ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಬೀಸಿ ಕರೆಯುತ್ತಿದೆ ಫಲಪುಷ್ಪ ಪ್ರದರ್ಶನ

ಮನಸೂರೆಗೊಳ್ಳುವ ಹೂವಿನ ಅಲಂಕಾರ, ಸುಂದರ ವಿನ್ಯಾಸದ ವಸ್ತುಗಳ ಮಾರಾಟ
Last Updated 28 ಜನವರಿ 2023, 13:02 IST
ಅಕ್ಷರ ಗಾತ್ರ

ಮಂಡ್ಯ: ಮನಸೂರೆಗೊಳ್ಳುವ ಹೂವಿನ ಅಲಂಕಾರ, ಹಣ್ಣುಗಳಿಂದ ಕೆತ್ತಲಾಗಿರುವ ಸುಂದರ ವಿನ್ಯಾಸ, ಮಣ್ಣಿನಿಂದ ತಯಾರಿಸಲಾಗಿರುವ ವಿವಿಧ ವಸ್ತುಗಳು, ಚನ್ನಪಟ್ಟಣ ಗೊಂಬೆಗಳು, ರೈತರಿಗೆ ಭರಪೂರ ಮಾಹಿತಿ...ಇದು ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷ.

ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಜಿಲ್ಲಾ ಜಿಲ್ಲಾಡಳಿತ, ಜಿಲ್ಲಾ ತೋಟಗಾರಿಕೆ ಸಂಘ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ವಿವಿಧ ಸ್ವಸಹಾಯ ಸಂಘಗಳು ಮಳಿಗೆ ಹಾಕಿದ್ದು ಸದಸ್ಯರು ತಯಾರಿಸಿದ ಕಜ್ಜಾಯ, ರವೆ ಉಂಡೆ, ನಿಪ್ಪಟ್ಟು, ಕೋಡುಬಳೆ ಸೇರಿದಂತೆ ಇನ್ನಿತರ ತಿನಿಸುಗಳು ಬಾಯಲ್ಲಿ ನೀರು ತರಿಸುತ್ತಿದೆ.

ಕೆಂಪುಬೆಂಡೆ, ಹಲಸು, ಸೋರೆ, ಚಕ್ಕೋತಾ, ಸಪೋಟ, ರಾಮಫಲ, ಕಮರಾಕ್ಷಿ, ದಪ್ಪಮೆಣಸಿನಕಾಯಿ, ಗೆಡ್ಡೆಕೋಸು, ಕೋಕೋ, ಶುಂಠಿ, ಚಕ್ಕೆ ಎಲೆ, ಕಾಳು ಮೆಣಸು, ಹನುಮಫಲ, ಕರಬೂಜ, ಬಿಳಿಂಬೆ, ತಾಳೆ, ಹಿರಳಿಕಾಯಿ, ಗಜನಿಂಬೆ, ಸೊಪ್ಪುಗಳು, ಮೆಣಸಿನಕಾಯಿ, ಬೂದುಬಾಳೆ, ಈರೇಕಾಯಿ ಮುಂತಾದ ಹಣ್ಣು, ಸಸ್ಯಗಳ ಪ್ರದರ್ಶನ ಗಮನ ಸೆಳೆಯುತ್ತಿದೆ.

ರೈತರಿಗೆ ಮಾಹಿತಿ: ರೈತರಿಗೆ ತೋಟಗಾರಿಕೆ ಬೆಳೆ ಬಗ್ಗೆ ಮಾಹಿತಿ ನೀಡುವ ಹಲವು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಮಾರಗೌಡನಹಳ್ಳಿ ರೈತ ಕಾಂತರಾಜು ಜೇನುಕೃಷಿಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಶುದ್ಧ ಜೇನು ತುಪ್ಪವನ್ನು ಅವರು ಮಾರಾಟಕ್ಕೆ ಇಟ್ಟಿದ್ದಾರೆ.

ನಗರದ ಹೊಸಹಳ್ಳಿ ನರ್ಸಿರಿ ಫಾರಂನವರು ಪ್ರದರ್ಶನಕ್ಕೆ ಇಟ್ಟಿರುವ ಪೀಸ್ ಲಿಲ್ಲಿ, ಆಂಥೋರಿಯಂ, ಜಿಜಿ ಪ್ಲಾಂಟ್ಸ್, ಬೌನ್ಸ್ ಪೈಕಾಸ್, ರಬ್ಬರ್ ಪ್ಲಾಂಟ್, ಚೈನಾ ಫಾಮ್, ಜೆಲೇನಿಯಾ ಪ್ರದರ್ಶನ ಗಿಡಗಳು ಜನರ ಗಮನ ಸೆಳೆಯುತ್ತಿದೆ.

ಜೇಡಿಮಣ್ಣಿನ ಕರಕುಶಲ ವಸ್ತುಗಳಾದ ಪಂಚಭೂತ ವಾಸ್ತು ಪರಿಹಾರ ದೀಪ, ಫ್ಲವರ್ ದೀಪ, ಆನೆ ದೀಪ, ಸ್ಟಾರ್ ದೀಪ, ಆಮೆ ದೀಪ, ಐದು ದೀಪ, ಲಕ್ಷ್ಮಿ ದೀಪ, ಗಣೇಶ ದೀಪ, ಗ್ಲಾಸ್ ದೀಪಗಳು ಮುಂತಾದ ಕರಕುಶಲ ವಸ್ತುಗಳನ್ನು ಚಿಕ್ಕಮುಲಗೂಡು ಕುಶಲಕರ್ಮಿ ನಾಗರಾಜು ಪ್ರದರ್ಶನಕ್ಕಿಟ್ಟಿದ್ದಾರೆ. ಗೊಂಬೆಗಳು, ಉಲ್ಲನ್ ಮ್ಯಾಟ್, ಮಣಿಹಾರ, ರೇಷ್ಮೆ ಗೂಡಿನಹಾರ, ಬಾಗಿಲು ತೋರಣಗಳು ಗ್ರಾಮೀಣ ಜನರನ್ನು ಆಕರ್ಷಿಸಿವೆ.

‘ಸಾವಯವ ಬೆಲ್ಲ ಮತ್ತು ಪುಡಿ, ಅಚ್ಚು, ಬಕೆಟ್ ಬೆಲ್ಲ, ಚಕ್ಕುಲಿ, ಹಪ್ಪಳ, ಒಬ್ಬಟ್ಟು ಹಾಗೂ ಆರೋಗ್ಯ ರಾಗಿ, ನಾಟಿ ಹಸುವಿನ ತುಪ್ಪ ಪ್ರದರ್ಶನ ಮತ್ತು ಮಾರಾಟ ವಿಶೇಷ ಎನಿಸಿದೆ’ ಎಂದು ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಕಾರಸವಾಡಿ ಮಹದೇವು ಹೇಳಿದರು.

ಜಿಲ್ಲೆಯ ನೋಂದಾಯಿತ ಬೋನ್ಸಾಯ್ ಕ್ಲಬ್‍ನ ಸದಸ್ಯರುಗಳು ಅಭಿವೃದ್ಧಿಪಡಿಸಿರುವ ವಿವಿಧ ಬಗೆಯ ಫೈಕಸ್ ಮತ್ತು ಇತರೆ ಹಣ್ಣಿನ ಜಾತಿಯ ಬೋನ್ಸಾಯ್ ಗಿಡಗಳ ಪ್ರದರ್ಶನ ಮಾಡಲಾಗಿದೆ. ತರಕಾರಿ ಕೆತ್ತನೆ ತಜ್ಞರಾದ ಹರೀಶ್ ಬ್ರಹ್ಮಾವರ್ ಮತ್ತು ತಂಡದವರಿಂದ ಕಲ್ಲಂಗಡಿ, ಕುಂಬಳ, ಕ್ಯಾರೆಟ್ ಮತ್ತು ಇತರೆ ತರಕಾರಿಗಳಲ್ಲಿ ವಿವಿಧ ಆಕೃತಿಗಳನ್ನು ಕೆತ್ತನೆ ಮಾಡಿ ಪ್ರದರ್ಶನಕ್ಕೆ ಇಡಲಾಗಿದೆ.

ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಶೀರ್ಷಿಕೆಯಡಿ ಕೃಷಿ ಇಲಾಖೆ ಆತ್ಮ ಯೋಜನೆ ಅಡಿ ಉತ್ಪಾದಕರ ಕಂಪನಿಗಳು ಅಭಿವೃದ್ಧಿಪಡಿಸಿದ ಬ್ರಾಂಡ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಬೆಲ್ಲ, ರಾಗಿ, ಅಕ್ಕಿ ಮತ್ತು ಇತರೆ ಉತ್ಪನ್ನಗಳ ರಿಟೇಲ್ ಬ್ರಾಂಡ್ ಪ್ರದರ್ಶನವಿದೆ.

ಕೌಶಲ್ಯಾಭಿವೃದ್ಧಿ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಸ್ವಸಹಾಯ ಗುಂಪುಗಳು, ನಲ್ಮ್ ಯೋಜನೆಯಡಿ ನುರಿತ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದ ಸದಸ್ಯರು ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಇದೆ. ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ, ಸಮಗ್ರ ಕೃಷಿ ಪದ್ಧತಿ ಕುರಿತು ಪ್ರಾತ್ಯಕ್ಷಿಕೆ, ಮೀನುಗಾರಿಕೆ ಇಲಾಖೆಯಿಂದ ವಿವಿಧ ಅಲಂಕಾರಿಕ ಮೀನುಗಳ ಪ್ರದರ್ಶನವೂ ಇದೆ.

***

ಇಲ್ಲದ ವೈವಿಧ್ಯ, ಪ್ರಚಾರದ ಕೊರತೆ

ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಪ್ರಚಾರ ಮಾಡದ ಪರಿಣಾಮ ಫಲಪುಷ್ಪ ಪ್ರದರ್ಶನಕ್ಕೆ ಜನರ ಕೊರತೆ ಕಾಡುತ್ತಿದೆ. ಜೊತೆಗೆ ಈ ಬಾರಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನವನ್ನು ಪ್ರದರ್ಶನಕ್ಕೆ ಬಳಸಿಕೊಂಡಿಲ್ಲ, ಹೂಗಳ ಪ್ರದರ್ಶನವಷ್ಟೇ ಇದೆ. ಹಿಂದಿನ ಫಲಪುಷ್ಪ ಪ್ರದರ್ಶನಗಳಲ್ಲಿ ಇರುತ್ತಿದ್ದ ವೈವಿಧ್ಯ ಈ ಬಾರಿ ಇಲ್ಲ.

ಉಚಿತ ಪ್ರವೇಶವಿದ್ದರೂ ಮೊದಲೆರಡು ದಿನ ಪ್ರದರ್ಶನಕ್ಕೆ ಬಂದ ಜನರ ಸಂಖ್ಯೆ ಕಡಿಮೆ ಇತ್ತು. ಈಗ ಬಾಯಿಯಿಂದ ಬಾಯಿಗೆ ಹರಡಿದ್ದು ಹೆಚ್ಚಿನ ಸಂಖ್ಯೆಯ ಜನರು ಪ್ರದರ್ಶನ ಕಣ್ತುಂಬಿಕೊಳ್ಳುತ್ತಿದ್ದಾರೆ. ಜ.30ರವರೆಗೆ ಪ್ರದರ್ಶನವಿದೆ.

‘ಹಣದ ಕೊರತೆಯ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಫಲಫುಷ್ಪ ಪ್ರದರ್ಶನ ಮಾಡಿಲ್ಲ. ಇರುವ ಅನುದಾನದಲ್ಲಿ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಕೋವಿಡ್‌ ಬೀತಿಯೂ ಇರುವ ಕಾರಣ ಸರಳವಾಗಿ ಆಚರಣೆ ಮಾಡಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಿ.ಮಂಜುನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT