ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ನಗರದಲ್ಲೂ ಗ್ರಾ.ಪಂ ಚುನಾವಣೆ!

ಬದಲಾಗದ ‘ದೊಡ್ಡಹಳ್ಳಿ’ ಪಟ್ಟ, ಹೊರವಲಯದ ಬಡಾವಣೆಗಳಲ್ಲಿ ಅಬ್ಬರದ ಪ್ರಚಾರ
Last Updated 16 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಮಂಡ್ಯ: ನಗರಕ್ಕೆ ಅಂಟಿಕೊಂಡಿರುವ ‘ದೊಡ್ಡ ಹಳ್ಳಿ’ ಪಟ್ಟ ಇನ್ನೂ ಬದಲಾಗಿಲ್ಲ. ಮಂಡ್ಯದ ಭಾಗವೇ ಆಗಿರುವ ಹಲವು ಪ್ರಮುಖ ಬಡಾವಣೆಗಳಲ್ಲಿ ಈಗ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿದ್ದು ಸಕ್ಕರೆ ನಗರದ ಹಳ್ಳಿ ಸ್ಥಿತಿ ಅನಾವರಣಗೊಳ್ಳುತ್ತಿದೆ.

ಹನಿಯಂಬಾಡಿ, ಕಾರಸವಾಡಿ ರಸ್ತೆಗಳಲ್ಲಿ, ವಿವಿಧ ಉದ್ಯಾನಗಳಲ್ಲಿ ವಾಕಿಂಗ್‌ ಮಾಡುವ ಜನರಿಗೆ ಗ್ರಾ.ಪಂ ಚುನಾವಣಾ ಅಭ್ಯರ್ಥಿಗಳು ಭಿತ್ತಿಪತ್ರ ಕೊಟ್ಟು ಪ್ರಚಾರ ನಡೆಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಹೊರವಲಯಗಳಲ್ಲಿ ಅಭಿವೃದ್ಧಿಯಾಗಿರುವ ಬಡಾವಣೆಗಳ ನಿವಾಸಿಗಳು ನಗರಸಭೆ ವ್ಯಾಪ್ತಿಯಿಂದ ಹೊರಗಿದ್ದು ನೆಪಕ್ಕಷ್ಟೇ ನಗರವಾಸಿಗಳಾಗಿದ್ದಾರೆ. ನಗರವಾಸಿಗಳು ಕೂಡ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತ ಚಲಾಯಿಸುವ ಅನಿವಾರ್ಯತೆ ಎದುರಾಗಿದೆ.

ಸಾರಿಗೆ ಬಸ್‌ ನಿಲ್ದಾಣದಿಂದ ಸುತ್ತಲೂ ಒಂದು ಕಿ.ಮೀ ಓಡಾಡಿದರೆ ಇಡೀ ಮಂಡ್ಯ ನಗರ ವ್ಯಾಪ್ತಿ ಪೂರ್ಣಗೊಳ್ಳುತ್ತದೆ. 35 ವಾರ್ಡ್‌ಗಳ ನಗರಸಭೆ ಹೆಬ್ಬಾಳದಿಂದ ಜ್ಯೋತಿ ಇಂಟರ್‌ನ್ಯಾಷನಲ್‌ ಹೋಟೆಲ್‌ವರೆಗೆ, ವಿವೇಕಾನಂದನಗರದಿಂದ ಹೊಸಹಳ್ಳಿವರೆಗೆ ಮಾತ್ರ ತನ್ನ ವ್ಯಾಪ್ತಿ ಹೊಂದಿದೆ. ಇಲ್ಲಿಂದ ಹೊರಭಾಗದಲ್ಲಿರುವ ಬಹುತೇಕ ಬಡಾವಣೆಗಳು ಈಗಲೂ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿವೆ. ಜನರು ಮಂಡ್ಯದಲ್ಲೇ ವಾಸಿಸುತ್ತಿದ್ದರೂ ತಮ್ಮ ಮನೆಗಳ ದಾಖಲಾತಿಗಳನ್ನು ಆಯಾ ಗ್ರಾಮ ಪಂಚಾಯಿತಿ ಕಚೇರಿಗಳಿಂದ ಪಡೆಯಬೇಕಾಗಿದೆ.

ಮೈಷುಗರ್‌ ಕಾರ್ಖಾನೆ ಸಮೀಪದಲ್ಲೇ ಇರುವ ಅಸಿಟೇಟ್‌ ಟೌನ್‌ ಉಮ್ಮಡಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಮರೀಗೌಡ ಬಡಾವಣೆಯ ವಿಸ್ತರಣಾ ಕಾಲೊನಿಗಳಾದ ಕೆಂಪೇಗೌಡ ಬಡಾವಣೆ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಬಡಾವಣೆಗಳು ಇಂಡುವಾಳು ಪಂಚಾಯಿತಿ ವ್ಯಾಪ್ತಿಯಲ್ಲಿವೆ. ಮಂಡ್ಯದ ಪ್ರಮುಖ ಬಡಾವಣೆಯಂತಿರುವ ಕಾವೇರಿ ನಗರ ಸಂತೆಕಸಲಗೆರೆ ಪಂಚಾಯಿತಿಗೆ ಸೇರಿದೆ. ದ್ವಾರಕನಗರ, ಶ್ರೀರಾಮ ನಗರ, ಯತ್ತಗದಹಳ್ಳಿ ಹೊಸ ಬಡಾವಣೆ, ಶ್ರಂಕರಪ್ಪ ಲೇಔಟ್‌ ಬೇಲೂರು ಪಂಚಾಯಿತಿಗೆ ಸೇರಿವೆ.

ಅನ್ನಪೂರ್ಣೇಶ್ವರಿ ನಗರ ಬೇವಿನಹಳ್ಳಿ ಪಂಚಾಯಿತಿಗೆ, ಸಿದ್ಧಾರ್ಥ ಲೇಔಟ್‌ ಕಾರಸವಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತವೆ. ಜ್ಯೋತಿ ಇಂಟರ್‌ನ್ಯಾಷನಲ್‌, ಸ್ಪೋರ್ಟ್ಸ್‌ ಕ್ಲಬ್‌ ಹಿಂಭಾಗದ ಮನೆಗಳು ಇಂಡುವಾಳು ಪಂಚಾಯಿತಿಗೆ ಸೇರುತ್ತವೆ.

ಈ ಬಡಾವಣೆಗಳ ಜನರು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ಕುಡಿಯುವ ನೀರು ಪಡೆಯುತ್ತಾರೆ. ನಗರದ ಹೆಸರಿನಲ್ಲೇ ನೀರಿನ ತೆರಿಗೆ ಪಾವತಿ ಮಾಡುತ್ತಾರೆ. ಬಹುತೇಕ ಬಡಾವಣೆಗಳಲ್ಲಿ ಸ್ವಚ್ಛತೆ ಮಾಯವಾಗಿದ್ದು ಕಸದ ಸಮಸ್ಯೆಗೆ ಗ್ರಾ.ಪಂ ಕಚೇರಿಗಳ ಬಾಗಿಲು ಬಡಿಯಬೇಕಾಗಿದೆ. ಹಲವು ಕಡೆ ಮೂಲಸೌಲಭ್ಯ ಮರೀಚಿಕೆಯಾಗಿದೆ.

‘ಹೊಸ ಬಡಾವಣೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದರೂ ಇಲ್ಲಿಯ ನಿವಾಸಿಗಳಿಗೆ ಗ್ರಾ.ಪಂ ಚುನಾವಣೆಯಲ್ಲಿ ಮತ ಚಲಾವಣೆ ಮಾಡಲು ಆಸಕ್ತಿ ತೋರುತ್ತಿಲ್ಲ. ಬಹುತೇಕ ಮಂದಿಯ ಹೆಸರುಗಳು ಮತದಾರರ ಪಟ್ಟಿಯಲ್ಲೂ ಇಲ್ಲ. ಹೊಸ ಬಡಾವಣೆಗಳನ್ನು ನಗರಸಭಾ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕು’ ಕೆಂಪೇಗೌಡ ಬಡಾವಣೆಯ ನಿವಾಸಿ ಆರ್‌.ಶಶಿಧರ್‌ ಆಗ್ರಹಿಸಿದರು.

ಮಂಡ್ಯ ಗ್ರಾಮಾಂತರ ಗ್ರಾ.ಪಂ: ನಗರದಲ್ಲೇ ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿಯೂ ಇದೆ. ಪೇಟೆಬೀದಿಯ ಹಳೇ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಈ ಗ್ರಾಮಾಂತರ ಗ್ರಾಪಂ ಕಚೇರಿ ಇದೆ. ಇದರ ವ್ಯಾಪ್ತಿಯಲ್ಲಿ ಚಿಕ್ಕಮಂಡ್ಯ, ಕೋಣನಹಳ್ಳಿ, ಚಿಂದಗಿರಿದೊಡ್ಡಿ, ಮಹಾತ್ಮಾಗಾಂಧಿ ಬಡಾವಣೆ, ತಂಡಸನಹಳ್ಳಿಗಳು ಸೇರಿವೆ.

ಈ ಹಳ್ಳಿಗಳ ಸಮೀಪ ದಶಪಥ ಬರುತ್ತಿದ್ದು ಮಂಡ್ಯ ಜೊತೆ ಸೇರಿಕೊಳ್ಳಲು ಸಜ್ಜಾಗಿವೆ. ಆದರೆ ಮಂಡ್ಯ ನಗರ ಮಾತ್ರ ದೊಡ್ಡ ಹಳ್ಳಿಯಾಗಿಯೇ ಮುಂದುವರಿಯುತ್ತಿದೆ.

ನನಸಾಗದ ಮಹಾನಗರ ಪಾಲಿಕೆ ಕನಸು

ಮಂಡ್ಯದ ಸುತ್ತ 6 ಕಿ.ಮೀ ವ್ಯಾಪ್ತಿಯ 25 ಹಳ್ಳಿಗಳನ್ನು ಸೇರಿಸಿ ಮಂಡ್ಯ ಮಹಾನಗರ ವ್ಯಾಪ್ತಿ ರಚನೆ ಮಾಡಬೇಕು ಎಂದು ಪ್ರಸ್ತಾವ ಹಲವು ವರ್ಷಗಳ ಹಿಂದೆಯೇ ಸರ್ಕಾರಕ್ಕೆ ತಲುಪಿದೆ. ಆದರೆ ಇಲ್ಲಿಯವರೆಗೂ ಪಾಲಿಕೆಯ ಕನಸು ಈಡೇರಿಲ್ಲ.

‘ಮೊದಲ ಬಾರಿ ಪ್ರಸ್ತಾವ ಕಳುಹಿಸಿದಾಗ ಮಿತಿಯಷ್ಟು ಜನಸಂಖ್ಯೆ ಇಲ್ಲ ಎಂಬ ಉತ್ತರ ಬಂದಿತ್ತು. ಇನ್ನೂ 3 ಕಿ.ಮೀ ವ್ಯಾಪ್ತಿ ವಿಸ್ತರಿಸಿ ಹೊಸ ಪ್ರಸ್ತಾವವನ್ನು ಕಳುಹಿಸಲಾಗಿದೆ. ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ರೂಪಿಸುವುದು ನನ್ನ ಪ್ರಮುಖ ಆದ್ಯತೆಯಾಗಿದೆ’ ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT