ಗುರುವಾರ , ಡಿಸೆಂಬರ್ 3, 2020
18 °C
ಕಸ, ಬೀದಿನಾಯಿಗಳ ಹಾವಳಿ, ಭಯದ ನಡುವೆ ಬದುಕುತ್ತಿರುವ ನಿವಾಸಿಗಳು

ಮಂಡ್ಯ: ಮೂಲ ಸೌಲಭ್ಯ ಕಾಣದ ಕೊನೆ ಬಡಾವಣೆಗಳು

ಶರತ್‌ ಎಂ.ಆರ್‌. Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ನಗರದ ಮರೀಗೌಡ ಬಡಾವಣೆಗೆ ಹೊಂದಿಕೊಂಡಂತೆ ನಗರದ ಕೊನೆಯ ಭಾಗದಲ್ಲಿರುವ ಕೆಂಪೇಗೌಡ ಬಡಾವಣೆ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಬಡಾವಣೆಗಳಲ್ಲಿ ಕಸದ ಸಮಸ್ಯೆ, ಬೀದಿನಾಯಿಗಳ ಹಾವಳಿ ವಿಪರೀತವಾಗಿದ್ದು ಜನರು ಓಡಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.

ನಗರಕ್ಕೆ ಹೊಂದಿಕೊಂಡಂತಿದ್ದರೂ ಕೆಂಪೇಗೌಡ ಬಡಾವಣೆ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಬಡಾವಣೆಗಳು ಇಂಡುವಾಳು ಗ್ರಾಮ ಪಂಚಾಯಿತಿಗೆ ಸೇರಿವೆ. ನಗರಸಭೆಯಾಗಲೀ, ಗ್ರಾಮ ಪಂಚಾಯಿತಿಯಾಗಲೀ ಬಡಾವಣೆಗೆ ಸುಸಜ್ಜಿತ ರಸ್ತೆ ಸೌಲಭ್ಯ, ಬೀದಿ ದೀಪ, ಚರಂಡಿ ಸೇರಿ ಮೂಲ ಸೌಲಭ್ಯ ಒದಗಿಸದ ಹಿನ್ನೆಲೆಯಲ್ಲಿ ಜನರು ಸಂಕಷ್ಟದಲ್ಲಿ ಜೀವಿಸುವಂತಾಗಿದೆ.

ಮರೀಗೌಡ ಬಡಾವಣೆಯ ಮೂರನೇ ತಿರುವಿನ ಕೊನೆಯಿಂದ ಕೆಂಪೇಗೌಡ ಬಡಾವಣೆ, ನಾಲ್ಕನೇ ಅಡ್ಡರಸ್ತೆಯ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್‌ ಬಡಾವಣೆಗಳು ಪ್ರಾರಂಭವಾಗುತ್ತದೆ. ಇವು ಇತ್ತೀಚಿನ ಬಡಾವಣೆಗಳಾಗಿದ್ದು, ಹೊಸ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ನಿವೇಶನವಾಗಿ ರೂಪಾಂತರಗೊಳ್ಳದ ಕೃಷಿ ಭೂಮಿಯೂ ಇಲ್ಲಿದ್ದು ನಾಲೆಯಲ್ಲಿ ಹರಿಸಿದ ನೀರು ಬಡಾವಣೆಗಳಿಗೂ ಹರಿದು ಬರುತ್ತಿದೆ.

ಹೊಸ ಬಡಾವಣೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೆಲವರು ಕೊಳಚೆ ನೀರನ್ನು ಕಾಲುವೆಗೆ ಬಿಡುತ್ತಿದ್ದು ರೋಗ ಹರಡುವ ಭೀತಿ ಎದುರಾಗಿದೆ. ಮುಂಗಾರು ಆರಂಭವಾದರೂ ಕಾಲುವೆಗಳನ್ನು ಸ್ವಚ್ಛಗೊಳಿಸದ ಕಾರಣ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿವೆ. ನೀರು ಹರಿಯಲು ಇದ್ದ ಸಣ್ಣ ಸಣ್ಣ ಚರಂಡಿಗಳು ಒತ್ತುವರಿಯಾಗಿದ್ದು ಖಾಲಿ ನಿವೇಶನಗಳಲ್ಲಿ ನೀರು ನಿಂತು ವಾಸನೆ ಬರುತ್ತಿದ್ದು ಜನರು ಮೂಗು ಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೆಂಪೇಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಬಡಾವಣೆ, ಕಿರಗಂದೂರು ಜನರು ಮರಿಗೌಡ ಬಡಾವಣೆ ಮೂರನೇ ಅಡ್ಡರಸ್ತೆಯ ಮೂಲಕವೇ ನಗರ ಪ್ರವೇಶಿಸುತ್ತಾರೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಅಪಾರ ಸಂಖ್ಯೆಯ ಜನರು ಇದೇ ರಸ್ತೆಯಲ್ಲಿ ತಿರುಗಾಡುತ್ತಾರೆ. ಆದರೆ ಕೊನೆಯಲ್ಲಿ ವಿದ್ಯುತ್‌ ದೀಪ ಇಲ್ಲವಾಗಿದ್ದು, ರಾತ್ರಿ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಅಲ್ಲದೆ ರಸ್ತೆ ಕಿರಿದಾಗಿದ್ದು, ಸಣ್ಣಪುಟ್ಟ ಅವಘಡಗಳು ಸಾಮಾನ್ಯವಾಗಿವೆ.

ಇತ್ತೀಚೆಗೆ ನಗರದಲ್ಲಿ ಸುರಿದ ಮಳೆಯಿಂದಾಗಿ ಒಳಚರಂಡಿಯಲ್ಲಿ ನೀರು ತುಂಬಿ ರಾಡಿ ಎಬ್ಬಿಸಿತ್ತು. ಒಳಚರಂಡಿಗಳು ಸರಿಯಾದ ರೀತಿಯಲ್ಲಿ ನಿರ್ಮಿಸದಿರುವುದು ಇದಕ್ಕೆ ಕಾರಣವಾಗಿದ್ದು, ಜನರು ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೆ ಬಡಾವಣೆಗಳ ರಸ್ತೆಗಳ ಮೂಲೆಗಳಲ್ಲಿ ಕಸದ ರಾಶಿಯೇ ಕಾಣಸಿಗುತ್ತದೆ. ಕಸವನ್ನು ಸಮರ್ಪಕವಾಗಿ ಸಂಗ್ರಹಿಸದ ಕಾರಣ ಎಲ್ಲೆಂದರಲ್ಲಿ ಕಸ ಬಿದ್ದು ಚೆಲ್ಲಾಡುತ್ತಿದೆ.

ಕಸ ವಿಲೇವಾರಿ ವಾಹನಗಳು ಬಂದ ಸಂದರ್ಭದಲ್ಲಿ ಇಲ್ಲಿಯ ಜನರು ಕಸ ನೀಡದೆ ನಂತರದಲ್ಲಿ ರಸ್ತೆಯ ಮೂಲೆಯಲ್ಲಿ ಸುರಿಯುತ್ತಿರುವ ಕಾರಣ ಕಸದ ಸಮಸ್ಯೆ ಸೃಷ್ಟಿಯಾಗಿದೆ. ರಸ್ತೆಬದಿ ಬಿದ್ದಿರುವ ಕಸವನ್ನು ನಗರಸಭೆಯಾಗಲೀ, ಗ್ರಾಮ ಪಂಚಾಯಿತಿಯಾಗಲೀ ತೆರವು ಮಾಡಿಲ್ಲ.

ಮೂರನೇ ಅಡ್ಡ ರಸ್ತೆಯ ಕೊನೆಯ ಭಾಗದಿಂದ ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸುರಭಿ ಕಲ್ಯಾಣ ಮಂಟಪದವರೆಗೂ ಕಾಲುವೆ ಇದೆ. ಇದನ್ನು ಸ್ವಚ್ಛ ಮಾಡದ ಕಾರಣ ದುರ್ವಾಸನೆ ಬೀರುತ್ತಿದೆ. ಬಡಾವಣೆಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಮಕ್ಕಳು, ಮಹಿಳೆಯರು ಓಡಾಡಲು ಭಯಪಡುವಂತಾಗಿದೆ ಎಂದು ಇಲ್ಲಿಯ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

‘ಕೆಂಪೇಗೌಡ ಬಡಾವಣೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ನಗರಸಭೆ ಗಮನಕ್ಕೆ ತಂದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಇಂಡುವಾಳು ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಕೇಳಿದರೆ ಅದು ನಗರಸಭೆಗೆ ಸೇರುತ್ತದೆ ಎಂದು ಹೇಳುತ್ತಾರೆ. ಮನೆಯ ಮುಂದಿನ ಬೀದಿಯಲ್ಲಿ ವಿದ್ಯುತ್‌ ದೀಪ ಇಲ್ಲವಾಗಿದ್ದು, ವಾಹನ ಸವಾರರಿಗೆ ರಸ್ತೆಯ ಕೊನೆ ಯಾವುದು ಎಂಬುದೇ ತಿಳಿಯದಾಗಿದೆ. ಮಳೆ ಬಂದರೆ ಒಳಚರಂಡಿಯ ನಿಜ ರೂಪ ತಿಳಿಯುತ್ತದೆ. ಕೂಡಲೇ ಇವುಗಳನ್ನು ಸರಿಪಡಿಸಿ ತೆರಿಗೆ ಪಾವತಿಸುವವರಿಗೆ ಮೂಲ ಸೌಲಭ್ಯ ಕಲ್ಪಿಸಬೇಕು’ ಎಂದು ಬಡಾವಣೆಯ ನಿವಾಸಿ, ನಿವೃತ್ತ ಪ್ರಾಧ್ಯಾಪಕ ಜಿ.ಟಿ.ವೀರಪ್ಪ ಹೇಳಿದರು.

ಬಡಾವಣೆಗಳಲ್ಲಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡಿಸಲಾಗುವುದು. ಬೀದಿ ದೀಪಗಳನ್ನು ಸರಿಪಡಿಸಲಾಗುವುದು. ಶಾಸಕರ ಅನುದಾನದಲ್ಲಿ ರಸ್ತೆಗಳನ್ನು ಮಾಡಿಸಲಾಗುವುದು
–ದಯಾನಂದ್‌, ಪಿಡಿಒ, ಇಂಡುವಾಳು ಗ್ರಾ.ಪಂ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು