ಬುಧವಾರ, ನವೆಂಬರ್ 20, 2019
26 °C

ದೆವ್ವ ಕಾಣಿಸಿದೆ ಎನ್ನಲಾದ ವಿಡಿಯೊ ವೈರಲ್‌

Published:
Updated:

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕು ಕೊಡಿಯಾಲ ಗ್ರಾಮದ ಸೇತುವೆ ಮೇಲೆ ದೆವ್ವ ಕಾಣಿಸಿಕೊಂಡಿದೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಆ ಭಾಗದ ಜನರು ಹೆದರಿ ಸೇತುವೆ ಮೇಲೆ ಓಡಾಡುವುದನ್ನೇ ಕಡಿಮೆ ಮಾಡಿದ್ದಾರೆ.

ಬಿಳಿಯ ವಸ್ತ್ರ ತೊಟ್ಟವರೊಬ್ಬರು ಕೊಡಿಯಾಲ– ಕೊತ್ತತ್ತಿ ಸೇತುವೆ ಮೇಲೆ ಓಡಾಡುವ, ಎತ್ತರಕ್ಕೆ ಬೆಳೆಯುವ, ಕುಗ್ಗುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಒಂದು ನಿಮಿಷದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ. ದೆವ್ವದ ಸುದ್ದಿ ಎಲ್ಲೆಡೆ ಹರಡಿದ್ದು ಜನರು ಭಯಭೀತರಾಗಿದ್ದಾರೆ. ಸೇತುವೆ ಮೇಲೆ ಓಡಾಡಲು ಭಯಪಡುತ್ತಿದ್ದಾರೆ.

‘ಅಕ್ರಮವಾಗಿ ಕಲ್ಲು, ಜಲ್ಲಿ, ಬೋರ್ಡರ್ಸ್‌ಗಳನ್ನು ಸಾಗಣೆ ಮಾಡಲು ಕೊಡಿಯಾಲ–ಕೊತ್ತತ್ತಿ ಮಾರ್ಗ ಕಳ್ಳಹಾದಿಯಾಗಿದೆ. ಇಲ್ಲಿ ಜನರು, ವಾಹನಗಳ ಓಡಾಟವನ್ನು ತಪ್ಪಿಸುವ ಉದ್ದೇಶಕ್ಕಾಗಿ ಕಿಡಿಗೇಡಿಗಳು ನಕಲಿ ವಿಡಿಯೊ ಸೃಷ್ಟಿಸಿ ಹರಿಬಿಟ್ಟಿದ್ದಾರೆ’ ಎಂದು ಕೊತ್ತತ್ತಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)