ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರು: ರಸ್ತೆ, ಬಡಾವಣೆಗಳಲ್ಲಿ ಕಸದ ರಾಶಿ

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತ್ಯಾಜ್ಯದ ದರ್ಶನ, ತೆರವುಗೊಳ್ಳದ ತೊಟ್ಟಿಗಳು
Last Updated 25 ಅಕ್ಟೋಬರ್ 2019, 9:46 IST
ಅಕ್ಷರ ಗಾತ್ರ

ಮದ್ದೂರು: ಪಟ್ಟಣದ ವಿವಿಧ ಬಡಾವಣೆ, ರಸ್ತೆಗಳಲ್ಲಿ ಕಸ ಚೆಲ್ಲಾಡುತ್ತಿದ್ದು ಪುರಸಭೆ ಅಧಿಕಾರಿಗಳು ಪಟ್ಟಣದ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ಸೋತಿದ್ದಾರೆ.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬಳಿಯೇ ಕಸದ ರಾಶಿ ಬಿದ್ದಿದೆ.ಹೆದ್ದಾರಿಯಲ್ಲಿ ಓಡಾಡುವ ವಾಹನ ಸವಾರರು ಕಸದ ರಾಶಿ ದರ್ಶನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಸ ಬಿದ್ದಿರುವ ಕಾರಣ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ನಿವಾಸಿಗಳು ಮಕ್ಕಳನ್ನು ಹೊರಗೆ ಕಳುಹಿಸಲು ಭಯ ಪಡುತ್ತಾರೆ.

ರಸ್ತೆಯದ್ದು ಒಂದು ಸಮಸ್ಯೆಯಾದರೆ ಪಟ್ಟಣದ ವಿವಿಧ ಬಡಾವಣೆಗಳ ಕಸದ ಗೋಳ ಹೇಳತೀರದಾಗಿದೆ. ಹಲವು ವಾರ್ಡ್‌ಗಳಲ್ಲಿ ಪುರಸಭೆ ತೊಟ್ಟಿಗಳು ತೆರವುಗೊಳ್ಳದೆ ದುರ್ವಾಸನೆಬೀರುತ್ತಿವೆ. ರಸ್ತೆಯ ಬದಿಯಲ್ಲಿ, ಖಾಲಿ ನಿವೇಶನದಲ್ಲಿ ಕಸ ಸುರಿದು ವಾತಾವರಣ ವನ್ನು ಹಾಳು ಮಾಡಲಾಗಿದೆ.

‘ಪುರಸಭೆ ಅಧಿಕಾರಿಗಳು ಕಸ ವಿಲೇವಾರಿ ಬಗ್ಗೆ ಗಮನ ಕೊಡುತ್ತಿಲ್ಲ. ಸಮಸ್ಯೆ ಕುರಿತು ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ನಿವಾಸಿಗಳು ದೂರುತ್ತಾರೆ.

ಪ್ರತಿ ನಿತ್ಯ ಕಸ ವಿಲೇವಾರಿಗೆ ಪುರಸಭೆಯಲ್ಲಿ ಮೂರು ಆಟೊ ಟಿಪ್ಪರ್, ಒಂದು ಟ್ರಾಕ್ಟರ್‌, ಒಂದು ಕಾಂಪ್ಯಾಕ್ಟರ್ ವಾಹನ ಕಾರ್ಯ ನಿರ್ವಹಣೆ ಮಾಡುತ್ತಿವೆ. ಬೆಳಿಗ್ಗೆಯಾದರೆ ಪ್ರತಿ ವಾರ್ಡ್‌ಗಳಲ್ಲಿ ಸಂಚರಿಸಿ ಕಸ ಸಂಗ್ರಹ ಮಾಡುತ್ತವೆ. ಆದರೆ, ವಾಹನಗಳು ನಿಯಮಿತವಾಗಿ ಬಾರದ ಕಾರಣ ಕಸ ಸುರಿಯುವುದು ಎಲ್ಲಿ ಎಂಬ ಪ್ರಶ್ನೆ ನಿವಾಸಿಗಳನ್ನು ಕಾಡುತ್ತಿದೆ.

ಬೆಂಗಳೂರು– ಮೈಸೂರು ಹೆದ್ದಾರಿಗಳ ಬದಿ, ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಎದುರು, ಪೇಟೆಬೀದಿ, ಲೀಲಾವತಿ ಬಡಾವಣೆಯ ಪಾರ್ಕ್ ಮುಂಭಾಗ, ಹಳೇ ಬಸ್ ನಿಲ್ದಾಣದಿಂದ ಟೀಚರ್ಸ್ ಕಾಲೊನಿ ರಸ್ತೆ, ಸರ್ ಎಂ.ವಿಶ್ವೇಶ್ವರಯ್ಯ ನಗರ, ರಾಮ್ ರಹೀಂ ನಗರ, ಚನ್ನೇಗೌಡ ಬಡಾವಣೆ, ಕೆ.ಎಚ್.ನಗರಕ್ಕೆ ಹೋಗುವ ಗೊರವನಹಳ್ಳಿ ರಸ್ತೆ, ನೀರಿನ ಟ್ಯಾಂಕ್ ಬಳಿ ಕಸ ರಾಶಿ ಬಿದ್ದಿದ್ದು ಪುರಸಭೆ ಸಿಬ್ಬಂದಿ ತೆರವುಗೊಳಿಸಿಲ್ಲ.

‘ಎಲ್ಲೆಂದರಲ್ಲಿ ಕಸ ಬಿದ್ದು ಚೆಲ್ಲಾಡುತ್ತಿದ್ದು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಇದು ಹೀಗೆಯೇ ಮುಂದುವರಿದರೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಶೀಘ್ರ ಪುರಸಭೆ ಸಿಬ್ಬಂದಿ ಬಡಾವಣೆಗಳನ್ನು ಸ್ವಚ್ಛಗೊಳಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಶಿವಪುರದ ನಾರಾಯಣಗೌಡ ಎಚ್ಚರಿಕೆ ನೀಡಿದರು.‘ಕಸದ ಸಮಸ್ಯೆಯಿಂದ ಜನರಿಗೆ ಬೇಸರವಾಗಿದ್ದು, ರೋಗಗಳು ಹರಡುತ್ತಿವೆ. ಪುರಸಭೆ ಈ ಸಮಸ್ಯೆಯ ಪರಿಹಾರಕ್ಕೆ ಮುಂದಾಗಬೇಕಾಗಿದೆ’ ಎಂದು ಪಟ್ಟಣದ ನಿವಾಸಿ ಮಂಜುನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT