ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರು| ಬನ್ನಹಳ್ಳಿ ಸರ್ಕಾರಿ ಶಾಲೆ ಸೇರಲು ಮಕ್ಕಳ ಪೈಪೋಟಿ: 110ಕ್ಕೇರಿದ ದಾಖಲಾತಿ

ಶಾಲೆ ದತ್ತು ಪಡೆದು ಹೊಸ ರೂಪ ಕೊಟ್ಟ ಗ್ರಾ.ಪಂ ಸದಸ್ಯೆ ದಿವ್ಯಾ ರಾಮಚಂದ್ರ ಶೆಟ್ಟಿ, ಕಾನ್ವೆಂಟ್‌ಗಳಿಗೆ ಸೆಡ್ಡು
Last Updated 27 ಆಗಸ್ಟ್ 2021, 11:58 IST
ಅಕ್ಷರ ಗಾತ್ರ

ಮಂಡ್ಯ: ಮದ್ದೂರು ತಾಲ್ಲೂಕು ಕೊಕ್ಕರೆಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಬನ್ನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಾಖಲಾತಿಗೆ ಮಕ್ಕಳಲ್ಲಿ ಪೈಪೋಟಿ ಏರ್ಪಟ್ಟಿದೆ. ಕಾನ್ವೆಂಟ್‌ ತ್ಯಜಿಸಿ ಸರ್ಕಾರಿ ಶಾಲೆಗೆ ದಾಖಲಾಗುತ್ತಿದ್ದು ಮಕ್ಕಳ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.

ಕಳೆದ 3 ವರ್ಷಗಳ ಹಿಂದಷ್ಟೇ ಮಕ್ಕಳ ಸಂಖ್ಯೆ ಕೇವಲ 32 ಇತ್ತು. ಗುಣಮಟ್ಟದ ಶಿಕ್ಷಣ ಅರಸಿ ಪೋಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್‌ಗಳಿಗೆ ದಾಖಲಿಸುತ್ತಿದ್ದರು. ಆದರೆ ಗ್ರಾಮದ ಸರ್ಕಾರಿ ಶಾಲೆಯ ಸ್ಥಿತಿ ಈಗ ಬದಲಾಗಿದ್ದು ಕಾನ್ವೆಂಟ್‌ಗಳನ್ನು ಮೀರಿಸಿದೆ. ಶಾಲೆಯ ಪ್ರತಿ ಕೊಠಡಿಯೂ ಸ್ಮಾರ್ಟ್‌ ತರಗತಿಯಾಗಿದ್ದು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿದೆ.

ಶಾಲೆ ಪೇಂಟಿಂಗ್‌ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗ್ರಾ.ಪಂ ಸದಸ್ಯೆ ದಿವ್ಯಾ ರಾಮಚಂದ್ರಶೆಟ್ಟಿ
ಶಾಲೆ ಪೇಂಟಿಂಗ್‌ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗ್ರಾ.ಪಂ ಸದಸ್ಯೆ ದಿವ್ಯಾ ರಾಮಚಂದ್ರಶೆಟ್ಟಿ

ಶಾಲಾ ಆವರಣದಲ್ಲಿ ಉದ್ಯಾನ, ಪಾಠೋಪಕರಣ, ಕ್ರೀಡಾ ಸಲಕರಣೆ, ಪ್ರತ್ಯೇಕ ಸಮವಸ್ತ್ರ, ಗುರುತಿನ ಚೀಟಿ ವ್ಯವಸ್ಥೆಯ ಮೂಲಕ ಮಕ್ಕಳನ್ನು ಸೆಳೆಯಲಾಗುತ್ತಿದೆ. ಶಾಲಾ ಕೊಠಡಿಗಳಲ್ಲಿ ಫ್ಯಾನ್‌, ಉತ್ತಮ ಬೋರ್ಡ್‌, ಚಾರ್ಟ್‌ಗಳಿದ್ದು ಮಕ್ಕಳ ಮನಸೂರೆಗೊಳ್ಳುತ್ತಿವೆ. ಶಾಲಾ ಕಟ್ಟಡಕ್ಕೆ ಮನ ಸೆಳೆಯುವ ಬಣ್ಣ, ಚಿತ್ರ, ಜಾಗೃತಿ ಬರಹಗಳು ಶಾಲೆಯನ್ನು ಸುಂದರವಾಗಿಸಿವೆ. ಹೀಗಾಗಿ ಪೋಷಕರು ಕಾನ್ವೆಂಟ್‌ ಬಿಡಿಸಿ ಈ ಶಾಲೆಗೆ ಮಕ್ಕಳನ್ನು ಸೇರಿಸಲು ತುದಿಗಾಲ ಮೇಲೆ ನಿಂತಿದ್ದಾರೆ.

ದತ್ತು ಪಡೆದ ಗ್ರಾ.ಪಂ ಸದಸ್ಯೆ: ಬನ್ನಹಳ್ಳಿ ಸರ್ಕಾರಿ ಶಾಲೆಯಲ್ಲಿ ಆಗಿರುವ ಬದಲಾವಣೆಗೆ ಅಲ್ಲಿಯ ಗ್ರಾಮ ಪಂಚಾಯಿತಿ ಸದಸ್ಯೆಯೇ ಕಾರಣಕರ್ತರಾಗಿದ್ದಾರೆ. ಗ್ರಾ.ಪಂ ಸದಸ್ಯೆ ದಿವ್ಯಾ ರಾಮಚಂದ್ರಶೆಟ್ಟಿ ಸದಾ ಗ್ರಾಮಸ್ಥರ ಸಂಪರ್ಕದಲ್ಲಿದ್ದು ಶಾಲೆಯನ್ನು ದತ್ತು ಪಡೆದು, ಸ್ವಂತ ಹಣ ಹಾಕಿ ಅಭಿವೃದ್ಧಿಪಡಿಸಿದ್ದಾರೆ. ಮೂರು ವರ್ಷಗಳಿಂದ ಶಾಲೆ ಉನ್ನತೀಕರಣಕ್ಕೆ ಶ್ರಮಿಸುತ್ತಿರುವ ಅವರು ಶಾಲೆಯನ್ನು ಆಕರ್ಷಣೆಯ ಕೇಂದ್ರವನ್ನಾಗಿಸಿದ್ದಾರೆ.

ಮೊದಲು ಮಕ್ಕಳಿಗೆ ಸಮವಸ್ತ್ರ, ನೋಟ್‌ಬುಕ್‌, ಪಾಠೋಪಕರಣ, ಕ್ರೀಡಾ ಸಮಾಗ್ರಿ ವಿತರಣೆ ಮಾಡುತ್ತಿದ್ದರು. ಆದರೆ ಈಗ ಇಡೀ ಶಾಲೆಯನ್ನು ದತ್ತು ಪಡೆದು ಸಮಗ್ರ ಅಭಿವೃದ್ಧಿಪಡಿಸಿದ್ದಾರೆ. ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆ ಆಯೋಜನೆ ಮಾಡಿ ಸ್ಪರ್ಧಾ ಮನೋಭಾವ ಬೆಳೆಸುತ್ತಿದ್ದಾರೆ.

ಗ್ರಾಮಸ್ಥರನ್ನೂ ಒಳಗೊಂಡಂತೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಕೋವಿಡ್‌ ಮುಗಿದು ಶಾಲೆ ಆರಂಭವಾದರೆ ಸಾಕು ಎನ್ನುವ ಧಾವಂತ ಮಕ್ಕಳಲ್ಲಿದೆ. ಶಾಲೆ ಆರಂಭಗೊಳ್ಳದಿದ್ದರೂ ಮಕ್ಕಳು ಶಾಲೆಗೆ ಬಂದು, ಅಲ್ಲಿಯ ಅಂದವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳ ಮನೆಯೂ (ಎಲ್‌ಕೆಜಿ, ಯುಕೆಜಿ) ಇದ್ದು 20 ಮಕ್ಕಳು ದಾಖಲಾಗಿದ್ದಾರೆ.

ಬನ್ನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಸುಂದರ ನೋಟ
ಬನ್ನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಸುಂದರ ನೋಟ

‘ದಿವ್ಯಾ ಅವರು ಶಾಲೆಯನ್ನು ಅಭಿವೃದ್ಧಿಗೊಳಿಸಿದ ನಂತರ ಕಾನ್ವೆಂಟ್‌ಗೆ ದಾಖಲಾಗಿದ್ದ ಮಕ್ಕಳೆಲ್ಲರೂ ಟಿ.ಸಿ ಪಡೆದು ಇಲ್ಲಿಗೆ ದಾಖಲಾಗುತ್ತಿದ್ದಾರೆ. ಬನ್ನಹಳ್ಳಿ ಮಾತ್ರವಲ್ಲದೇ ಅಕ್ಕಪಕ್ಕದ ಹಳ್ಳಿಗಳ ಮಕ್ಕಳು ಕೂಡ ಆಟೊಗಳ ಮೂಲಕ ಇಲ್ಲಿಗೆ ಶಾಲೆಗೆ ಬರಲು ಸಿದ್ಧರಾಗಿದ್ದಾರೆ’ ಎಂದು ಶಾಲೆಯ ಮುಖ್ಯಶಿಕ್ಷಕ ಡಿ.ಕೃಷ್ಣ ಹೇಳಿದರು.

ವಿಶೇಷ ಗ್ರಾಮ: ಮಂಡ್ಯ ಜಿಲ್ಲೆಯಲ್ಲೇ ಬನ್ನಗಳ್ಳಿ ಗ್ರಾಮ ವಿಶೇಷ ಸ್ಥಾನ ಪಡೆದಿದೆ. ಕಳೆದ 15 ವರ್ಷಗಳಿಂದ ಗ್ರಾ.ಪಂ ಸದಸ್ಯರನ್ನು ಅವಿರೋಧವಾಗಿ ಆಯ್ಕೆಮಾಡುತ್ತಿದ್ಧಾರೆ. 2,500 ಜನಸಂಖ್ಯೆ ಹೊಂದಿರುವ ಈ ಗ್ರಾಮಸ್ಥರು ಗ್ರಾಮಾಭಿವೃದ್ಧಿಯ ಉದ್ದೇಶದೊಂದಿಗೆ ವಿದ್ಯಾವಂತೆಯಾಗಿರುವ ದಿವ್ಯಾ ರಾಮಚಂದ್ರಶೆಟ್ಟಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

‘ಚುನಾವಣೆಗಳು ಬಂದರೆ ನಮ್ಮ ಗ್ರಾಮದಲ್ಲಿ ಯಾವ ಪಕ್ಷದವರೂ ಹಣ ಹಂಚಿಕೆ ಮಾಡುವಂತಿಲ್ಲ. ಯಾರೂ ಹಣಕ್ಕೆ ಮತ ಮಾರಾಟ ಮಾಡುವುದಿಲ್ಲ. ಗ್ರಾಮದ ಅಭಿವೃದ್ಧಿಗೆ ನಾವು ಸಂಘಟಿತರಾಗುತ್ತೇವೆ’ ಎಂದು ಗ್ರಾಮಸ್ಥರು ತಿಳಿಸಿದರು.

*******

ಎಂ.ಟೆಕ್‌, ಪಿಎಚ್‌.ಡಿ ಪದವೀಧರೆ

ಗ್ರಾ.ಪಂ ಸದಸ್ಯೆ ದಿವ್ಯಾ ರಾಮಚಂದ್ರಶೆಟ್ಟಿ ಅವರು ಎಂ.ಟೆಕ್‌, ಪಿಎಚ್‌.ಡಿ ಪದವೀಧರೆಯಾಗಿದ್ದು ಬನ್ನಹಳ್ಳಿ ಗ್ರಾಮದ ಸೊಸೆ. ಸಾಫ್ಟ್‌ವೇರ್‌ ಕಂಪನಿಗಳಲ್ಲಿ, ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ಈಗಲೂ ಅವರಿಗೆ ಪ್ರತಿಷ್ಠಿತ ವಿದೇಶಿ ಕಂಪನಿಗಳಲ್ಲಿ ಅವರಿಗೆ ಅವಕಾಶಗಳಿವೆ. ಆದರೆ ಅವೆಲ್ಲವನ್ನೂ ತ್ಯಜಿಸಿ ದಿವ್ಯಾ ಅತ್ತೆ ಊರಿನ ಗ್ರಾ.ಪಂ ಸದಸ್ಯೆಯಾಗಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರ ಪತಿ ರಾಮಚಂದ್ರಶೆಟ್ಟಿ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದಾರೆ.

‘ಗ್ರಾಮದಲ್ಲಿ ರಂಗಮಂದಿರ, ಗ್ರಂಥಾಲಯವನ್ನೂ ನಿರ್ಮಿಸಲಾಗುವುದು. ನಗರದಂತೆಯೇ ನಮ್ಮ ಹಳ್ಳಿಯಲ್ಲೂ ಉತ್ತಮ ಶಿಕ್ಷಣ ದೊರೆಯಬೇಕು ಎಂಬುದೇ ನನ್ನ ಉದ್ದೇಶ. ಶಾಲೆ ಉನ್ನತೀಕರಣದ ಜೊತೆಗೆ ಗ್ರಾಮದ ಕೆರೆ, ಕಟ್ಟೆಯ ಬದಿ, ಗೋಮಾಳ ಭಾಗದಲ್ಲಿ 10 ಸಾವಿರ ಸೀಡ್‌ಬಾಲ್‌ ಹಾಕಿಸಲಾಗಿದೆ. ಆ ಮೂಲಕ ಗ್ರಾಮದಲ್ಲಿ ಹಸಿರು ಪರಿಸರ ರೂಪಿಸುವ ಗುರಿ ಹೊಂದಿದ್ದೇನೆ’ ಎಂದು ದಿವ್ಯಾ ರಾಮಚಂದ್ರಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT