ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಾಡುಹಕ್ಕಿ’ಗೆ ಜನಪದವೇ ಉಸಿರು

ಜನಪದ ಗೀತ ಗಾಯನ, ಜನಪದ ಚರ್ಮ ವಾದ್ಯಗಳನ್ನು ನುಡಿಸುವ ಗೋವಿಂದರಾಜು
Last Updated 14 ಫೆಬ್ರುವರಿ 2021, 3:08 IST
ಅಕ್ಷರ ಗಾತ್ರ

ನಾಗಮಂಗಲ: ತಾಲ್ಲೂಕಿನ ಕುಗ್ರಾಮ ಚಾಮನಕೊಪ್ಪಲಿನ ಗೋವಿಂದ ರಾಜು ಅವರು ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದರೂ ಸುಮಾರು 20 ವರ್ಷಗಳಿಂದ ಜನಪದವನ್ನೇ ಪ್ರವೃತ್ತಿಯಾಗಿ, ಉಸಿರಾಗಿಸಿಕೊಂದ್ದಾರೆ.

ಗೋವಿಂದರಾಜು ಅವರಿಗೆ ತಂದೆಯೇ ಮೊದಲ ಗುರು. ತಂದೆ ಪುಟ್ಟರಾಜು ಹಾಡುತ್ತಿದ್ದ ಹರಿಕಥೆ, ರಂಗ ಗೀತೆಗಳು, ಜನಪದ ಗೀತೆಗಳಿಂದ ಪ್ರೇರಿತರಾಗಿ ಜನಪದದ ಗೀಳುಮೈಗೂಡಿಸಿಕೊಂಡ ಅವರು ವೇದಿಕೆಯಲ್ಲಿಮೂಲಧಾಟಿಯ ಜನಪದ ಗೀತೆಗಳನ್ನು ಹಾಡಲು ನಿಂತರೆ ತಲೆದೂಗದವರಿಲ್ಲ. ಮಲೆಮಹದೇಶ್ವರ ಸ್ವಾಮಿ, ಬಿಳಿಗಿರಿರಂಗನಾಥ ಸ್ವಾಮಿ, ಚುಂಚನಗಿರಿ ಭೈರವ ಸ್ವಾಮಿ ಸೇರಿದಂತೆ ವಿವಿಧ ದೇವರ ಜನಪದ ಗೀತೆಗಳಿಗೆ ಜೀವ ತುಂಬಿ ಹಾಡುತ್ತಾರೆ. ಅಲ್ಲದೆ, ಸಿದ್ದಪ್ಪಾಜಿ ಪವಾಡಗಳು, ಸೋಬಾನೆ ಪದಗಳನ್ನೂ ಸುಶ್ರಾವ್ಯವಾಗಿ ಹಾಡುತ್ತಾರೆ.

ಅವರು ಎಲ್ಲಿ ವೇದಿಕೆ ಏರಿದರೂ ತಂದನೋ ತಾನೋ ತಾನಂದನೋ ತಾನೊ, ಕೋಳಿಕೆ ರಂಗ, ತರವಲ್ಲ ತಗಿ ನಿನ್ನ, ಉಳುವ ಯೋಗಿಯ ನೋಡಲ್ಲಿ, ಮುದ್ದು ಭೈರವ ಸ್ವಾಮಿ ಗೀತೆಗಳನ್ನು ಹಾಡುವಂತೆ ಕೇಳುಗರ ಒತ್ತಾಯ ಇದ್ದೇ ಇರುತ್ತದೆ. ಈ ಗೀತೆಗಳನ್ನು ಹಾಡದೆ ಗೋವಿಂದ ರಾಜು ಅವರ ಜನಪದ ಕಾರ್ಯಕ್ರಮ ಪೂರ್ಣವಾಗುವುದಿಲ್ಲ. ಗೋವಿಂದರಾಜು ಅವರ ಪ್ರತಿಭೆಯನ್ನು ಗುರುತಿಸಿ ಪಿ.ಕಾಳಿಂಗರಾವ್ ಪ್ರಶಸ್ತಿ, ತಾಲ್ಲೂಕು ಸಾಹಿತ್ಯ ಸಮ್ಮೇಳನ ಪ್ರಶಸ್ತಿ, 2018ರಲ್ಲಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

ಗೋವಿಂದರಾಜು ಅವರು ಆದಿಚುಂಚನಗಿರಿ ಪದವಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಇವರ ಹಾಡುಗಾರಿಕೆಗೆ ಮನಸೋತಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಸ್ವತಃ ಆದಿಚುಂಚನಗಿರಿ ಮಠದಲ್ಲಿ ವಿದ್ಯಾರ್ಥಿ ನಿಲಯದ ಪಾಲಕ ಮತ್ತು ವೀರಗಾಸೆ ಶಿಕ್ಷಕನಾಗಿ ಉದ್ಯೋಗ ನೀಡಿ ಅವರ ಕಲೆಯನ್ನು ಪ್ರೋತ್ಸಾಹಿಸುತ್ತಿದ್ದರು. ಕಾರಣಾಂತರಗಳಿದ ಉದ್ಯೋಗ ಬಿಟ್ಟಿದ್ದು, ಗಾರೆ ಕೆಲಸ ಮಾಡುತ್ತಿದ್ದಾರೆ.

ಇತ್ತೀಚೆಗೆ ನಡೆದ ತಾಲ್ಲೂಕು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಗೋವಿಂದರಾಜು ಹಾಡಿದ ರೈತಗೀತೆ ಕೇಳಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಮರಳುತ್ತಿದ್ದ ವೇಳೆ ಅಪಘಾತವಾಗಿ ಬಲಗಣ್ಣನ್ನು ಕಳೆದುಕೊಂಡ ಇವರು ಚೇತರಿಸಿಕೊಂಡು ಇಂದಿಗೂ ಜನಪದ ಸೇವೆಯಲ್ಲಿ ತೊಡಗಿದ್ದಾರೆ. ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆ 1500 ಕ್ಕೂ ಅಧಿಕ ವೇದಿಕೆ ಕಾರ್ಯಕ್ರಮ ನೀಡಿದ್ದಾರೆ. ಸರಿಗಮಪ ವೇದಿಕೆಯಲ್ಲಿ ಜನಪದ ಹಾಡುವ ಕನಸು ಹೊಂದಿದ್ದರೂ ಆಡಿಷನ್‌ನಲ್ಲಿ ಭಾಗವಹಿಸಲು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ.

ಗೋವಿಂದರಾಜು ಅವರ ಹಾಡು ಕೇಳುವುದೇ ಸೊಗಸು. ಮುಂದಿನ ದಿನಗಳಲ್ಲಿ ದೊಡ್ಡ ವೇದಿಕೆ ಸಿಕ್ಕರೆ ತಾಲ್ಲೂಕಿಗೆ ಕೀರ್ತಿ ತರುತ್ತಾರೆ ಎಂದು ಹೇಳುತ್ತಾರೆ ಜನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮಂಜೇಶ್ ಚನ್ನಾಪುರ.

ನಾನು ಭಾವಗೀತೆ, ಚಲನಚಿತ್ರ ಗೀತೆ, ಸುಗಮ ಸಂಗೀತ ಮುಂತಾದ ಗೀತೆಗಳನ್ನು ಹಾಡಿದರೂ ಜನಪದವೆಂದರೆ ನನ್ನಲ್ಲಿ ಅದೇನೊ ಸೆಳೆತ. ಜನಪದ ಉಳಿಸಿ, ಬೆಳೆಸುವ ಹಂಬಲ ನನಗಿದೆ ಅಷ್ಟೆ. ನನ್ನ ಇಬ್ಬರು ಮಕ್ಕಳಿಗೂ ಜನಪದ ಕಲೆಯನ್ನು ಕಲಿಸುವ ಆಸೆಯಿದೆ ಎಂದು ಗೋವಿಂದರಾಜು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT