ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಚುನಾವಣೆಯಲ್ಲೂ ‘ಮೋದಿ’ ಹೆಸರು!

ಕಣದಲ್ಲಿ ಏರಿಕೆಯಾದ ಬಿಜೆಪಿ ಬೆಂಬಲಿಗ ಅಭ್ಯರ್ಥಿಗಳ ಸಂಖ್ಯೆ, ಉಸ್ತುವಾರಿಗಳ ನೇಮಕ
Last Updated 15 ಡಿಸೆಂಬರ್ 2020, 12:07 IST
ಅಕ್ಷರ ಗಾತ್ರ

ಮಂಡ್ಯ: ರಾಜಕೀಯ ಪಕ್ಷ ಹಾಗೂ ಪಕ್ಷಗಳ ಚಿನ್ಹೆ ಅಡಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯದಿದ್ದರೂ ಜಿಲ್ಲೆಯ ಕೆಲವೆಡೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡು ಪ್ರಚಾರದಲ್ಲಿ ತೊಡಗಿರುವುದು ಕುತೂಹಲ ಮೂಡಿಸಿದೆ.

ವಿಧಾನಸಭೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ‘ಮೋದಿ ಅಲೆ’ ಕುರಿತ ಮಾತು ಮುಖ್ಯವಾಹಿನಿಗೆ ಬಂದಿತ್ತು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ನರೇಂದ್ರ ಮೋದಿ ಅವರ ಹೆಸರಿನೊಂದಿಗೆ ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ 7 ವರ್ಷಗಳಿಂದ ಮೋದಿ ಅವರು ಮಾಡಿರುವ ಕೆಲಸಗಳನ್ನು ಹೇಳಿಕೊಂಡು ಮತಯಾಚನೆ ಮಾಡುತ್ತಿದ್ದಾರೆ.

ಕೆಲ ಅಭ್ಯರ್ಥಿಗಳು ಮೋದಿ ಕೆಲಸಗಳ ಕರಪತ್ರ ಮದ್ರಿಸಿ ಮನೆಮನೆಗೆ ಹಂಚುತ್ತಿದ್ದಾರೆ. ಹಳ್ಳಿ, ವಾರ್ಡ್‌ಗಳ ಮತದಾರರ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿ ಮೋದಿ ಸಾಧನೆಯ ಸಂದೇಶಗಳನ್ನು ಹರಿಬಿಟ್ಟಿದ್ದಾರೆ.

‘ಪಂಚಾಯತ್‌ರಾಜ್‌ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ನರೇಂದ್ರ ಮೋದಿ ಅವರು ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಮುಂದಾಗಿದ್ದಾರೆ. ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು ಗ್ರಾಮೀಣ ಭಾಗದಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಹೀಗಾಗಿ ನಾವು ಮೋದಿ ಅವರ ಹೆಸರಿನೊಂದಿಗೆ ಮತ ಯಾಚನೆ ಮಾಡುತ್ತಿದ್ದೇವೆ’ ಎಂದು ಬಿಜೆಪಿ ಕಾರ್ಯಕರ್ತ ಶಿವಕುಮಾರ್‌ ತಿಳಿಸಿದರು.

ಬಿಜೆಪಿ ಬೆಂಬಲಿಗರು: ಕಳೆದ ಹಲವು ಚುನಾವಣೆಗಳಲ್ಲಿ ಬಿಜೆಪಿ ಹೆಸರು ಹೇಳಿಕೊಂಡು ಸ್ಪರ್ಧೆ ಮಾಡುವವರ ಸಂಖ್ಯೆ ಶೇ 5ಕ್ಕಿಂತಲೂ ಕಡಿಮೆ ಇತ್ತು. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ಬಿಜೆಪಿ ವತಿಯಿಂದ ಜಿಲ್ಲೆಯ ನಾಲ್ಕೈದು ಕಡೆಗಳಲ್ಲಿ ಗ್ರಾಮ ಸ್ವರಾಜ್‌ ಸಮಾವೇಶನ ನಡೆಸಿರುವ ಹಿನ್ನೆಲೆಯಲ್ಲಿ ಪಕ್ಷದ ಬೆಂಬಲಿಗ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ ಕಂಡಿದೆ.

ಕಳೆದ ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿದ್ದು ಜಿಲ್ಲೆಯಲ್ಲಿ ಬಿಜೆಪಿ ಚಿಗುರೊಡೆದಿದೆ. ಅದನ್ನು ಮತ್ತಷ್ಟು ಬೆಳೆಸಲು ಮುಖಂಡರು ಮುಂದಾಗಿದ್ದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿಗರ ಸಂಖ್ಯೆ ಹೆಚ್ಚಾಗತೊಡಗಿದೆ. ಹಲವು ಹಳ್ಳಿಗಳಲ್ಲಿ ಬಿಜೆಪಿ ಬೆಂಬಲಿತರು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಬೆಂಬಲಿಗರಿಗೆ ಪೈಪೋಟಿ ನೀಡುತ್ತಿದ್ದಾರೆ.

‘ಈ ಚುನಾವಣೆಯಲ್ಲಿ ನಮ್ಮ ಬೆಂಬಲಿಗ ಅಭ್ಯರ್ಥಿಗಳ ಸಂಖ್ಯೆ ಶೇ 40ಕ್ಕೆ ಹೆಚ್ಚಳವಾಗಿದೆ. ಶಕ್ತಿ ಕೇಂದ್ರಗಳ ಪದಾಧಿಕಾರಿಗಳು ಮತಗಟ್ಟೆ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಮುಖಂಡರ ಹೆಸರು, ಚಿನ್ಹೆ ಬಳಸದಂತೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಜಿಲ್ಲಾ ಬಿಜೆಪಿ ಉಸ್ತುವಾರಿ ಡಾ.ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್‌–ಬಿಜೆಪಿ ಹೊಂದಾಣಿಕೆ: ಜಿಲ್ಲೆಯ ಕೆಲವು ಭಾಗಗಳಲ್ಲಿ ಜೆಡಿಎಸ್‌ ಸುಭದ್ರವಾಗಿದ್ದು ಅಂತಹ ಕಡೆಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಕಡೆಗಳಲ್ಲಿ ಮಾತ್ರ ರಾಜಕೀಯ ಪಕ್ಷ ಗೌಣವಾಗಿದ್ದು ಅಭ್ಯರ್ಥಿಯ ಹೆಸರಿನ ಮೇಲೆ ಚುನಾವಣೆ ನಡೆಯುತ್ತಿದೆ. ಉಳಿದೆಡೆಗಳಲ್ಲಿ ರಾಜಕೀಯ ಪಕ್ಷಗಳ ವಾಸನೆ ಬಲವಾಗಿದೆ.

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜಕೀಯ ಪಕ್ಷ ಹಾಗೂ ಜನಪ್ರತಿನಿಧಿಗಳ ಹೆಸರು ಬಳಕೆ ಮಾಡಿದರೆ ಅದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಚುನಾವಣಾಧಿಕಾರಿಗಳು ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲು ಮಾಡಬೇಕು’ ಎಂದು ವಕೀಲ ಮಂಜುನಾಥ್‌ ಒತ್ತಾಯಿಸಿದರು.

***

ಸುಮಲತಾ, ಅಂಬರೀಷ್‌, ಕಹಳೆ ಬಳಕೆ:

ಬಸರಾಳು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಯೊಬ್ಬರು ತಮ್ಮ ಪ್ರಚಾರ ಭಿತ್ತಿ ಪತ್ರದಲ್ಲಿ ಸಂಸದೆ ಸುಮಲತಾ, ನಟ ಅಂಬರೀಷ್‌ ಚಿತ್ರ ಮುದ್ರಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ವಿಶೇಷವೆಂದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಪಡೆದಿದ್ದ ಕಹಳೆಯ ಚಿತ್ರವನ್ನೇ ಇವರು ಕೂಡ ಚಿನ್ಹೆಯಾಗಿ ಪಡೆದುಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಂಬರೀಷ್‌ ಅಭಿಮಾನಿಯಾಗಿರುವ ಅವರು ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಕೆಲಸ ಮಾಡಿದ್ದು ಸ್ವಾಭಿಮಾನದ ಸಂಕೇತವಾಗಿ ಗ್ರಾ.ಪಂ ಚುನಾವಣೆಯಲ್ಲಿ ಕಹಳೆ ಚಿನ್ಹೆ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT