ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1000 ಕುಟುಂಬಗಳಿಗೆ ಅಕ್ಕಿ, ತರಕಾರಿ ವಿತರಣೆ

₹ 3.5 ಲಕ್ಷ ವೆಚ್ಚದಲ್ಲಿ ಸಾಮಗ್ರಿ ನೀಡಿದ ಶಾಸಕ ರವೀಂದ್ರ
Last Updated 30 ಮಾರ್ಚ್ 2020, 13:09 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಶಾಸಕ ರವೀಂದ್ರ ಶ್ರೀಕಂಠಯ್ಯ ಸೋಮವಾರ ಪಟ್ಟಣದ 1000 (ಒಂದು ಸಾವಿರ)ಕುಟುಂಬಗಳಿಗೆ ಅಕ್ಕಿ ಮತ್ತು ತರಕಾರಿಗಳನ್ನು ವಿತರಿಸಿದರು.

ಪಟ್ಟಣದ ಗಾಂಧಿನಗರ, ರಂಗನಾಥನಗರ, ಬೂದಿಗುಂಡಿ ಸೇರಿದಂತೆ ಇನ್ನಿತರ ಬಡಾವಣೆಗಳ ಬಡ ಜನರಿಗೆ ₹ 3.5 ಲಕ್ಷ ವೆಚ್ಚದಲ್ಲಿ, ಸ್ವಂತ ಹಣದಿಂದ ಅಗತ್ಯ ಆಹಾರ ಪದಾರ್ಥಗಳನ್ನು ವಿತರಿಸಿದರು.

ಪ್ರತಿ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ ಮತ್ತು 5 ಕೆ.ಜಿ.ಯಷ್ಟು ತರಕಾರಿಯನ್ನು ವಿತರಿಸಲಾಯಿತು. ಕ್ಷೇತ್ರದ ವಿವಿಧ ಗ್ರಾಮಗಳ ರೈತರು ಬೆಳೆದಿದ್ದ ಕೋಸು, ಬೀನ್ಸ್‌, ಹೂ ಕೋಸು, ಬದನೆ, ಕುಂಬಳ, ಟೊಮೆಟೊ ಇತರ ತರಕಾರಿಗಳನ್ನು ತಾವೇ ಖರೀದಿಸಿ ಪಟ್ಟಣದ ಬಡ ಜನರಿಗೆ ನೀಡಿದರು.

ತಾಲ್ಲೂಕಿನ ಕೆಆರ್‌ಎಸ್‌ನ ಕಡು ಬಡವರಿಗೂ ಅಕ್ಕಿ ಮತ್ತು ತರಕಾರಿ ವಿತರಣೆ ನಡೆಯಿತು. ಸ್ಥಳೀಯ ಪುರಸಭೆ ಸದಸ್ಯರ ಜತೆಗೂಡಿ ಪ್ರತಿ ಕುಟುಂಬಕ್ಕೆ ಎರಡು ಮುಖಗವಸು ಕೂಡ ವಿತರಿಸಿದರು.

ಆಸ್ಪತ್ರೆಗೆ ಕಿಟ್‌: ₹ 3.5 ಲಕ್ಷ ವೆಚ್ಚದ ಗೌನ್‌, ಮುಖಗವಸು, ಗ್ಲೌಸ್‌ ಸಹಿತ ಮೆಡಿಕಲ್‌ ಕಿಟ್‌ ನೀಡಲಾಗುತ್ತಿದೆ. ವೈದ್ಯಕೀಯ ಸಿಬ್ಬಂದಿಯ ಜತೆಗೆ ಪೊಲೀಸರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗೂ ನೀಡಲಾಗುತ್ತಿದೆ. ಕ್ಷೇತ್ರದ ಜನರಿಗೆ 50 ಸಾವಿರ ಮುಖಗವಸು ನೀಡಲು ಉದ್ದೇಶಿಸಿದ್ದು, ಸದ್ಯ 25 ಸಾವಿರ ಮುಖಗವಸು ತರಿಸಲಾಗಿದೆ. ಮೊದ ಹಂತದಲ್ಲಿ ಪಟ್ಟಣದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದರು.

ಅಸಮಾಧಾನ: ‘ಲಾಕ್‌ಡೌನ್‌ ಆಗಿ 9 ದಿನ ಕಳೆದರೂ ಸರ್ಕಾರ ತಾಲ್ಲೂಕು ಮಟ್ಟದ ಆಸ್ಪತ್ರೆಗಳಿಗೆ ಗೌನ್‌, ಸ್ಯಾನಿಟೈಸರ್‌ ಇತರ ಪರಿಕರಗಳನ್ನು ನೀಡದೇ ಇರುವುದು ವಿಪರ್ಯಾಸ. ತಕ್ಷಣ ಆಸ್ಪತ್ರೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕು. ವೈದ್ಯಕೀಯ ಸಿಬ್ಬಂದಿ ಅಹೋರಾತ್ರಿ ದುಡಿಯುತ್ತಿದ್ದು, ಅವರ ಅಗತ್ಯತೆಗಳನ್ನು ಪೂರೈಸದಿದ್ದರೆ ಕಷ್ಟವಾಗುತ್ತದೆ’ ಎಂದರು.

ಪೊಲೀಸರೇ ಹೊಡೆಯದಿರಿ: ‘ಬೀದಿಯಲ್ಲಿ ಓಡಾಡುವ ಜನರ ಪೂರ್ವಾಪರ ವಿಚಾರಿಸದೆ ಪೊಲೀಸರು ಹೊಡೆಯಬಾರದು. ಔಷಧ, ರೇಷನ್‌ ಖರೀದಿಗೆ ಬರುವವರೂ ಇದ್ದಾರೆ. ಅಂತಹವರ ಮೇಲೆ ಲಾಠಿ ಬೀಸುವುದು ಸರಿಯೆ ಎಂದು ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು. ಸುಮ್ಮನೆ ಓಡಾಡುವುದು ಕಂಡು ಬಂದರೆ ವಾಹನ ವಶಕ್ಕೆ ಪಡೆಯಿರಿ ಎಂದ ಅವರು, ಜನರು ಸರ್ಕಾರದ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಇನ್ನು ಎರಡು ವಾರ ಮನೆಯಲ್ಲೇ ಇದ್ದು ಕೊರೊನಾ ವೈರಸ್‌ ತಡೆಗೆ ಸಹಕರಿಸಬೇಕು’ ಎಂದು ಕೋರಿದರು.

ನೆರವಿಗೆ ಬನ್ನಿ: ರಾಜಕೀಯ ಮುಖಂಡರು ಮತ್ತು ಹಣವಂತರು ಈ ಸಂದರ್ಭದಲ್ಲಿ ಬಡ ಜನರ ನೆರವಿಗೆ ಬರಬೇಕು. ಸರ್ಕಾರದ ನೆರವು ಸಿಗುವುದು ತಡವಾಗಲಿದ್ದು, ಅಲ್ಲಿಯವರೆಗೆ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗುತ್ತದೆ. ಜನರ ತಕ್ಷಣದ ಅವಶ್ಯತೆಗಳನ್ನು ಪೂರೈಸಲು ಸ್ಥಿತಿವಂತರು ಕೈಲಾದ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ಸೂಚನೆ: ತಹಶೀಲ್ದಾರ್‌ ನೇತೃತ್ವದ ವಿವಿಧ ಇಲಾಖೆ ಅಧಿಕಾರಿಗಳ ತಂಡ ಕ್ಷೇತ್ರದಾದ್ಯಂತ ‌ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮೊದಲ ಹಂತದಲ್ಲಿ ದೊಡ್ಡ ಗ್ರಾಮಗಳಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ಇದಕ್ಕೂ ಮುನ್ನ ರವೀಂದ್ರ ಶ್ರೀಕಂಠಯ್ಯ ಪುರಸಭೆ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ತಹಶೀಲ್ದಾರ್‌ ಎಂ.ವಿ. ರೂಪಾ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ಡಿವೈಎಸ್ಪಿ ಅರುಣ್‌ ನಾಗೇಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್‌.ಕೆ. ವೆಂಕಟೇಶ್‌, ಬಿಇಒ ರುಕ್ಸಾನ್‌ ನಾಜನೀನ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಶ್ರೀನಿವಾಸ್‌, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಡಿ. ಬೆನ್ನೂರ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT