ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಅಂಗನವಾಡಿಯಲ್ಲೂ ಕೈತೋಟ ನಿರ್ಮಾಣ

ಪೋಷಣ್ ಅಭಿಯಾನ ಮಾಸಾಚರಣೆಗೆ ಚಾಲನೆ; ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಭರವಸೆ
Last Updated 29 ಸೆಪ್ಟೆಂಬರ್ 2020, 16:28 IST
ಅಕ್ಷರ ಗಾತ್ರ

ಮಂಡ್ಯ: ‘ಮಕ್ಕಳಲ್ಲಿ, ಮಹಿಳೆಯರಲ್ಲಿ ಕೈತೋಟ, ಪೌಷ್ಟಿಕಾಂಶ, ಸಾವಯವ ತರಕಾರಿ ಬಗ್ಗೆ ಅರಿವು ಮೂಡಿಸಲು ಜಿಲ್ಲೆಯ ಪ್ರತಿ ಅಂಗನವಾಡಿ ಕೇಂದ್ರದ ಆವರಣದಲ್ಲಿ ಕೈತೋಟ ರೂಪಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪೋಷಣ್ ಅಭಿಯಾನ ಮಾಸಾಚರಣೆ ಅಂಗವಾಗಿ ಮಂಗಳವಾರ ನಡೆದ ಪೌಷ್ಟಿಕ ಕೈತೋಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ 2,500 ಅಂಗನವಾಡಿಗಳಿದ್ದು ಅದರಲ್ಲಿ 150ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ ಈಗಾಗಲೇ ಕೈತೋಟ ನಿರ್ಮಾಣ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರತಿ ಅಂಗನವಾಡಿ ಕೇಂದ್ರದಲ್ಲೂ ಕೈತೋಟ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಜಾಗದ ಸಮಸ್ಯೆ ಇದ್ದರೆ ಅಂತಹ ಅಂಗನವಾಡಿಗಳಿಗೆ ಪುರಸಭೆ , ನಗರಸಭೆ ಅಧಿಕಾರಿಗಳು ಶೀಘ್ರ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದು ಸೂಚಿಸಿದರು.

‘ಪ್ರತಿ ಗ್ರಾಮ, ನಗರ ಹಾಗೂ ಪಟ್ಟಣಗಳಲ್ಲಿ ಪೌಷ್ಟಿಕಾಂಶದ ಬಗ್ಗೆ ತಾಯಂದಿರು, ಮಕ್ಕಳು ಮತ್ತು ಯುವತಿಯರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಸಾವಯವ ಮಾದರಿಯಲ್ಲಿ, ಕೈತೋಟದಲ್ಲಿ ಬೆಳೆದ ತರಕಾರಿ ಬಳಕೆ ಮಾಡುವುದರಿಂದ ಸಮಾಜದ ಆರೋಗ್ಯ ಕಾಪಾಡಬಹುದು. ಇದೇ ಪೋಷಣ್ ಅಭಿಯಾನದ ಪ್ರಮುಖ ಉದ್ದೇಶವೂ ಆಗಿದೆ’ ಎಂದರು.

‘ಪ್ರಸ್ತುತ ಅಂಗನವಾಡಿಗಳಲ್ಲಿ ಉತ್ತಮವಾದ ಕೈತೋಟ ನಿರ್ಮಾಣಮಾಡುವ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗುವುದು. ನಮ್ಮ ಆರೋಗ್ಯ ನಮ್ಮ ಕೈಯಲ್ಲೆ ಇದೆ ಎಂಬ ಬಗ್ಗೆ ಎಲ್ಲರೂ ಅರಿಯಬೇಕು. ಪೌಷ್ಟಿಕ ಆಹಾರದ ಮಹತ್ವವನ್ನು ಅರಿತು ಆರೋಗ್ಯಯುತವಾದ ಸಮಾಜ ನಿರ್ಮಾಣ ಮಾಡಬೇಕು. ಈ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು’ ಎಂದರು.

‘ಒಬ್ಬ ವ್ಯಕ್ತಿಯ ಸರ್ವಾಂಗೀಣವಾಗಿ ಅಭಿವೃದ್ಧಿಯಾಗಬೇಕಾದರೆ ಆತ ಮಗುವಾಗಿದ್ದಾಗಲೇ ಆತನಿಗೆ ಆರೋಗ್ಯ ಉತ್ತಮವಾಗಿರಬೇಕು. 9 ತಿಂಗಳು 9 ದಿನಗಳಾದ ನಂತರ 1 ವರ್ಷ ಮುಗಿಯುವವರೆಗೂ ಮಗುವಿಗೆ ಪೌಷ್ಟಿಕಾಂಶವುಳ್ಳ ಆಹಾರ ಸಿಕ್ಕರೆ ಆ ಮುಗು ಮುಂದೆ ಆರೋಗ್ಯಯುತವಾಗಿ ಬೆಳೆಯುತ್ತದೆ. ಗರ್ಭಿಣಿಯರು ಸಣ್ಣಕ್ಕಿ, ಪಾಲಿಶ್ ಮಾಡಿದ ಅಕ್ಕಿ ತಿನ್ನುವುದರಿಂದ ಹುಟ್ಟುವ ಮಕ್ಕಳು ಸ್ವಲ್ಪ ಬುದ್ದಿಮಾಂದ್ಯರಾಗುವ ಸಾಧ್ಯತೆ ಇದೆ. ಇದು ಸಂಶೋಧನೆಯಿಂದ ದೃಢಪಟ್ಟಿದೆ’ ಎಂದು ವೈದ್ಯರೂ ಆದ ಜಿಲ್ಲಾಧಿಕಾರಿ ಹೇಳಿದರು.

‘ನಮ್ಮ ಜೀವನ ಶೈಲಿಯಲ್ಲಿನ ಸಣ್ಣ ಬದಲಾವಣೆ ಕೂಡ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಅಪೌಷ್ಟಿಕ ಆಹಾರ ಸೇವನೆ, ಸಮಾಜದ ಸುತ್ತಮುತ್ತ ನಡೆಯುವ ಘಟನೆಗಳು ಸಹ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಕೈತೋಟದಿಂದ ಆಗುವಂತಹ ಉಪಯೋಗಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಹಣ್ಣು ಹಂಪಲು ಮತ್ತು ತರಕಾರಿಗಳ ಕೈತೋಟವನ್ನು ನಿರ್ಮಾಣ ಮಾಡುವುದರ ಮೂಲಕ ತಾಜಾವಾದ ಹಣ್ಣು, ತರಕಾರಿಗಳು ಸಿಗುತ್ತವೆ. ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ದಿನ ಉತ್ಸಾಹದಿಂದ ಕೆಲಸ ನಿರ್ವಾಹಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಜುಲ್ಫಿಕರ್ ಉಲ್ಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್‌. ರಾಜ್ ಮೂರ್ತಿ, ಸಿಡಿಪಿಒ ಕುಮಾರಸ್ವಾಮಿ, ಚೇತನ್‍ಕುಮಾರ್, ಅಂಬಿಕಾ, ನಂಜಮಣಿ, ಮೀನಾಕ್ಷಿ, ಶಾಕುಂತಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT