ಗುಲಾಂ ಅಲಿಖಾನ್‌ ಗುಂಬಸ್‌ ನಾಶಕ್ಕೆ ಯತ್ನ: ತಹಶೀಲ್ದಾರ್‌ಗೆ ದೂರು

6

ಗುಲಾಂ ಅಲಿಖಾನ್‌ ಗುಂಬಸ್‌ ನಾಶಕ್ಕೆ ಯತ್ನ: ತಹಶೀಲ್ದಾರ್‌ಗೆ ದೂರು

Published:
Updated:
Deccan Herald

ಶ್ರೀರಂಗಪಟ್ಟಣ: ಪಟ್ಟಣದ ಚಂದಗಾಲು ರಸ್ತೆಯಲ್ಲಿ, ಕಾವೇರಿ ನದಿ ದಡದಲ್ಲಿರುವ ಟಿಪ್ಪು ಸುಲ್ತಾನನ ಮಂತ್ರಿ ಗುಲಾಂ ಅಲಿಖಾನ್‌ ಗುಂಬಸ್‌ ಸ್ಮಾರಕವನ್ನು ನಾಶ ಪಡಿಸುವ ಯತ್ನ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ಅವರಿಗೆ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಗವಿಸಿದ್ದಯ್ಯ ಶುಕ್ರವಾರ ದೂರು ನೀಡಿದರು.

ಸ್ಮಾರಕ ಇರುವ ಸ್ಥಳಕ್ಕೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ ಡಿ.ನಾಗೇಶ್‌ ಅವರಿಗೆ ಲಿಖಿತ ದೂರು ನೀಡಿದರು.

‘ಖಾಸಗಿ ವ್ಯಕ್ತಿಯೊಬ್ಬರು ಸ್ಮಾರಕವನ್ನು ನಾಶಪಡಿಸುವ ಯತ್ನ ನಡೆಸಿದ್ದಾರೆ. ಜೆಸಿಬಿ ಯಂತ್ರ ಬಳಸಿ ಪಾರಂಪರಿಕ ಕಟ್ಟಡವನ್ನು ಉರುಳಿಸುವ ಹುನ್ನಾರ ನಡೆದಿದೆ. ಸ್ಮಾರಕವನ್ನು ನಾಶಪಡಿಸಲು ಮುಂದಾಗಿರುವ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಬೇಕು. ಯಥಾಸ್ಥಿತಿ ಕಾಪಾಡುವಂತೆ ಸಂಬಂಧಿಸಿದವರಿಗೆ ಸೂಚಿಸಬೇಕು’ ಎಂದು ಗವಿಸಿದ್ದಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

‘ಮಂಡ್ಯ ಜಿಲ್ಲಾಧಿಕಾರಿಗೂ ಪತ್ರ ಬರೆಯಲಿದ್ದು, ಐತಿಹಾಸಿಕ ಕಟ್ಟಡವನ್ನು ಬೀಳಿಸಲು ನಡೆದಿರುವ ಯತ್ನದ ಕುರಿತು ವರದಿ ನೀಡುತ್ತೇನೆ. ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯಕ್ತರ ಜತೆ ಚರ್ಚಿಸಿ ಇಲಾಖೆಯ ನಿಯಮಗಳ ಅನುಸಾರ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಕಟ್ಟಡದ ಉಳಿದ ಭಾಗವನ್ನು ಉರುಳಿಸಲು ಯತ್ನ ನಡೆಸಿದರೆ ನಿಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ. ಹಾಗಾದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ತೋಟದ ಕೆಲಸಗಾರರಿಗೆ ಎಚ್ಚರಿಸಿದರು.

‘ಮೈಸೂರಿನ ರೇಜಾ ಅಹಮದ್‌ ಎಂಬುವವರಿಗೆ ಸೇರಿರುವ ತೋಟದಲ್ಲಿ ಗುಲಾಂ ಅಲಿಖಾನ್‌ ಗುಂಬಸ್‌ ಇದೆ. ಗುಂಬಸ್‌ ಒಳಗಿನ ಗುಲಾಂ ಅಲಿಖಾನ್‌ ಸಮಾಧಿಯನ್ನು ಮುಚ್ಚಲಾಗಿದೆ. ಅಳಿದುಳಿದ ಕಟ್ಟಡ ಕೂಡ ಶಿಥಿಲವಾಗಿದೆ. ಇರುವ ಸ್ಮಾರಕವನ್ನು ಉಳಿಸಿಕೊಳ್ಳಲು ಗಂಭೀರ ಯತ್ನ ಮಾಡಲಾಗುವುದು’ ಎಂದು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಎನ್‌.ಎಲ್‌.ಗೌಡ ಹೇಳಿದರು. ‘ಭಾಗಶಃ ಕುಸಿದ ಗುಲಾಂ ಅಲಿಖಾನ್‌ ಗುಂಬಸ್‌’ ಶೀರ್ಷಿಕೆಯಡಿ ಆ. 3ರಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !