ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ, ಮನಗಳಲ್ಲಿ ಗಣೇಶ ಹಬ್ಬದ ಸಂಭ್ರಮ

ವಿವಿಧ ಅವತಾರಗಳಲ್ಲಿ ಲಗ್ಗೆ ಇಟ್ಟ ಗಜವದನ, ಪರಿಸರಸ್ನೇಹಿ ಮೂರ್ತಿ ಪೂಜಿಸಲು ಸಲಹೆ
Last Updated 1 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಮಂಡ್ಯ: ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೂ ಸಡಗರ, ಸಂಭ್ರಮದಿಂದ ಆಚರಿಸುವ ಗೌರಿ–ಗಣೇಶ ಹಬ್ಬ ಮತ್ತೊಮ್ಮೆ ಬಂದಿದೆ. ಮಾರುಕಟ್ಟೆಯಲ್ಲಿ ಖರೀದಿ ಭರ್ಜರಿಯಾಗಿ ನಡೆಯುತ್ತಿದೆ. ಪಿಒಪಿ ಗಣೇಶ ಮೂರ್ತಿಗಳ ನಡುವೆಯೂ ಪರಿಸರಸ್ನೇಹಿ ಮೂರ್ತಿಗಳನ್ನು ಪೂಜಿಸುವ ಕುರಿತು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಸಾರ್ವಜನಿಕ ಸಭೆ, ಸಮಾರಂಭಕ್ಕೆ ನಿರ್ಬಂಧ ಇತ್ತು. ಆದರೆ, ಧಾರ್ಮಿಕ ಸಭೆ–ಸಮಾರಂಭಗಳಿಗೆ ಅಡೆತಡೆ ಇರಲಿಲ್ಲ. ಆ ಸಂದರ್ಭದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಸಾರ್ವಜನಿಕವಾಗಿ ಪ್ರಾರಂಭವಾದ ಹಬ್ಬ ಪ್ರಸ್ತುತ ದಿನಗಳಲ್ಲಿ ತನ್ನ ಮೂಲ ಸ್ವರೂಪ ಬದಲಿಸಿದೆ. ಸ್ವ–ಪ್ರತಿಷ್ಠೆ, ಯಾರಿಗಿಂತ ನಾವೇನು ಕಮ್ಮಿ ಇಲ್ಲ ಎಂಬಂತೆ ಜಿದ್ದಿಗೆ ಬಿದ್ದು ಆಚರಿಸುವ ಹಬ್ಬವಾಗಿ ಮಾರ್ಪಟ್ಟಿದೆ. ಭಕ್ತಿ ಭಾವ, ಸಾಮಾಜಿಕ ಕಾಳಜಿ, ಪರಿಸರ ಪ್ರೇಮ ಎಲ್ಲವೂ ಎಲ್ಲಿದೆ ಎಂದು ಹುಡುಕುವಂತಾಗಿದೆ. ಶಬ್ದಮಾಲಿನ್ಯ, ವಾಯುಮಾಲಿನ್ಯ, ಜಲ ಮಾಲಿನ್ಯದ ಮೂಲವಾಗಿ ಹಬ್ಬ ರೂಪಿತವಾಗುತ್ತಿರುವುದು ದುರಂತ.

ಊರು, ಕೇರಿ, ಬೀದಿಗಳಲ್ಲಿ ಅವನಿಗಿಂತ ನಾವೇನು ಕಮ್ಮಿ, ನಾವೂ ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ, ಒಬ್ಬರಿಗಿಂತ ಒಬ್ಬರು ಹೆಚ್ಚುಗಾರಿಕೆಯನ್ನು ತೋರ್ಪಡಿಸುವ ವೇದಿಕೆಯಾಗಿ ಮಾರ್ಪಟ್ಟಿದೆ. ಕೆಲವೆಡೆ ಗಲಾಟೆಗಳು ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಸಂಬಂಧ ಪೊಲೀಸ್‌, ಸ್ಥಳೀಯ
ಆಡಳಿತ ಹಲವಾರು ನಿಯಮ ರೂಪಿಸಿದ್ದರೂ, ಕೆಲವೊಂದು ಪಾಲನೆಯಾದರೆ, ಕೆಲವೊಂದು ಗಾಳಿಗೆ ತೂರಲಾಗುತ್ತಿದೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ನಮಗಲ್ಲ ಎಂಬಂತೆ ತಮ್ಮಿಷ್ಟದಂತೆ ಕಾರ್ಯಕ್ರಮ ಮಾಡುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ನಗರದ ಪೇಟೆ ಬೀದಿ, ಕಲಾಮಂದಿರದ ಹಿಂಭಾಗ, ನೂರಡಿ ರಸ್ತೆ ಸೇರಿದಂತೆ ವಿವಿಧೆಡೆ ವಿವಿಧ ಬಗೆಯ ಗಣೇಶ ಮೂರ್ತಿಗಳು ಈಗಾಗಲೇ ಲಗ್ಗೆ ಇಟ್ಟಿವೆ.

ಪೊಲೀಸ್‌ ನಿಯಮಗಳು: ಗಣೇಶ ಪ್ರತಿಷ್ಠಾಪನೆ ಮಾಡುವ ಸ್ಥಳದ ಬಗ್ಗೆ ಆಯಾಯ ಸ್ಥಳೀಯ ಆಡಳಿತದಿಂದ ಪರವಾನಗಿ ಪಡೆಯಬೇಕು. ಸೆಸ್ಕ್‌ನಿಂದ ವಿದ್ಯುತ್‌ ಪರವಾನಗಿ, ಧ್ವನಿವರ್ಧಕ ಅಳವಡಿಸಲು ಸಿಪಿಐ ಅವರಿಂದ ಪರವಾನಗಿ ಪಡೆಯಬೇಕು. ಅಗ್ನಿಶಾಮಕ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಪಡೆದಿರಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಧ್ವನಿವರ್ಧಕ ಉಪಯೋಗಿಸಬಾರದು. ಗಣೇಶ ಮಂಡಳಿಯವರು ಒತ್ತಾಯ ಪೂರ್ವಕವಾಗಿ ಹಣ ವಸೂಲಿ ಮಾಡಬಾರದು. ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮಾರ್ಗದ ಮಾಹಿತಿಯನ್ನು ತಿಳಿಸಬೇಕು.

ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ ಘೋಷಣೆ ಕೂಗಬಾರದು. ಬೆತ್ತಲೆ ಹಾಗೂ ಅರೆಬೆತ್ತಲೆ ನೃತ್ಯ ಮಾಡಬಾರದು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಚೋದನಕಾರಿ ಶಬ್ದಗಳನ್ನು ಬಳಸಬಾರದು. ಪೆಂಡಾಲ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿದರೆ ನಂದಿಸಲು ನೀರು, ಮರಳು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ. ಡಿಜೆ ಸೌಂಡ್ ಆಳವಡಿಕೆ ನಿಷೇಧಿಸಲಾಗಿದೆ.

ವಿಸರ್ಜನೆಗೆ ಸಂಚಾರಿ ವಾಹನ

‌ಜಲ ಮಾಲಿನ್ಯ ತಪ್ಪಿಸುವ ಸಲುವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ವತಿಯಿಂದ ಗಣೇಶ ಮೂರ್ತಿ ವಿಸರ್ಜನೆಗೆ ಸಂಚಾರಿ ವಾಹನ ಸಿದ್ಧಪಡಿಸಲಾಗಿದೆ. ನೀರಿನ ಟ್ಯಾಂಕ್‌ ಇಟ್ಟುಕೊಂಡ ವಾಹನ ನಗರದ ವಿವಿಧೆಡೆ ಸಂಚರಿಸಲಿದೆ. ಸಾರ್ವಜನಿಕರು ಸಿಬ್ಬಂದಿಗೆ ಗಣೇಶ ಮೂರ್ತಿ ಕೊಟ್ಟರೆ ಪರಿಸರಕ್ಕೆ ಮಾರಕವಾಗದ ರೀತಿಯಲ್ಲಿ ವಿಸರ್ಜನೆ ಮಾಡುತ್ತಾರೆ.

ಸೆ.2ರಂದು ಸಂಜೆ 6ರಿಂದ 7.30 ರವರೆಗೆ ಸುಭಾಷ್‌ನಗರ, ಅಶೋಕನಗರ, ಸಂಜೆ 7.30ರಿಂದ ರಾತ್ರಿ 9ರವರೆಗೆ ಗಾಂಧಿನಗರ, ನೆಹರೂನಗರ, ರಾತ್ರಿ 9ರಿಂದ 10.30ರವರೆಗೆ ಕಲ್ಲಹಳ್ಳಿ, ಬಂದೀಗೌಡ ಬಡಾವಣೆಯಲ್ಲಿ ವಾಹನ ಸಂಚರಿಸಲಿದೆ. ಮಾಹಿತಿಗೆ ಮೊ.9972584022, 9538686103, 9110485475 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT