ಗುರುವಾರ , ಅಕ್ಟೋಬರ್ 29, 2020
19 °C
ನಾಲ್ವಡಿ ಒಡೆಯರ್‌, 5 ರೂಪಾಯಿ ಡಾಕ್ಟರ್‌, ರಾಗಿ ಲಕ್ಷ್ಮಣಯ್ಯ, ಎಚ್‌. ಗುರು, ಬೆಸಗರಹಳ್ಳಿ ರಾಮಣ್ಣ ಚಿತ್ರ

ಮಂಡ್ಯ: ಬಿರಿಯಾನಿ ಜೊತೆಗೆ ಸಾಹಿತಿ, ವೈದ್ಯ, ವಿಜ್ಞಾನಿಗಳ ದರ್ಶನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಎರಡು ಕನ್ನಡ ಚಲನಚಿತ್ರ ನಿರ್ದೇಶಿಸಿ, ಐದಾರು ಚಿತ್ರಗಳಿಗೆ ಸಂಭಾಷಣೆ, ಸಾಹಿತ್ಯ ರಚಿಸಿರುವ ಯುವಕನೊಬ್ಬ ನಗರದ ನೂರು ಅಡಿ ರಸ್ತೆಯಲ್ಲಿ ಬಿರಿಯಾನಿ ಹೌಸ್‌ ಸ್ಥಾಪಿಸಿದ್ದಾರೆ. ಹೋಟೆಲ್‌ ತುಂಬೆಲ್ಲಾ ನಟರು, ಸಾಹಿತಿಗಳು, ಯೋಧ, ವೈದ್ಯ, ಕೃಷಿ ವಿಜ್ಞಾನಿಗಳ ಭಾವಚಿತ್ರ ಅಳವಡಿಸಿ ವಿಶೇಷ ರೂಪ ನೀಡಿದ್ದಾರೆ.

ಹೋಟೆಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವೀಧರ, ತಾಲ್ಲೂಕಿನ ದೊಡ್ಡಕೊತ್ತಗೆರೆ ಗ್ರಾಮದ ಪುನೀತ್‌ ಆರ್ಯ ಅವರಿಗೆ 30 ವರ್ಷ ವಯಸ್ಸು. ಕೋವಿಡ್‌ ವೇಳೆ ಚಿತ್ರರಂಗದಲ್ಲಿ ಕೆಲಸವಿಲ್ಲದೇ ಇವರು ಬಿರಿಯಾನಿ ಹೌಸ್ ಮಾಡಿಲ್ಲ. ಕೋವಿಡ್‌ ಬಿಡುವಿನಲ್ಲಿ ತನ್ನಿಷ್ಟದ, ತನ್ನ ಓದಿನ ಆಧಾರದ ಹೊಸ ಉದ್ದಿಮೆ ಆರಂಭಿಸಿದ್ದಾರೆ.

ಸ್ನಾತಕೋತ್ತರ ಪದವಿ ಮುಗಿಯುತ್ತಿದ್ದಂತೆ ಚಿತ್ರರಂಗ ಪ್ರವೇಶ ಮಾಡಿದ ಇವರು ಇಲ್ಲಿಯವರೆಗೆ ಲೌ, ಸೈಕೊ ಶಂಕ್ರ ಚಿತ್ರ ನಿರ್ದೇಶಿಸಿದ್ದಾರೆ. ದಿಲ್ದಾರ, ರುದ್ರತಾಂಡವ, ಪಡ್ಡೆ ಹುಲಿ ಮುಂತಾದ ಚಿತ್ರಗಳಲ್ಲಿ  ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ. ರುದ್ರತಾಂಡವ ಚಿತ್ರದ ‘ಒಂದೂರಲ್ಲಿ ಒಬ್ಬ ಹುಡ್ಗ ಇದ್ದ’ ಗೀತೆ ಜನಪ್ರಿಯಗೊಂಡಿದ್ದು ನಟ ಪುನೀತ್‌ ರಾಜ್‌ಕುಮಾರ್‌ ಹಾಡಿದ್ದಾರೆ.

ಬಿಡುವಿನ ಅವಧಿಯನ್ನು ಸದುಪಯೋಗ ಮಾಡಿಕಕೊಂಡಿರುವ ಇವರು ಹೋಟೆಲ್‌ ಕಟ್ಟುವ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಇದು ಕೇವಲ ಹೋಟೆಲ್‌ ಆಗಿರದೆ ಜಿಲ್ಲೆಯ ಸಾಹಿತಿಗಳು, ಜಿಲ್ಲೆಯ ಪ್ರವಾಸಿ ತಾಣಗಳ ಚಿತ್ರಸಂತೆಯಾಗಿದೆ. ಬಿರಿಯಾನಿ ಹೌಸ್‌ ಪ್ರವೇಶಿಸುತ್ತಿದ್ದಂತೆ ಕಲ್ಲಿನ ಬುದ್ಧನ ವಿಗ್ರಹ ಸ್ವಾಗತಿಸುತ್ತದೆ.

ಮಂಡ್ಯದ ಗಂಡು ಅಂಬರೀಷ್‌– ಡಾ.ರಾಜ್‌ಕುಮಾರ್‌ ಒಟ್ಟಿಗಿರುವ ಅಪರೂಪದ ಚಿತ್ರ ಗ್ರಾಹಕರಿಗೆ ಇಷ್ಟವಾಗುತ್ತದೆ. ಐದು ರೂಪಾಯಿ ವೈದ್ಯ ಡಾ.ಎಸ್‌.ಸಿ.ಶಂಕರಗೌಡ ಅವರ ಚಿತ್ರ ಹಾಕಿಸುವ ಮೂಲಕ ಸಮಾಜಕ್ಕೆ ಅವರು ನೀಡುತ್ತಿರುವ ಸೇವೆಯನ್ನು ಸ್ಮರಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಜಿಲ್ಲೆಯವರೇ ಆದ ಕೆ.ವಿ.ಶಂಕರಗೌಡ, ಬೆಸಗರಹಳ್ಳಿ ರಾಮಣ್ಣ ಅವರ ಚಿತ್ರ ಹಾಕಿಸಿ ಸ್ಥಳೀಯ ಸ್ಪರ್ಶ ನೀಡಿದ್ದಾರೆ.

ಇಂಡಾಫ್‌ ರಾಗಿ ತಳಿಯ ಜನಕ, ರಾಗಿ ಬ್ರಹ್ಮ ಎಂದೇ ಖ್ಯಾತರಾಗಿರುವ ರಾಗಿ ಲಕ್ಷ್ಮಣಯ್ಯ ಅವರ ಚಿತ್ರ ಇನ್ನಷ್ಟು ವಿಶೇಷ ಎನಿಸುತ್ತದೆ. ಮಂಡ್ಯದಲ್ಲಿ ಲಕ್ಷಣಯ್ಯ ಅವರ ರಾಗಿ ಬಳಸುತ್ತಿದ್ದರೂ ಅವರನ್ನು ಸ್ಮರಿಸುವವರು ಕಡಿಮೆ, ಆದರೆ ಪುನೀತ್‌, ಲಕ್ಷ್ಮಣಯ್ಯ ಚಿತ್ರ ಹಾಕಿಸಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ಧಾರೆ. ಜೊತೆಗೆ ಪಿ.ಲಂಕೇಶ್‌, ಕುವೆಂಪು, ಕೆ.ಎಸ್‌.ಪುಟ್ಟಣ್ಣಯ್ಯ, ಅಮರ ಯೋಧ ಎಚ್‌.ಗುರು ಭಾವಚಿತ್ರಗಳಿವೆ.

ಜಿಲ್ಲೆಯ ಪ್ರವಾಸಿ ತಾಣಗಳಾದ ಕೆಆರ್‌ಎಸ್‌, ಮೇಲುಕೋಟೆ, ಗುಂಬಜ್‌, ಆದಿ ಚುಂಚನಗಿರಿ, ಹೊಸಹೊಳಲು ಚಿತ್ರಗಳಿವೆ. ಜಿಲ್ಲೆಯ ಏಳೂ ತಾಲ್ಲೂಕುಗಳನ್ನು ಪ್ರತಿನಿಧಿಸುವ ತಾಣಗಳ ಚಿತ್ರ ಅಳವಡಿಸಿದ್ದಾರೆ. ಎಲ್ಲಾ ಚಿತ್ರಗಳಿಗಿಂತಲೂ ದೊಡ್ಡದಾಗಿ ನಾಲ್ವಡಿ ಕೃಷ್ಣರಾಜ್‌ ಒಡೆಯರ್‌ ಚಿತ್ರವಿದೆ. ಸುಂದರ ಒಳಾಂಗಣ ವಿನ್ಯಾಸ, ಶುಚಿತ್ವದ ವಾತಾವಣರದಲ್ಲಿ ಚಿಕನ್‌, ಮಟನ್‌ ದೊನ್ನೆ ಬಿರಿಯಾನಿ ಸವಿಯುವುದರ ಜೊತೆಗೆ ಸಾಹಿತಿ, ಸಂಸ್ಕೃತಿಯ ದರ್ಶನ ಪಡೆಯಬಹುದಾಗಿದೆ.

‘ಸಾಹಿತಿಗಳು, ಯೋಧರು, ಪ್ರಗತಿಪರ ಚಿಂತಕರು ನನಗೆ ಪ್ರಭಾವ ಬೀರಿದ್ದಾರೆ. ಅವರ ಬಗ್ಗೆ ತಿಳಿದುಕೊಂಡು, ಅವರು ಬರೆದಿದ್ದನ್ನು ಓದಿಕೊಂಡು ಕನ್ನಡ ಚಿತ್ರರಂಗ ಪ್ರವೇಶ ಮಾಡಿದ್ದೇನೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ನನ್ನ ಕನಸಿನ ಹೋಟೆಲ್‌ನಲ್ಲಿ ಎಲ್ಲರ ಚಿತ್ರ ಅಳವಡಿಸಿದ್ದೇನೆ. ಶೂಟಿಂಗ್‌ ಆರಂಭವಾಗುತ್ತಿದ್ದಂತೆ ಚಿತ್ರರಂಗ ಹಾಗೂ ಹೋಟೆಲ್‌ ಎರಡನ್ನೂ ನಿರ್ವಹಣೆ ಮಾಡುತ್ತೇನೆ’ ಎಂದು ಪುನೀತ್‌ ಆರ್ಯ ಹೇಳಿದರು.

ಸರ್ಕಾರಿ ಕೆಲಸ ನಿರಾಕರಣೆ

ಪುನೀತ್‌ ತಂದೆ ರಂಗಸ್ವಾಮಿ ಮೈಷುಗರ್‌ ಕಾರ್ಖಾನೆ ಉದ್ಯೋಗಿಯಾಗಿದ್ದರು. ಅವರು ನಿಧನರಾದ ನಂತರ ತಂದೆಯ ಕೆಲಸ ಮಗನಿಗೆ ಸಿಕ್ಕಿತ್ತು. ನಂತರ ಕೆಪಿಟಿಸಿಎಲ್‌ನಿಂದಲೂ ಉದ್ಯೋಗ ಅರಸಿ ಬಂದಿತ್ತು. ಆದರೆ ಸರ್ಕಾರಿ ಕೆಲಸ ನಿರಾಕರಿಸಿದ ಅವರು ಕನಸುಗಳನ್ನು ಬೆನ್ನತ್ತಿದರು.

‘ಆತ್ಮವಿಶ್ವಾಸವಿದ್ದರೆ ಸರ್ಕಾರಿ ಕೆಲಸವೇ ಆಗಬೇಕಾಗಿಲ್ಲ. ಯಾವುದೇ ಕೆಲಸ ನಮ್ಮ ಕೈ ಹಿಡಿಯಬಲ್ಲದು’ ಎಂದು ಪುನೀತ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು