ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಮುಸ್ಲಿಂ ತಂಡದಿಂದ ಅಂತ್ಯಸಂಸ್ಕಾರ ಸೇವೆ

ಕೋವಿಡ್‌ನಿಂದ ಮೃತಪಟ್ಟವರಿಗೆ ಸದ್ಗತಿ ನೀಡಲು ಮುಂದೆ ಬಂದ ವಿವಿಧ ಸಂಘಟನೆ ಸದಸ್ಯರು
Last Updated 23 ಜುಲೈ 2020, 2:16 IST
ಅಕ್ಷರ ಗಾತ್ರ

ಮಂಡ್ಯ: ಕೋವಿಡ್‌–19ನಿಂದ ಮೃತಪಟ್ಟ ಪಾರ್ಥಿವ ಶರೀರಗಳ ಅಂತ್ಯಸಂಸ್ಕಾರ ನೆರವೇರಿಸಲು ಹಲವು ಸಂಘಟನೆಗಳು ಮುಂದೆ ಬಂದಿವೆ. ಮುಸ್ಲಿಂ ಯುವಕರ ತಂಡವೊಂದು ಕಳೆದೊಂದು ವಾರದಿಂದ 10 ಮೃತದೇಹಗಳ ಅಂತ್ಯಸಂಸ್ಕಾರ ಮಾಡಿದೆ.

ಕೋವಿಡ್‌ನಿಂದ ಮೃತಪಟ್ಟವರು ಸೇರಿ ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ನಿಧನರಾದ ಎಲ್ಲರನ್ನೂ ಕೋವಿಡ್‌ ಕಾರ್ಯಸೂಚಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 11 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಹಲವರು ಆಸ್ಪತ್ರೆಗಳಲ್ಲಿ ಸತ್ತಿದ್ದು ಅವರನ್ನೂ ಸೋಂಕಿತರ ರೀತಿಯಲ್ಲೇ ಪ್ರತ್ಯೇಕವಾಗಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ.

ನಗರದ 20 ಮಂದಿ ಮುಸ್ಲಿಂ ಯುವಕರು 10 ಮಂದಿಯ 2 ತಂಡ ರಚನೆ ಮಾಡಿಕೊಂಡಿದ್ದು ಮೃತದೇಹಗಳ ಅಂತ್ಯಸಂಸ್ಕಾರದಲ್ಲಿ ನಿರತರಾಗಿದ್ದಾರೆ. 3ನೇ ವಾರ್ಡ್‌ ನಗರಸಭಾ ಸದಸ್ಯ ಝಾಕಿರ್‌ ಪಾಷಾ, 4 ವಾರ್ಡ್‌ ಸದಸ್ಯ ನಯೀಂ ಉಲ್ಲಾ ಅಂತ್ಯಕ್ರಿಯೆಯ ನೇತೃತ್ವ ವಹಿಸುತ್ತಿದ್ಧಾರೆ. ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ತರಬೇತಿ ಪಡೆದಿರುವ ಇವರು ಮೃತ ವ್ಯಕ್ತಿಗಳ ಜಮೀನು ಅಥವಾ ಸ್ಮಶಾನಗಳಲ್ಲಿ ಸಂಸ್ಕಾರ ಮಾಡುತ್ತಿದ್ದಾರೆ.

ಇವರಿಗೆ ಆರೋಗ್ಯ ಇಲಾಖೆಯಿಂದ ಪಿಪಿಇ ಕಿಟ್‌, ಸುರಕ್ಷತಾ ಉಪಕರಣಗಳನ್ನು ವಿತರಣೆ ಮಾಡಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಹಿಂಭಾಗದಲ್ಲಿ ತಂಡದ ಸದಸ್ಯರಿಗೆ ಜಾಗವೊಂದನ್ನು ನೀಡಿದ್ದು ಅಲ್ಲಿ ಕ್ವಾರಂಟೈನ್‌ ಆಗುವ ಸೌಲಭ್ಯ ಒದಗಿಸಲಾಗಿದೆ. ಊಟ, ತಿಂಡಿ ವ್ಯವಸ್ಥೆ, ಸ್ನಾನ ಹಾಗೂ ವಿಶ್ರಾಂತಿಗೆ ಸೌಲಭ್ಯ ನೀಡಲಾಗಿದೆ.

ಸರ್ಕಾರದ ನಿರ್ದೇಶನದಂತೆ ಮೃತದೇಹವನ್ನು ಮೂರು ಹಂತದಲ್ಲಿ ಬಟ್ಟೆ, ಪ್ಲಾಸ್ಟಿಕ್‌ನಿಂದ ಸುತ್ತಲಾಗುತ್ತದೆ. ಈ ಕೆಲಸ ಜಿಲ್ಲಾಸ್ಪತ್ರೆಯಲ್ಲಿ ಆಗುತ್ತದೆ. ದೇಹ ಎತ್ತಲು ನಾಲ್ವರು, ಒಬ್ಬ ಸಹಾಯಕ ಹಾಗೂ ಒಬ್ಬ ಆಂಬುಲೆನ್ಸ್‌ ಚಾಲಕ ಒಂದು ತಂಡದಲ್ಲಿ ಇರುತ್ತಾರೆ. ಮುಸ್ಲಿಂ ಸದಸ್ಯರ ತಂಡ ಸ್ವಯಂಪ್ರೇರಿತವಾಗಿ ಸಂಸ್ಕಾರ ಮಾಡುತ್ತಿದ್ದಾರೆ.

‘ನಮ್ಮ ಮುಖಂಡರಾದ ಮುಫ್ತಿ ರಿಜ್ವಾನ್‌ ಅವರ ನೇತೃತ್ವದಲ್ಲಿ ಮಂಡ್ಯದ ಎಲ್ಲಾ 15 ಮಸೀದಿಗಳ ಮುಖ್ಯಸ್ಥರು ಸಭೆ ನಡೆಸಿದರು. ಜಾತಿ, ಧರ್ಮ ಭೇದವಿಲ್ಲದೇ ಕೋವಿಡ್‌ ಮೃತದೇಹಗಳ ಸಂಸ್ಕಾರ ನಡೆಸಲು ನಿರ್ಧಾರ ಕೈಗೊಂಡೆವು. ಅದರಂತೆ ಎರಡು ತಂಡಗಳ ಸದಸ್ಯರು ಸಂಸ್ಕಾರ ನೆರವೇರಿಸುತ್ತಿದ್ದೇವೆ’ ಎಂದು ಝಾಕಿರ್‌ ಪಾಷಾ ಹೇಳಿದರು.

ಪಿಎಫ್‌ಐ ಸದಸ್ಯರಿಂದಲೂ ಸೇವೆ: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಪ್‌ಐ) ಸದಸ್ಯರು ಕೂಡ ಶವಸಂಸ್ಕಾರಕ್ಕೆ ಮುಂದೆ ಬಂದಿದ್ದು ಜಿಲ್ಲಾಡಳಿತ ಅವರಿಗೆ ಅನುಮತಿ ನೀಡಿದೆ. ಮೃತರ ಸಂಖ್ಯೆ ಹೆಚ್ಚಾದರೆ ಸಂಸ್ಕಾರಕ್ಕೆ ಪಿಎಫ್‌ಐ ಸದಸ್ಯರನ್ನೂ ಬಳಸಿಕೊಳ್ಳಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

‘ಜಿಲ್ಲಾಡಳಿತದಿಂದ ನಗರಸಭೆ ಪೌರಕಾರ್ಮಿಕರ ತಂಡ ಅಂತ್ಯಸಂಸ್ಕಾರಕ್ಕೆ ಸಿದ್ಧವಾಗಿದೆ. ಅವರ ಜೊತೆ ಹಲವು ಸಂಘಟನೆಗಳ ಸದಸ್ಯರೂ ಕೈಜೋಡಿಸಿದ್ದಾರೆ. ಅವರಿಗೆ ತರಬೇತಿ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹೇಳಿದರು.

ಭಜರಂಗಸೇನೆಯೂ ಮನವಿ

ಕೋವಿಡ್‌ ಮೃತದೇಹಗಳ ಅಂತ್ಯಕ್ರಿಯೆಗೆ ಭಜರಂಗ ಸೇನೆ ಸದಸ್ಯರು ಕೂಡ ಮುಂದೆ ಬಂದಿದ್ದಾರೆ. ಅವಕಾಶ ನೀಡುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

‘ನಮ್ಮ ಸದಸ್ಯರ ತಂಡವೊಂದು ಈಗಾಗಲೇ ಸಿದ್ಧವಾಗಿದೆ. ಜಿಲ್ಲಾಡಳಿತ ಅನುಮತಿ ಹಾಗೂ ತರಬೇತಿ ನೀಡಿದರೆ ನಾವು ಸಂಸ್ಕಾರ ನಡೆಸುತ್ತೇವೆ’ ಎಂದು ಭಜರಂಗಸೇನೆ ರಾಜ್ಯ ಘಟಕದ ಅಧ್ಯಕ್ಷ ಬಿ.ಮಂಜುನಾಥ್‌ ಹೇಳಿದರು.

ಕೋವಿಡ್‌ ರೋಗಿಗಳ ಅಂತ್ಯಸಂಸ್ಕಾರ ಮಾಡುವುದು ನಿಜವಾದ ದೇವರ ಸೇವೆಯಾಗಿದೆ. ವಿವಿಧ ಸಂಘಟನೆಗಳು ಈ ಕಾರ್ಯಕ್ಕೆ ಮುಂದು ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಜಿಲ್ಲಾಧಿಕಾರಿಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT