗೌಡ, ದೊಡ್ಡಪಾಳ್ಯ ಕೃಷ್ಣೇಗೌಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು