ಶುಕ್ರವಾರ, ಏಪ್ರಿಲ್ 23, 2021
22 °C
ಹನಿ ನೀರಾವರಿ ಮೂಲಕ ಬಹು ಬೆಳೆ, ಸಾವಯವ ಕೃಷಿ: ಜೀವಾಮೃತವೇ ಹೊಲಕ್ಕೆ ಆಧಾರ

ಹಳ್ಳಿಕಾರ್‌ ಜೋಡೆತ್ತು ಸಾಕಣೆಯ ಸರದಾರ!

ಹಾರೋಹಳ್ಳಿ ಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ಹಳ್ಳಿಕಾರ್ ಜೋಡೆತ್ತು ಸಾಕಣೆಯ ಸರದಾರ ಎಂದೇ ಪ್ರಸಿದ್ಧಿ ಪಡೆದಿರುವ ರೈತ ಚೆಲುವರಾಜು ಈ ಬಾರಿಯ ಬೇಬಿ ಬೆಟ್ಟದ ದನಗಳ ಜಾತ್ರೆ ಯಲ್ಲಿ ಚಿನ್ನ ಗೆದ್ದು ದಾಖಲೆ ಮಾಡಿದ್ದಾರೆ. 150ಕ್ಕೂ ಹೆಚ್ಚು ಜೋಡೆತ್ತು ಕಟ್ಟಿರುವ ಅವರು ತಮ್ಮ ಕುಟುಂಬದ ಪರಂಪರೆ ಮುಂದುವರಿಸುತ್ತಿದ್ದಾರೆ.

ತಾಲ್ಲೂಕಿನ ಶ್ಯಾದನಹಳ್ಳಿ ಗ್ರಾಮದ ರೈತ ಚೆಲುವರಾಜು ಅವರ ತಂದೆ ರೈತ ದಿ.ಚಲುವೇಗೌಡ ಅವರ ಕಾಲದಿಂದಲೂ ಹಳ್ಳಿಕಾರ್ ಜೋಡೆತ್ತು ಕಟ್ಟುತ್ತಾ ಬಂದಿದ್ದು, ರಾಜ್ಯದ ವಿವಿಧ ದನಗಳ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ. 1972–73ರಲ್ಲಿ ಚುಂಚನಕಟ್ಟೆ ಜಾತ್ರೆಯಲ್ಲಿ ದಿ.ಚಲುವೇಗೌಡ ಕಟ್ಟಿದ್ದ ಜೋಡೆತ್ತುಗಳಿಗೆ ಉತ್ತಮ ರಾಸುಗಳೆಂದು ಪರಿಗಣಿಸಿ ಅಂದಿನ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರು ಪ್ರಶಸ್ತಿ ನೀಡಿ ಗೌರವಿಸಿದ್ದರು.

ಜೋಡೆತ್ತು ಸಾಕಣೆ ಪರಂಪರೆಯನ್ನು ಮುಂದುವರಿಸಿರುವ ಚೆಲುವರಾಜು ಕೂಡ ಹಲವು ಜಾತ್ರೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಈ ಬಾರಿಯ ಬೇಬಿಬೆಟ್ಟದ ದನಗಳ ಜಾತ್ರೆಯಲ್ಲಿಯೂ 2 ಹಲ್ಲಿನ, ₹ 5.5ಲಕ್ಷ ಬೆಳೆ ಬಾಳುವ ಜೋಡೆತ್ತು
ಸಾಕಿ ಪ್ರದರ್ಶನ ಮಾಡಿದ್ದರು. ಜೋಡೆತ್ತನ್ನು ಮಕ್ಕಳಂತೆ ಜೋಪಾನ ಮಾಡುವ ಅವರು ರವೆ ಗಂಜಿ, ಮಧ್ಯಾಹ್ನ ಹುರುಳಿ, ರಾತ್ರಿ ಬೆಣ್ಣೆಯ
ಜತೆಗೆ ಹುಲ್ಲು ತಿನ್ನಿಸುತ್ತಾರೆ.

‘ನಮ್ಮಪ್ಪನ ಕಾಲದಿಂದಲೂ ಜೋಡೆತ್ತುಗಳನ್ನು ಕಟ್ಟುತ್ತಿದ್ದೇವೆ. ಎತ್ತುಗಳು ನಮಗೆ ಅನ್ನ ನೀಡುವ ಜೀವರಾಶಿ. ಎತ್ತುಗಳೆಂದರೆ ನಮಗೆ ಎಲ್ಲಿಲ್ಲದ ಪ್ರೀತಿ, ಅವು ಮಾತನಾಡದ ಬಸವಣ್ಣ, ನಮಗೆ ದೇವರಿದ್ದಂತೆ’ ಎನ್ನುತ್ತಾರೆ ಚೆಲುವರಾಜು.

ಚೆಲುವರಾಜು ಅವರು ಉತ್ತಮ ರೈತರೂ ಆಗಿದ್ದಾರೆ. ಬಹು ಬೆಳೆ, ಸಾವಯವ ಕೃಷಿ, ಹನಿ ನೀರಾವರಿ ಬೇಸಾಯದಲ್ಲೂ ಪರಿಣತಿ ಪಡೆದಿದ್ದಾರೆ. 8 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಅಳವಡಿಸಿಕೊಂಡು ಹಲವು ಬೆಳೆ ಬೆಳೆಯುತ್ತಿದ್ದಾರೆ. ತೋಡಿದ ಬಾವಿ, ಕೊಳವೆ ಬಾವಿ ಹಾಗೂ ಕಾಲುವೆ ನೀರನ್ನು ಬಳಸಿಕೊಂಡು ಜಮೀನಿಗೆ ನೀರು ಹಾಯಿಸುತ್ತಿದ್ದಾರೆ. ತೆಂಗು, ಅಡಿಕೆ, ಬಾಳೆ, ನಿಂಬೆ, ಕಬ್ಬು ಬೆಳೆಗಳಿಗೆಲ್ಲ ಸಾವಯವ ಗೊಬ್ಬರ
ವನ್ನು ಬಳಸುತ್ತಿದ್ದಾರೆ.

5 ಎಕರೆಯಲ್ಲಿ 500 ತೆಂಗು, 1500 ಅಡಿಕೆ ಗಿಡ, 250 ಬಾಳೆ ಗಿಡಗಳ ಜತೆಗೆ ನಿಂಬೆ, ಮಾವು ಹಾಕಿದ್ದಾರೆ. ಈ ಗಿಡಗಳ ಬುಡಕ್ಕೆ ನೀರು ಬೀಳುವಂತೆ ಹನಿ ನೀರಾವರಿ ಅಳವಡಿಸಿದ್ದಾರೆ. ನೀರು ಹನಿ ಹನಿಯಾಗಿ ಬುಡಕ್ಕೆ ಬೀಳುತ್ತಿದ್ದು ನೀರಿನ ಸದ್ಬಳಕೆಗೆ ಮಾದರಿಯಾಗಿದ್ದಾರೆ.

ರೈತ ಚೆಲುವರಾಜು 3 ಎಕರೆಯಲ್ಲಿ ಸಾವಯವ ಕಬ್ಬು ಬೆಳೆದಿದ್ದಾರೆ. ಈ ಕಬ್ಬಿನ ಬೆಳೆಗೆ ಹನಿ ನೀರಾವರಿ ಅಳವಡಿಸಿದ್ದಾರೆ. ಕಬ್ಬಿನ ಬುಡ, ಬೇರಿಗೆ ಹನಿ ನೀರು ಬೀಳುವಂತೆ ಮಾಡಿದ್ದಾರೆ. ಹಸುವಿನ ಸಗಣಿ, ಗಂಜಲವನ್ನು ನಿತ್ಯ ಒಂದು ಡ್ರಂನಲ್ಲಿ ಶೇಖರಿಸಿ ಜೀವಾಮೃತ ತಯಾರಿಸಿ ಬೆಳೆಗೆ ಹಾಕುತ್ತಾರೆ.

‘ಹನಿ ನೀರಾವರಿ ಅಳವಡಿಕೆಯಿಂದ ನೀರನ್ನು ಸಮರ್ಪಕವಾಗಿ ಬಳಸಬಹುದು ಮತ್ತು ಉಳಿಸಬಹುದು. ಜಮೀನಿನಲ್ಲಿ ಒಂದೇ ಬೆಳೆ ಬೆಳೆಯುವ ಬದಲು ಮಿಶ್ರ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬಹುದು. ತೆಂಗು, ಬಾಳೆ, ಮಾವು, ಅಡಿಕೆ, ನಿಂಬೆ ಬೆಳೆದಿರುವ ನಾನು ಇದರೊಂದಿಗೆ ಕಾಫಿ, ಮೆಣಸು ಹಾಕಲು ನಿರ್ಧರಿಸಿದ್ದೇನೆ’ ಎಂದು ಚೆಲುವರಾಜು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.