ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಪ್ರಚಾರ ಬಿರುಸು; ಮೂರು ಪಕ್ಷಗಳಿಗೂ ಪ್ರತಿಷ್ಠೆ

ಜೆಡಿಎಸ್‌ ಶಾಸಕರಿಂದ ಸಭೆ, ಕಾಂಗ್ರೆಸ್‌ ಮುಖಂಡರಿಗೆ ಹೆಚ್ಚಿನ ಜವಾಬ್ದಾರಿ, ಬಿಜೆಪಿ ನಾಯಕರಿಗೆ ಗುರಿ
Last Updated 17 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಮಂಡ್ಯ: ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರ ಬಿರುಸು ಪಡೆದುಕೊಂಡಿದ್ದು ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಮುಖಂಡರಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಆಯಾ ಪಕ್ಷಗಳ ಮುಖಂಡರು ನೇರವಾಗಿ ಅಖಾಡಕ್ಕಿಳಿದಿದ್ದು ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಮೊದಲ ಹಂತದ ಚುನಾವಣೆಯ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಎರಡನೇ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು ಅವರೂ ಬಿರುಸಿನ ಪ್ರಚಾರಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಹೆಚ್ಚಿನ ಸಂಖ್ಯೆಯ ಯುವ ಅಭ್ಯರ್ಥಿಗಳು ಕಣದಲ್ಲಿದ್ದು ವಿಶೇಷ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಮತದಾರರ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಸಿಕೊಂಡು ಮತದಾರರ ಗಮನ ಸೆಳೆಯುತ್ತಿದ್ದಾರೆ.

ಮದ್ದೂರು ತಾಲ್ಲೂಕಿನಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಗ್ರಾಮ ಪಂಚಾಯಿತಿವಾರು ಸಭೆ ನಡೆಸುತ್ತಿದ್ದಾರೆ. ಎಲ್ಲಾ ಅಭ್ಯರ್ಥಿಗಳನ್ನು ಒಟ್ಟಿಗೆ ಸೇರಿಸಿ ಗೆಲುವಿನ ಮಂತ್ರಗಳ ಬೋಧನೆ ಮಾಡುತ್ತಿದ್ದಾರೆ. ನಾಗಮಂಗಲ ಕ್ಷೇತ್ರದ ಶಾಸಕ ಕೆ.ಸುರೇಶ್‌ಗೌಡ ಬಹಿರಂಗ ಸಭೆ ಆಯೋಜನೆ ಮಾಡಿ ತಮ್ಮ ಬೆಂಬಲಿಗರ ಪರ ಪ್ರಚಾರ ಮಾಡುತ್ತಿದ್ದಾರೆ. ನಾಗಮಂಗಲ ಕ್ಷೇತ್ರ ವ್ಯಾಪ್ತಿಗೆ ಬರುವ ಮದ್ದೂರು ತಾಲ್ಲೂಕು ಕೊಪ್ಪ ಹೋಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸುರೇಶ್‌ಗೌಡ ಸಭೆ ನಡೆಸುತ್ತಿದ್ದಾರೆ.

‘ನಮ್ಮ ಎಲ್ಲಾ ಶಾಸಕರು ಪಂಚಾಯಿತಿ ಚುನಾವಣೆಗಾಗಿ ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. ಮುಖಂಡರು ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ಹೇಳಿದರು.

ಕಾಂಗ್ರೆಸ್‌ನಿಂದ ಉಸ್ತುವಾರಿಗಳ ನೇಮಕ: ಕಾಂಗ್ರೆಸ್‌ ಅಂಗಳದಲ್ಲೂ ಚುರುಕಿನ ಚಟುವಟಿಕೆಗಳು ನಡೆಯುತ್ತಿವೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಕೆಪಿಸಿಸಿ ವೀಕ್ಷಕರನ್ನು ನೇಮಕ ಮಾಡಿದ್ದು ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಸೂಚನೆ ನೀಡಿದೆ. ಜೊತೆಗೆ ಜಿಲ್ಲಾ ಕಾಂಗ್ರೆಸ್‌ ವತಿಯಿಂದಲೂ ವಿಧಾನಸಭಾ ಕ್ಷೇತ್ರ, ಜಿಲ್ಲಾ ಪಂಚಾಯಿತಿವಾರು ವೀಕ್ಷಕರನ್ನು ನೇಮಕ ಮಾಡಿದ್ದು ಎಲ್ಲರೂ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

‘ಎಲ್ಲೆಲ್ಲಿ ಹೊಂದಾಣಿಕೆ ಸಾಧ್ಯವೋ ಅಲ್ಲಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ಮದ್ದೂರು ತಾಲ್ಲೂಕು ಕದಲೂರು ಗ್ರಾಮ ಪಂಚಾಯಿತಿಯ 12 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು ಅವಿರೋಧ ಆಯ್ಕೆಯಾಗಿದ್ದಾರೆ. ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಚುನಾವಣೆ ಎದುರಿಸಲಾಗುತ್ತಿದೆ’ ಎಂದು ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ವೀಕ್ಷಕರಾಗಿರುವ ಸಿ.ಎಂ.ದ್ಯಾವಪ್ಪ ಹೇಳಿದರು.

ಬಿಜೆಪಿ ಮುಖಂಡರಿಗೆ ಜವಾಬ್ದಾರಿ: ಬಿಜೆಪಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತಿದೆ. ಜಿಲ್ಲೆಯಲ್ಲಿ ನಡೆದಿರುವ ಗ್ರಾಮ ಸ್ವರಾಜ್‌ ಸಮಾವೇಶ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಶಕ್ತಿ ತುಂಬಿದೆ.

ತಾಲ್ಲೂಕು ಘಟಕದ ಅಧ್ಯಕ್ಷರು ಹಾಗೂ ಶಕ್ತಿ ಕೇಂದ್ರದ ಮುಖ್ಯಸ್ಥರಿಗೆ ವಿವಿಧ ಜವಾಬ್ದಾರಿ ವಹಿಸಲಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 55 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಕೇಳುತ್ತಿರುವ ಆಕಾಂಕ್ಷಿಗಳಿಗೆ ಗುರಿ ನೀಡಲಾಗಿದೆ. ಈಗಿನ ಗ್ರಾ.ಪಂ, ಮುಂದಿನ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿದರೆ ಮಾತ್ರ ಟಿಕೆಟ್‌ ಎಂಬ ಸಂದೇಶವನ್ನು ಕಂದಾಯ ಸಚಿವ ಆರ್‌.ಅಶೋಕ್‌ ನೀಡಿದ್ದಾರೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಚಿನ್ಹೆಯ ವಸ್ತುಗಳ ಉಡುಗೊರೆ!

ಮೊದಲ ಹಂತದ ಚುನಾವಣೆಯ ಅಭ್ಯರ್ಥಿಗಳಿಗೆ ಈಗಾಗಲೇ ಚಿನ್ಹೆಗಳು ಅಂತಿಮಗೊಂಡಿದ್ದು ಭಿತ್ರಿಪತ್ರಗಳನ್ನು ಮುದ್ರಿಸಿ ಹಂಚುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಮತದಾರರನ್ನು ಸೆಳೆಯಲು ಚಿನ್ಹೆಯ ವಸ್ತುಗಳನ್ನೇ ಉಡುಗೊರೆಯನ್ನಾಗಿ ವಿತರಣೆ ಮಾಡುತ್ತಿದ್ದಾರೆ.

ಗಡಿಯಾರ ಚಿನ್ಹೆ ಪಡೆದವರು ಮನೆಮನೆಗೆ ಗಡಿಯಾರ ಹಂಚಿಕೆ, ಕುಕ್ಕರ್‌ ಚಿನ್ಹೆ ಪಡೆದವರು ಕುಕ್ಕರ್‌ಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಉಂಗುರ ಚಿನ್ಹೆ ಪಡೆದ ಅಭ್ಯರ್ಥಿಯೊಬ್ಬರು ಬೆಳ್ಳಿ ಉಂಗುರ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT