ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ನಿಂದ ಪದವೀಧರರ ಕ್ಷೇತ್ರ ಮಲಿನ: ಮರಿತಿಬ್ಬೇಗೌಡ

Last Updated 10 ಜೂನ್ 2022, 12:38 IST
ಅಕ್ಷರ ಗಾತ್ರ

ಮಂಡ್ಯ: ‘ಹಣ ಉಳ್ಳವರಿಗೆ ಟಿಕೆಟ್‌ ನೀಡುವ ಮೂಲಕ ಜೆಡಿಎಸ್‌ ಮುಖಂಡರು ಪದವೀಧರರ ಕ್ಷೇತ್ರವನ್ನು ಮಲಿನಗೊಳಿಸಿದ್ದಾರೆ. ಕ್ಷೇತ್ರದ ಪಾವಿತ್ರ್ಯ ಕಾಪಾಡಲು ನಾನು ಈ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಧು ಜಿ ಮಾದೇಗೌಡ ಅವರನ್ನು ಬೆಂಬಲಿಸಿದ್ದೇನೆ’ ಎಂದು ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಶುಕ್ರವಾರ ಹೇಳಿದರು.

‘ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಪಕ್ಷದ ಬಾವುಟವನ್ನೇ ಕಟ್ಟದ, ಪಕ್ಷದ ಸದಸ್ಯತ್ವವನ್ನೇ ಪಡೆಯದ ಎಚ್.ಕೆ.ರಾಮು ಅವರಿಗೆ ಜೆಡಿಎಸ್ ಮುಖಂಡರು ಮಣೆ ಹಾಕಿದ್ದಾರೆ. ಕೀಲಾರ ಜಯರಾಂ ದಕ್ಷಿಣ ಪದವೀಧರ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ವರಿಷ್ಠರು ಕಡೇ ಗಳಿಗೆಯಲ್ಲಿ ಎಚ್.ಕೆ.ರಾಮು ಅವರಿಗೆ ಟಿಕೆಟ್ ನೀಡಿ ನಿಷ್ಠಾವಂತ ಕಾರ್ಯಕರ್ತನನ್ನು ಕಡೆಗಣಿಸಿದರು’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಕೀಲಾರ ಜಯರಾಂ ಅವರ ಬಳಿ ಹಣವಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಟಿಕೆಟ್‌ ವಂಚಿಸಿದ್ದಾರೆ. ರಾಮು ಅವರಿಗೆ ಟಿಕೆಟ್‌ ನೀಡುವ ಮೊದಲು ಸೌಜನ್ಯಕ್ಕಾದರೂ ಭೇಟಿ ಮಾಡಿ ನಮ್ಮ ವಿಶ್ವಾಸ ಪಡೆಯುವ ಕೆಲಸ ಮಾಡಿಲ್ಲ. ನಮ್ಮ ಸ್ವಾಭಿಮಾನದ ಉಳಿವಿಗಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ತೀರ್ಮಾನಿಸಿದ್ದೇವೆ’ ಎಂದರು.

‘ಜಿ.ಮಾದೇಗೌಡರು ಹುಟ್ಟು ಹೋರಾಟಗಾರರು, ತಮ್ಮ ಜೀವ ಇರುವವರೆಗೂ ಕಾವೇರಿ ಹೋರಾಟ, ರೈತಪರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಗಾಂಧಿಭವನ, ಗಾಂಧಿ ಗ್ರಾಮಗಳ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ. ಅವರ ಮಗ ಮಧು ಅವರು ತಂದೆಯ ಕೆಲಸಗಳನ್ನು ಮುನ್ನಡೆಸುತ್ತಿದ್ದಾರೆ. ಪದವೀಧರರು ಮಧು ಅವರನ್ನು ಬೆಂಬಲಿಸಬೇಕು’ ಎಂದರು.

‘ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಶಿಕ್ಷಣ ಕ್ಷೇತ್ರವನ್ನು ಮಲಿನಗೊಳಿಸಿದೆ. ಹೊಸ ಶಿಕ್ಷಣ ನೀತಿಯ ಬಗ್ಗೆ ಚರ್ಚೆಗೆ ಅವಕಾಶ ನೀಡದೇ ಜಾರಿಗೊಳಿಸಲಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ 3 ಸಾವಿರಕ್ಕೂ ಹೆಚ್ಚು ಅಧಿಕ ಹುದ್ದೆಗಳು ಖಾಲಿ ಇವೆ. ಬ್ಯಾಕ್ಲಾ 12 ಸಾವಿರ ಅತಿಥಿ ಉಪನ್ಯಾಸಕರ ಪೈಕಿ 7 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಬದುಕು ಬೀದಿಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಸಮಸ್ಯೆಗಳಿಗೆ ಬಿಜೆಪಿಯೇ ಕಾರಣ’ ಎಂದರು.

ಕೀಲಾರ ಜಯರಾಂ ಮಾತನಾಡಿ ‘30 ವರ್ಷದ ನನ್ನ ಪಕ್ಷ ನಿಷ್ಠೆಯನ್ನು ತಿರಸ್ಕರಿಸಿ, ಕನಿಷ್ಠ ಸೇವೆ ಮಾಡದ ವ್ಯಕ್ತಿಗೆ ಮಣೆ ಹಾಕಿರುವುದು ನಿಷ್ಠಾವಂತ ಕಾರ್ಯಕರ್ತನಾದ ನನಗೆ ಬೇಸರ ತರಿಸಿದೆ. ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಮೌಲ್ಯವಿಲ್ಲ. ಕೆ.ಟಿ.ಶ್ರೀಕಂಠೇಗೌಡ ಸ್ಪರ್ಧಿಸದಿದ್ದರೆ ಈಶ್ವರನಾಣೆ ನಿನಗೆ ಬಿ.ಫಾರಂ ಕೊಡುವುದಾಗಿ ಎಚ್‌.ಡಿ.ದೇವೇಗೌಡರು ಭರವಸೆ ನೀಡಿದ್ದರು, ಆದರೆ ಕಡೆಗೆ ವಂಚಿಸಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮರಿತಿಬ್ಬೇಗೌಡರು ಪ್ರತಿನಿಧಿಸುತ್ತಿರುವ ಶಿಕ್ಷಕರ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಹೇಳಿ ನಮ್ಮ ನಮ್ಮಲ್ಲೇ ಒಡಕು ಮೂಡಿಸುವ ಹುನ್ನಾರ ನಡೆಸಿದ್ದರು. ಮರಿತಿಬ್ಬೇಗೌಡರ ಸ್ನೇಹ ಮುಖ್ಯ ಎಂಬ ಕಾರಣಕ್ಕೆ ಅವರ ಪ್ರಸ್ತಾಪ ತಿರಸ್ಕರಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT