ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ವಂಚನೆ: ಮತ್ತೆ ಮೂವರ ಬಂಧನ

ಐಜಿ ಮಧ್ಯ ಪ್ರವೇಶದೊಂದಿಗೆ ತಿರುವು ಪಡೆದುಕೊಂಡ ಪ್ರಕರಣ: ತನಿಖಾ ತಂಡ ಬದಲು
Last Updated 20 ಡಿಸೆಂಬರ್ 2020, 2:42 IST
ಅಕ್ಷರ ಗಾತ್ರ

ಮಂಡ್ಯ: ಅಧಿಕ ಬಡ್ಡಿ ಆಸೆ ತೋರಿಸಿ ಮಹಿಳೆಯರಿಂದ ಚಿನ್ನ ಪಡೆದು ವಂಚಿಸಿದ ಪ್ರಕರಣ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಶನಿವಾರ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಕರಣದ ತನಿಖಾ ತಂಡವನ್ನು ಏಕಾಏಕಿ ಬದಲಾವಣೆ ಮಾಡಲಾಗಿದ್ದು, ಜಿಲ್ಲಾ ಅಪರಾಧ ತನಿಖಾ ದಳ (ಡಿಸಿಐಬಿ)ಕ್ಕೆ ವಹಿಸಲಾಗಿದೆ. ಡಿಸಿಐಬಿ ಇನ್‌ಸ್ಪೆಕ್ಟರ್‌ ಹರೀಶ್‌ ಕುಮಾರ್‌ ನೇತೃತ್ವದಲ್ಲಿ ಹೊಸ ತಂಡ ರಚನೆ ಮಾಡಲಾಗಿದೆ.

ತಂಡ ಶನಿವಾರ ವಿಶೇಷ ಕಾರ್ಯಕಾಚರಣೆ ನಡೆಸಿ ಆರ್‌.ಪಿ ರಸ್ತೆ ಫೆಡ್‌ ಬ್ಯಾಂಕ್‌ ಫೈನಾನ್ಸ್‌ನಲ್ಲಿ ವ್ಯವಸ್ಥಾಪಕರಾಗಿದ್ದ ಶಂಕರ್‌, ಸಹಾಯಕ ವ್ಯವಸ್ಥಾಪಕಿಯಾಗಿದ್ದ ಶಾಲಿನಿ, ಚಿನ್ನ ಪರಿಶೀಲನೆ ನಡೆಸುತ್ತಿದ್ದ ರಾಜೇಶ್‌ ಅವರನ್ನು ಬಂಧಿಸಿದೆ. ಫೈನಾನ್ಸ್‌ನಲ್ಲಿ ಇಟ್ಟ ಚಿನ್ನವನ್ನು ಅಕ್ರಮವಾಗಿ ಬಿಡಿಸಿ, ಕರಗಿಸಿ ಮಾರಾಟ ಮಾಡಿದ್ದಾರೆ ಎಂಬ ಆರೋಪಿ ಇವರ ಮೇಲಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ.

ಚಿನ್ನ ಮತ್ತು ಹಣ ನೀಡಿ ವಂಚನೆಗೆ ಒಳಗಾದ ಮಹಿಳೆಯರ ದೂರಿನೊಂದಿಗೆ ಪೂರ್ವ ಹಾಗೂ ಪಶ್ಚಿಮ ಠಾಣೆ ಪೊಲೀಸರು ಪ್ರಮುಖ ಆರೋಪಿಗಳಾಗಿದ್ದ ಸೋಮಶೇಖರ್‌ ಹಾಗೂ ಪೂಜಾ ನಿಖಿಲ್‌ ಅವರನ್ನು ಬಂಧಿಸಿದ್ದರು. ಮಂಗಳಮುಖಿ ಸೋನಿಯಾ ದೂರು ನೀಡಿದ ನಂತರ ಹಲವರು ಸರಣಿ ದೂರು ದಾಖಲಾಗಿದ್ದವು. ಆದರೆ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿರಲಿಲ್ಲ. ಹೀಗಾಗಿ ಪ್ರಮುಖ ಆರೋಪಿ ಪೂಜಾ ಜಾಮೀನಿನ ಮೇಲೆ ಹೊರಬಂದಿದ್ದರು.

ತನಿಖಾ ತಂಡದ ವಿರುದ್ಧ ದೂರು: ಅಧಿಕ ಬಡ್ಡಿಯಾಸೆಗೆ ನೂರಾರು ಮಹಿಳೆಯರು ಚಿನ್ನ ಕೊಟ್ಟಿದ್ದು ಅದಕ್ಕೆ ಯಾವುದೇ ದಾಖಲಾತಿ ಇರಲಿಲ್ಲ. ಇದೇ ನೆಪದೊಂದಿಗೆ ತನಿಖೆ ಸಮರ್ಪಕವಾಗಿ ನಡೆದಿರಲಿಲ್ಲ. ಮಹಿಳೆಯರು ನೀಡಿದ ದೂರನ್ನು ಪ್ರತ್ಯೇಕ ಪ್ರಕರಣ ಎಂದು ಪರಿಗಣಿಸದೇ ಎಲ್ಲವನ್ನೂ ಒಟ್ಟಾಗಿ ಸೇರಿಸಿ ತನಿಖೆ ನಡೆಸಿದ್ದರು. ₹ 20 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನದ ದಂಧೆ ನಡೆದಿರುವ ಬಗ್ಗೆ ಆರೋಪ ಇದ್ದರೂ ಪೊಲೀಸರು ಕೇವಲ ₹ 5 ಕೋಟಿ ಅವ್ಯವಹಾರವಾಗಿದೆ ಎಂದು ತಿಳಿಸಿ ಕೈತೊಳೆದುಕೊಂಡಿದ್ದರು.

ಪ್ರಕರಣದ ಮೂಲ ಭೇದಿಸುವ ಬದಲು ಕೇವಲ ದೂರು ಕೊಟ್ಟ ಮಹಿಳೆಯರ ಚಿನ್ನದ ಹುಡುಕಾಟಕ್ಕೆ ತನಿಖೆ ಸೀಮಿತಗೊಂಡಿತ್ತು. ಈಚೆಗೆ ದಕ್ಷಿಣ ವಲಯ ಐಜಿಪಿ ವಿಪುಲ್‌ಕುಮಾರ್‌ ನಗರದಲ್ಲಿ ಪೊಲೀಸ್‌ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಚಿನ್ನ ಇಟ್ಟು ಹಣ ಕಳೆದುಕೊಂಡ ಮಹಿಳೆಯರು ನೇರವಾಗಿ ದೂರು ಕೊಟ್ಟಿದ್ದರು. ಸಾರ್ವಜನಿಕರು ಕೂಡ ತನಿಖಾ ತಂಡದ ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಆರೋಪವನ್ನು ಬಹಳ ಗಂಭೀರವಾಗಿ ಪರಿಣಗಿಸಿ ಐಜಿ ವಿಫುಲ್‌ ಕುಮಾರ್‌ ತನಿಖಾ ತಂಡ ಬದಲಾವಣೆ ಮಾಡುವಂತೆ ಸೂಚನೆ ನೀಡಿರುವುದು ಕುತೂಹಲ ಮೂಡಿಸಿದೆ. ತನಿಖೆ ಆರಂಭಿಸಿದ ಹರೀಶ್‌ ಕುಮಾರ್‌ ನೇತೃತ್ವದ ತಂಡ ಬ್ಯಾಂಕ್‌ ಸಿಬ್ಬಂದಿಯನ್ನು ಬಂಧಿಸಿದೆ. ಇದರಿಂದಾಗಿ ಇಡೀ ಪ್ರಕರಣ ತಿರುವು ಪಡೆದುಕೊಂಡಿದೆ.

‘ಡಿಸಿಐಬಿ ತಂಡಕ್ಕೆ ತನಿಖಾ ಜವಾ ಬ್ದಾರಿ ವಹಿಸಲಾಗಿದೆ. ಪ್ರಕರಣದ ಹೆಚ್ಚಿನ ವಿವರವನ್ನು ಅವರಿಂದ ಪಡೆಯಲಾ ಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಂ ತಿಳಿಸಿ ದರು. ತನಿಖೆಯ ನೇತೃತ್ವ ವಹಿಸಿರುವ ಡಿಸಿಐಬಿ ಇನ್‌ಸ್ಪೆಕ್ಟರ್‌ ಹರೀಶ್‌ ಕುಮಾರ್‌ ಫೋನ್‌ ಕರೆ ಸ್ವೀಕಾರ ಮಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT