ಬುಧವಾರ, ಅಕ್ಟೋಬರ್ 21, 2020
24 °C
ಅರ್ಧಕ್ಕೆ ಸ್ಥಗಿತಗೊಂಡ ಅಭಿವೃದ್ಧಿ ಕೆಲಸಗಳು, ಅಧಿಕಾರಿಗಳ ನಿರಾಸಕ್ತಿಯೇ ಪ್ರಮುಖ ಕಾರಣ

ಮಂಡ್ಯ: ‘ಗಾಂಧಿ ಗ್ರಾಮ’ ನಿರ್ಮಾಣ ಕಾಮಗಾರಿಗೆ ಗ್ರಹಣ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಗಾಂಧಿವಾದಿ ಡಾ.ಜಿ.ಮಾದೇಗೌಡ ಅವರ ಮಹತ್ವಾಕಾಂಕ್ಷೆಯ ‘ಗಾಂಧಿ ಗ್ರಾಮ’ ನಿರ್ಮಾಣ ಕಾಮಗಾರಿಗೆ ಗ್ರಹಣ ಹಿಡಿದಿದೆ. ಅನದಾನದ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಹಾತ್ವಗಾಂಧೀಜಿಯ ಸರಳ ಬದುಕಿನ ಮೇಲೆ ಬೆಳಕುಚೆಲ್ಲವ ಗ್ರಾಮ ಪರಿಕಲ್ಪನೆಯ ಕಾಮಗಾರಿ ಪ್ರಗತಿ ಕಾಣದಾಗಿದೆ.

ಗಾಂಧೀಜಿಯವರ ಚಿಂತನೆಗಳನ್ನು ಹಿಡಿದಿಡುವ ಕನಸಿನೊಂದಿಗೆ ಗಾಂಧಿಗ್ರಾಮ ಯೋಜನೆಯನ್ನು 2017–18ರಲ್ಲಿ ಚಾಲನೆ ನೀಡಲಾಗಿತ್ತು. ಜಿ.ಮಾದೇಗೌಡರು ಐದಾರು ವರ್ಷ ಹೋರಾಟ ನಡೆಸಿದ ಪರಿಣಾಮ ಗಾಂಧಿ ಸ್ಮಾರಕ ಟ್ರಸ್ಟ್‌ಗೆ ಸರ್ಕಾರ ದುದ್ದ ಹೋಬಳಿ, ಎಚ್‌.ಮಲ್ಲಿಗೆರೆ ರೇಷ್ಮೆ ಫಾರಂ ಬಳಿ 20 ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ₹ 2.50 ಕೋಟಿ ಹಣ ಬಿಡುಗಡೆ ಮಾಡಿ ಕಾಮಗಾರಿ ಅನುಷ್ಠಾನ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು.

ಅಧಿಕಾರಿಗಳು ಕಾಮಗಾರಿಯನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನ ಮಾಡದ ಕಾರಣ  ಅನುದಾನದ ಬಹುಭಾಗ ವಾಪಸ್‌ ಹೋಗಿದೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ಆರೋಪಿಸುತ್ತಾರೆ. ಇಲ್ಲಿಯವರೆಗೆ ಭೂಮಿಯ ಸುತ್ತಲೂ ಕಾಂಪೌಂಡ್‌ ನಿರ್ಮಾಣ ಮಾಡಲಾಗಿದೆ. ಜೊತೆಗೆ ರೇಷ್ಮೆ ಫಾರಂ ಆವರಣದಲ್ಲಿದ್ದ 4 ಕಟ್ಟಡಗಳನ್ನು ದುರಸ್ತಿ ಮಾಡಿಸಲಾಗಿದೆ. ₹ 70 ಲಕ್ಷ ವೆಚ್ಚದಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ, ಆದರೆ ಇನ್ನೂ ಪೂರ್ಣಗೊಂಡಿಲ್ಲ.

ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ. ಆದರೆ ಅಧಿಕಾರಿಗಳು ಇಲ್ಲಿಯವರೆಗೂ ಟೆಂಡರ್‌ ಆಹ್ವಾನ ಮಾಡಿಲ್ಲ. ತೆರೆದ ರಂಗಮಂದಿರ, ಕಲಾಮಂದಿರ, ಮ್ಯೂಸಿಯಂ ಕಟ್ಟಡ ಕಾಮಗಾರಿಗಳು ಇಲ್ಲಿಯವರೆಗೂ ಆರಂಭವಾಗಿಲ್ಲ.

‘ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಿ.ಮಾದೇಗೌಡರು ಇಳಿ ವಯಸ್ಸಿನಲ್ಲೂ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ. ಹಲವು ಕಾಮಗಾರಿಗಳು ಅರ್ಧಕ್ಕೇ ಸ್ಥಗಿತಗೊಂಡಿವೆ. ಆವರಣದಲ್ಲಿ ಸ್ವಚ್ಛತೆಯ ಕೊರತೆ ಎದುರಾಗಿದ್ದು ಗಿಡಗಂಟಿಗಳು ಬೆಳೆದು ನಿಂತಿದೆ. ಕೋವಿಡ್‌ ಕಾರಣದಿಂದಲೂ ಕಾಮಗಾರಿಗೆ ಸಮಸ್ಯೆಯಾಗಿದೆ. ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಿ ಕಾಮಗಾರಿ ಪ್ರಗತಿಗೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಗಾಂಧಿ ಸ್ಮಾರಕ ಟ್ರಸ್ಟ್‌ನ ಪದಾಧಿಕಾರಿ ರಾಜಣ್ಣ ಒತ್ತಾಯಿಸಿದರು.

ತಮಿಳುನಾಡು ಗಾಂಧಿಗ್ರಾಮ ಮಾದರಿ: ತಮಿಳುನಾಡಿನ ಮಧುರೈ– ದಿಂಡಗಲ್‌ ನಡುವೆ 580 ಎಕರೆ ವಿಶಾಲ ಪ್ರದೇಶದಲ್ಲಿ ಗಾಂಧಿಗ್ರಾಮ ನಿರ್ಮಾಣ ಮಾಡಲಾಗಿದೆ. ಅದೇ ಮಾದರಿ ಕೇವಲ 20 ಎಕರೆ ಭೂ ಪ್ರದೇಶದಲ್ಲಿ ಸಣ್ಣದಾಗಿ ಗಾಂಧಿಗ್ರಾಮ ನಿರ್ಮಿಸುವ ಕನಸು ಮಾದೇಗೌಡ ಅವರದ್ದು. ಟ್ರಸ್ಟ್‌ ಪದಾಧಿಕಾರಿಗಳು ತಮಿಳುನಾಡಿಗೆ ತೆರಳಿ ಪರಿಶೀಲನೆ ಮಾಡಿಕೊಂಡು ಬಂದಿದ್ದಾರೆ.

ಗಾಂಧಿಗ್ರಾಮ ಕಲ್ಪನೆ ಸಾಕಾರಗೊಂಡರೆ ಅದು ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಪ್ರಮುಖ ತಾಣವಾಗಿ ಅಭಿವೃದ್ಧಿಯಾಗಲಿದೆ. ಜನಪದ ಕಲೆಗಳು, ರೈತರ ಪಾರಂಪರಿಕ ಜ್ಞಾನಕ್ಕೆ ಇದು ವೇದಿಕೆಯಾಗಲಿದೆ. ಯುವಕರು ಸ್ವಂತ ಉದ್ಯೋಗ ಮಾಡಿ ಬದುಕು ಕಟ್ಟಿಕೊಳ್ಳುವ ಕರಕುಶಲ ತರಬೇತಿಯನ್ನು ಈ ಸಂಕೀರ್ಣದಲ್ಲಿ ನೀಡುವ ಉದ್ದೇಶ ಹೊಂದಲಾಗಿದೆ. ಹಗ್ಗ ಹೊಸೆಯುವುದು, ಚಾಪೆ ಎಣೆಯುವುದು, ಊಟದ ಪ್ಲೇಟ್‌, ಲೋಟ, ಎಲೆಗಳ ತಯಾರಿಕೆ, ಹೊಲಿಗೆ ಮುಂತಾದ ತರಬೇತಿಯ ತಾಣವೂ ಆಗಲಿದೆ.

ಗುಡಿ ಕೈಗಾರಿಕೆ ಸ್ಥಾಪನೆ, ಜೇನು ಕೃಷಿ, ಮೀನು ಸಾಕಣೆ, ವೃದ್ಧಾಶ್ರಮ, ಅಂಗವಿಕಲರಿಗೆ ವಿಶೇಷ ತರಬೇತಿ, ದೇಸಿ ಆಟಗಳ ಪುರುಜ್ಜೀವನ, ರೈತರಿಗೆ ಅವಶ್ಯವಾಗಿರುವ ಕೃಷಿ ಉಪಕರಣಗಳ ತಯಾರಿಕೆಯ ತರಬೇತಿಯ ಉದ್ದೇಶವೂ ಇದೆ.

‘ಗಾಂಧಿ ಗ್ರಾಮಕ್ಕೆ ಭೂಮಿ ಪಡೆಯಲೂ ಹೋರಾಟ ಮಾಡಬೇಕಾಯಿತು. ಅಧಿಕಾರ ವರ್ಗದ ಇಚ್ಛಾಶಕ್ತಿ ಕೊರತೆಯಿಂದಾಗಿ ಕಾಮಗಾರಿ ಪ್ರಗತಿ ಕಾಣುತ್ತಿಲ್ಲ’ ಎಂದು ಗಾಂಧಿ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಡಾ.ಜಿ.ಮಾದೇಗೌಡ ಹೇಳಿದರು.

300ಕ್ಕೂ ಹೆಚ್ಚು ಛಾಯಾಚಿತ್ರ ಸಂಗ್ರಹ

ಗಾಂಧಿಗ್ರಾಮದ ಆವರಣದಲ್ಲಿ ತಲೆ ಎತ್ತಲಿರುವ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನ ಮಾಡಲು ಮಹಾತ್ಮ ಗಾಂಧೀಜಿಯ 300ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಸಂಗ್ರಹ ಮಾಡಲಾಗಿದೆ. ಲಿಂಗಣ್ಣ ಬಂಧುಕಾರ್‌ ಅವರ ವಿಶೇಷ ಆಸಕ್ತಿಯಿಂದ ಕಪ್ಪು– ಬಿಳುಪಿನ ಅಪರೂಪದ ಛಾಯಾಚಿತ್ರಗಳನ್ನು ಕಾಪಿಡಲಾಗಿದೆ.

ಗಾಂಧೀಜಿಯವರ ವಿಶೇಷ ಕಾಲ ಘಟ್ಟವನ್ನು, ವಿವಿಧೆಡೆ ಅವರು ನೀಡಿರುವ ಭೇಟಿಯನ್ನು ಈ ಛಾಯಾಚಿತ್ರಗಳಲ್ಲಿ ನೋಡಬಹುದಾಗಿದೆ. ಗಾಂಧಿಗ್ರಾಮ ಸಾಕಾರಗೊಂಡರೆ ಈ ಛಾಯಾಚಿತ್ರಗಳು ರ್ಸಾವಜನಿಕರ ವೀಕ್ಷಣೆಗೆ ದೊರೆಯಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು