ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ರಾಗಿ ಬೆಳೆದವರ ಗೋಳು ಕೇಳುವವರಾರು?

ಬೆಂಬಲ ಬೆಲೆ ಯೋಜನೆಯಡಿ ಅತೀ ಕಡಿಮೆ ರಾಗಿ ಖರೀದಿ, ಕಡಿಮೆ ಬೆಲೆಗೆ ಮಾರಿದ ರೈತರು
Last Updated 30 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಮಳೆಯಾಶ್ರಿತ ಪ್ರದೇಶದಲ್ಲಿ ರಾಗಿ ಬೆಳೆಯುವ ರೈತರ ಸಂಖ್ಯೆ ಹಾಗೂ ರಾಗಿ ಬೆಳೆಯವ ಪ್ರದೇಶ ದಿನೇದಿನೇ ಹೆಚ್ಚಾಗುತ್ತಿದೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬೆಂಬಲ ಬೆಲೆ ಯೋಜನೆಯ ಲಾಭ ರೈತರಿಗೆ ಸಿಗದೇ ರಾಗಿ ಬೆಳೆದವರು ಗೋಳಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ 55,088 ಹೆಕ್ಟೇರ್‌ ಪ್ರದೇಶದಲ್ಲಿ 12 ಲಕ್ಷ ಕ್ವಿಂಟಲ್‌ ರಾಗಿ ಬೆಳೆದಿದ್ದಾರೆ. ಸರ್ಕಾರ ಸರಿಯಾದ ಸಮಯದಲ್ಲಿ ಬೆಂಬಲ ಬೆಲೆ ಯೋಜನೆ (ಎಂಎಸ್‌ಪಿ) ಜಾರಿಗೊಳಿಸದ ಕಾರಣ ಒಟ್ಟು ಉತ್ಪನ್ನದಲ್ಲಿ ಶೇ 10ರಷ್ಟು ರಾಗಿಯನ್ನೂ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಸಾಧ್ಯವಾಗಿಲ್ಲ.

ಎಂಎಸ್‌ಪಿ ಅಡಿ ಈ ಬಾರಿ 2 ಹಂತದಲ್ಲಿ ರಾಗಿ ಖರೀದಿ ಮಾಡಲಾಗಿದ್ದು ಇತ್ತೀಚೆಗಷ್ಟೇ ಪೂರ್ಣಗೊಂಡ ಪ್ರಕ್ರಿಯೆಯಲ್ಲಿ 4 ಸಾವಿರ ರೈತರು ಕೇವಲ 70 ಸಾವಿರ ಕ್ವಿಂಟಲ್‌ ರಾಗಿ ಮಾರಾಟ ಮಾಡಿದ್ದಾರೆ. ನಿಗದಿಯಂತೆ ಮೇ 25ರಂದು ಖರೀದಿ ಪ್ರಕ್ರಿಯೆ ಆರಂಭವಾಗಬೇಕಾಗಿತ್ತು. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ಅಂದು ನೋಂದಣಿ, ಖರೀದಿ ಪ್ರಕ್ರಿಯೆಯೇ ನಡೆಯಲಿಲ್ಲ.

ಏ. 26ರಂದು ತಾಂತ್ರಿಕ ಸಮಸ್ಯೆ ಎದುರಾಗಿ ಕೆಲವೇ ಕೆಲವು ರೈತರು ಮಾರಾಟ ಮಾಡಲು ಸಾಧ್ಯವಾಯಿತು. ಏ.27ರ ಮಧ್ಯಾಹ್ನದ ವೇಳೆಗೆ ಜಿಲ್ಲೆಯ ಖರೀದಿ ಗುರಿ ಪೂರ್ಣಗೊಂಡ ಕಾರಣ ಸರ್ವರ್‌ ಸ್ವಯಂ ಚಾಲಿತವಾಗಿ ಸ್ಥಗಿತಗೊಂಡಿದೆ. ಕೆಲವೇ ಕೆಲವು ಗಂಟೆ ಪ್ರಕ್ರಿಯೆ ನಡೆದಿದ್ದು ರಾಗಿ ಮಾರಾಟ ಮಾಡಿದ್ದು ಯಾರು ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಈ ಬಾರಿ ಎಂಎಸ್‌ಪಿ ಅಡಿ ಪ್ರತಿ ಕ್ವಿಂಟಲ್‌ ರಾಗಿಗೆ ₹ 3,377 ದರ ನಿಗದಿ ಮಾಡಲಾಗಿತ್ತು.

‘ದಿನವಿಡೀ ಕಾದರೂ ನನ್ನ ಹೆಸರು ನೋಂದಣಿಯಾಗಲಿಲ್ಲ, ಸರ್ವರ್‌ ಇಲ್ಲ ಎಂಬ ಉತ್ತರ ಕೊಟ್ಟರು. ಪ್ರತಿಭಟನೆ ನಡೆಸಿದರೂ ರಾಗಿ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಖರೀದಿ ಕೇಂದ್ರಗಳ ರೈತರು ಮಧ್ಯವರ್ತಿಗಳಿಂದ ಮಾತ್ರ ರಾಗಿ ಖರೀದಿ ಮಾಡಿದ್ದಾರೆ. ದಲ್ಲಾಳಿಗಳು ರೈತರ ದಾಖಲಾತಿ ದುರ್ಬಳಕೆ ಮಾಡಿಕೊಂಡು ಅಪಾರ ಲಾಭ ಗಳಿಸಿದ್ಧಾರೆ. ಖರೀದಿ ಕೇಂದ್ರಗಳಿಂದ ರೈತರಿಗೆ ಸಿಕ್ಕಿದ್ದು ಏನೂ ಇಲ್ಲ’ ಎಂದು ಸಂತೇಬಾಚಹಳ್ಳಿ ಗ್ರಾಮದ ರೈತ ಶಂಕರೇಗೌಡ ಆರೋಪಿಸಿದರು.

ಡಿಸೆಂಬರ್‌–ಜನವರಿಯಲ್ಲಿ ನಡೆದ ಮೊದಲ ಹಂತದ ಖರೀದಿ ಪ್ರಕ್ರಿಯೆಯಲ್ಲಿ 11 ಸಾವಿರ ರೈತರು 1.70 ಲಕ್ಷ ಕ್ವಂಟಲ್‌ ರಾಗಿ ಮಾರಾಟ ಮಾಡಿದ್ದಾರೆ. 2ನೇ ಹಂತದ ಖರೀದಿಯನ್ನೂ ಸೇರಿಸಿದರೆ ಒಟ್ಟು 2.40 ಲಕ್ಷ ಕ್ವಿಂಟಲ್‌ ರಾಗಿ ಖರೀದಿಯಂತಾಗಿದೆ. ಆದರೆ ಜಿಲ್ಲೆಯಲ್ಲಿ ಬೆಳೆದ ಒಟ್ಟಾರೆ ಪ್ರಮಾಣಕ್ಕೆ ಹೋಲಿಸಿದರೆ ಖರೀದಿ ಅತ್ಯಂತ ಕಡಿಮೆ ಇದ್ದು ಸರ್ಕಾರದ ಯೋಜನೆಯ ಲಾಭ ಹೆಚ್ಚು ರೈತರಿಗೆ ದೊರೆಯದಂತಾಗಿದೆ.

‘ಖರೀದಿ ಕೇಂದ್ರ ಗೊಂದಲ ಗೂಡಾಗಿತ್ತು, ಯಾರಿಂದ ಖರೀದಿ ಮಾಡುತ್ತಾರೆ ಎಂಬುದೇ ಅರ್ಥವಾಗಲಿಲ್ಲ. ನಿಜವಾದ ರೈತರಿಂದ ರಾಗಿ ಖರೀದಿ ಮಾಡಿಲ್ಲ. ಎತ್ತಿನಗಾಡಿಗಳಲ್ಲಿ ರಾಗಿ ತಂದ ನೂರಾರು ರೈತರು ವಾಪಸ್‌ ತೆರಳಬೇಕಾಯಿತು’ ಎಂದು ನಾಗಮಂಗಲ ತಾಲ್ಲೂಕು, ಬಿಂಡಿಗನವಿಲೆ ಮಂಜೇಗೌಡ ಬೇಸರ ವ್ಯಕ್ತಪಡಿಸಿದರು.

ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ

ಬೆಂಬಲ ಬೆಲೆ ಯೋಜನೆಯ ಲಾಭ ರೈತರಿಗೆ ದೊರೆಯದ ಕಾರಣ ರಾಗಿ ಬೆಳೆದ ಲಕ್ಷಾಂತರ ರೈತರು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೇವಲ ₹ 1,800–2,000 ಬೆಲೆಯಿದ್ದು ₹ 1,500ರವರೆಗೆ ನಷ್ಟ ಉಂಟಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾಗಿ ಬೆಳೆದವರ ಗೋಳು ಕೇಳುವವರು ಯಾರೂ ಇಲ್ಲವಾಗಿದ್ದಾರೆ.

‘ಜಿಲ್ಲಾಧಿಕಾರಿ ಸೇರಿದಂತೆ ಕೃಷಿ, ಆಹಾರ, ಮಾರುಕಟ್ಟೆ ಮಂಡಳಿ ಅಧಿಕಾರಿಗಳಿಗೆ ಬದ್ಧತೆ ಇಲ್ಲ. ಎಲ್ಲರೂ ತಮ್ಮ ಭಟ್ಟಂಗಿ ಮಧ್ಯವರ್ತಿಗಳ ಎಂಜಲು ಕಾಸಿಗೆ ಬಲಿಯಾಗಿದ್ದಾರೆ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಆಕ್ರೋಶ ವ್ಯಕ್ತಪಡಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT