ಮಂಡ್ಯ: ಸರ್ಕಾರಿ ಹಾಸ್ಟೆಲ್, ವಸತಿ ಶಾಲಾ ಹೊರಗುತ್ತಿಗೆ ನೌಕರರಿಗೆ ಇಲ್ಲಿನ ಗುತ್ತಿಗೆದಾರರು, ವಾರ್ಡನ್‌ಗಳು, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಶೋಷಣೆ ಮಾಡುತ್ತಿರುವುದನ್ನು ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ಘೋಷಣೆಗಳನ್ನು ಕೂಗಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜು ಅವರಿಗೆ ಮನವಿ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಕಳೆದ 15-20 ವರ್ಷಗಳಿಂದ ಕಡಿಮೆ ಸಂಬಳಕ್ಕೆ ವಸತಿ ನಿಲಯ-ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ಡಿ– ಗ್ರೂಪ್ ಅಟೆಂಡರ್, ಕಂಪ್ಯೂಟರ್ ಅಪರೇಟರ್, ನರ್ಸ್‌ಗಳಿಗೆ ಭದ್ರತೆ ಇಲ್ಲದೆ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುತ್ತಾರೆ ಎಂದು ಆರೋಪಿಸಿದರು.
ನೇರವಾಗಿ ಇಲಾಖೆಯಿಂದ ವೇತನ ನೀಡಬೇಕು. ನಿವೃತ್ತಿವರೆಗೆ ಸೇವಾ ಭದ್ರತೆ ಕೊಡಬೇಕು. 10 ವರ್ಷ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ಸಿಬ್ಬಂದಿಯನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದ ಅಡಿಯಲ್ಲಿ ತರಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಪರಿಷ್ಕರಣೆ ಸಮಿತಿ ಸಭೆ ಸೇರಿ ತೀರ್ಮಾನ ಮಾಡಿ ಕನಿಷ್ಠ ವೇತನ ₹31 ಸಾವಿರ ನೀಡಬೇಕು. ಕಾರ್ಮಿಕ ಕಾನೂನು ಪ್ರಕಾರ ವಾರದ ರಜೆ ಕೊಡಬೇಕು. ಕೆಲಸದ ಸಮಯ ನಿಗದಿ ಆಗಬೇಕು. ಗುತ್ತಿಗೆದಾರರು ಸಂಬಳದ ಚೀಟಿ, ನೇಮಕಾತಿ ಆದೇಶ ಪತ್ರ, ಐಡಿ ಕಾರ್ಡ್, ಸರ್ವೀಸ್ ಸರ್ಟಿಫಿಕೇಟ್, ಇಎಸ್‌ಐ ಮತ್ತು ಪಿಎಫ್ ಹಣ ತುಂಬಿದ ರಶೀದಿ ಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿ ತಿಂಗಳು 5ರೊಳಗೆ ಸಂಬಳ ಕೊಡಬೇಕು. ಬಾಕಿ ಇರುವ ಸಂಬಳವನ್ನು ತಕ್ಷಣ ಪಾವತಿ ಮಾಡಬೇಕು. ಸುಪ್ರೀಂಕೋರ್ಟ್ ಅದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ಕಾಯಂ ನೌಕರರ ಸ್ಥಳಗಳಿಗೆ ಕಾಯಂ ನೌಕರರನ್ನು ವರ್ಗಾವಣೆ ಮಾಡಬೇಕು. ಬಿಸಿಎಂ ಇಲಾಖೆಯಲ್ಲಿ ಕೆಲಸ ಕಳೆದು ಕೊಂಡಿರುವ ಹೊರಗುತ್ತಿಗೆ ಸಿಬ್ಬಂದಿಯನ್ನು ಮತ್ತೆ ಮರು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಹನುಮೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂತೋಷ್, ನಾಗರಾಜು, ಕೆ.ಜಗದೀಶ್, ಮಂಜು, ಎಸ್.ಜಯಲಕ್ಷ್ಮಿ, ಎಸ್.ಲಕ್ಷ್ಮಿ, ಮಂಜುನಾಥ, ಮಂಗಳಮ್ಮ, ನಾಗರತ್ನ, ಜಯಮ್ಮ, ಗೌರಮ್ಮ, ಮಹೇಶ್, ರಶ್ಮಿ, ಅನುಸೂಯಮ್ಮ, ಶಿವರತ್ನಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.