ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಅಭಿವೃದ್ಧಿಯ ಸವಾಲು ಯುವ ತಂತ್ರಜ್ಞರ ಮೇಲಿದೆ

ಪದವಿ ಪ್ರದಾನ ಸಮಾರಂಭದಲ್ಲಿ ಐಪಿಎಸ್‌ ಅಧಿಕಾರಿ ಬಿ.ಆರ್‌.ರವಿಕಾಂತೇಗೌಡ ಅಭಿಮತ
Last Updated 21 ನವೆಂಬರ್ 2020, 12:02 IST
ಅಕ್ಷರ ಗಾತ್ರ

ಮಂಡ್ಯ: ‘ಇತ್ತೀಚಿನ ದಿನಗಳಲ್ಲಿ ಪ್ರಪಂಚ ಕಠಿಣವಾದ ಹಾದಿಯಲ್ಲಿ ನಡೆಯತ್ತಿದ್ದು ಜಾಗತಿಕ ತಾಪಮಾನ ನಿಯಂತ್ರಣ, ಸುಸ್ಥಿರ ಅಭಿವೃದ್ಧಿಯ ಸವಾಲು ಯುವ ತಂತ್ರಜ್ಞರ ಮೇಲಿದೆ’ ಎಂದು ಐಪಿಎಸ್‌ ಅಧಿಕಾರಿ ಡಾ.ಬಿ.ಆರ್‌.ರವಿಕಾಂತೇಗೌಡ ಹೇಳಿದರು.

ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಕೆ.ವಿ.ಶಂಕರಗೌಡ ಪ್ಲೇಸ್‌ಮೆಂಟ್‌ ಸಭಾಂಗಣದಲ್ಲಿ ಶನಿವಾರ ನಡೆದ 11ನೇ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ, ಪದಕ ಪ್ರದಾನ ಮಾಡಿ ಮಾತನಾಡಿದರು.

‘ಪರಿಸರ ಮಾಲಿನ್ಯ ಹೆಚ್ಚಳವಾಗುತ್ತಿದ್ದು ಭವಿಷ್ಯದಲ್ಲಿ ಭೂಮಿ ಉಳಿಸಿಕೊಳ್ಳುವ ಸವಾಲು ಎಲ್ಲರ ಮೇಲಿದೆ. ಸುಸ್ಥಿರ ಬೆಳವಣಿಗೆಗೆ ನಮ್ಮ ತಂತ್ರಜ್ಞಾನವನ್ನು ಉಪಯೋಗಿಸುವ ಸವಾಲನ್ನು ಯುವ ತಂತ್ರಜ್ಞರು ಸ್ವೀಕರಿಸಬೇಕು. ಸ್ಪರ್ಧಾ ಯುಗದಲ್ಲಿ ಹತ್ತರಲ್ಲಿ ಹನ್ನೊಂದನೇಯವರಾದರೆ ಸಾಲದು, ಮಹತ್ವವಾದುದನ್ನು ಸಾಧಿಸುವ ಛಲ ಬೆಳೆಸಿಕೊಳ್ಳಬೇಕು’ ಎಂದರು.

‘ವಿಜ್ಞಾನ ತಂತ್ರಜ್ಞಾನ ಓದಿದ್ದರೂ ನಾವು ಜ್ಯೋತಿಷಿಗಳ ನಿಯಂತ್ರಣಕ್ಕೆ ಸಿಲುಕಿದ್ದೇವೆ. ನಮ್ಮ ಬದುಕನ್ನು ನಿರ್ದೇಶಿಸುವವರು ಜ್ಯೋತಿಷಿಗಳಾಗಿದ್ದಾರೆ. ಬಿ.ಇ ಆರ್ಕಿಟೆಕ್ಟ್‌ ಓದಿ ಮೌಢ್ಯಕ್ಕೆ ಬಲಿಯಾಗುತ್ತಾರೆ. ತಂತ್ರಜ್ಞಾನದ ಸತ್ವ, ಸಿದ್ಧಾಂತವನ್ನು ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು. ಯುವ ತಂತ್ರಜ್ಞರು ಮೌಢ್ಯಗಳನ್ನು ಪಲ್ಲಟಗೊಳಿಸಿದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ’ ಎಂದರು.

‘ಇಲ್ಲಿಯವರೆಗೂ ನಮ್ಮ ಎಂಜಿನಿಯರಿಂಗ್‌ ಕಾಲೇಜುಗಳು ಒಬ್ಬ ಅರ್ಹ ನೊಬೆಲ್‌ ಪ್ರಶಸ್ತಿ ಪಡೆಯುವ ಸಂಶೋಧಕನನ್ನು ಕೊಡುವುದಕ್ಕೆ ಸಾಧ್ಯವಾಗಿಲ್ಲ ಎಂಬುದು ದುರಂತ. ಇದಕ್ಕೆ ನಮ್ಮ ಸಂಶೋಧನಾ ವಿಧಾನಗಳು ಕಾರಣವಾಗಿದೆ. ಮನುಷ್ಯ ಪರವಾಗಿ ಕೆಲಸ ಮಾಡುವ ತಂತ್ರಜ್ಞಾನದ ಸಂಶೋಧನೆ ನಡೆಸಬೇಕು. ಜಗತ್ತು ಅನುಭವಿಸುತ್ತಿರುವ ಇಂದಿನ ಸಂಕಷ್ಟಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪರಿಹಾರ ಇದೆ’ ಎಂದರು.

‘ಜಾಗತೀಕರಣದ ಮಾರುಕಟ್ಟೆ ಸಂಸ್ಕೃತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮಾಧಿ ಮಾಡಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವೈಯಕ್ತಿಕ ಲಾಭಕ್ಕೆ ಉಪಯೋಗಿಸುವ ಮೂಲಕ ದುರುಪಯೋಗ ಮಾಡುತ್ತಿರುವುದು ಇವತ್ತಿನ ದುರಂತಕ್ಕೆ ಕಾರಣವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ಲಿಪ್ತವಾದದ್ದು, ಅದಕ್ಕೆ ಮನುಷ್ಯ ಸಂಬಂಧಗಳ ಸಂಪರ್ಕ ಇರಬಾರದು’ ಎಂದರು.

‘ಅಣುಬಾಂಬ್‌ ಕಂಡು ಹಿಡಿದ ವಿಜ್ಞಾನಿಗೆ ಕೂಡ ತನ್ನ ಸಂಶೋಧನೆಯಿಂದ ಹಿರೋಶಿಮಾ ಮತ್ತು ನಾಗಸಕಿಯಲ್ಲಿ ಹೆಚ್ಚು ಜನರು ಸತ್ತರೆಂಬ ಬೇಸರವಿದೆ. ವಿಜ್ಞಾನ ಭಾವ ನಿರ್ಲಿಪ್ತವಾದದ್ದಲ್ಲ. ಏನೇ ಸಂಶೋಧನೆ ನಡೆಸಿದರೂ, ಎಷ್ಟೇ ಪ್ರಖ್ಯಾತರಾದರೂ ಅವರ ಮೇಲೆ ಸಾಮಾಜಿಕ ಋಣ ಇರುತ್ತದೆ. ಸಂಶೋಧನೆ ಪ್ರತಿಫಲವನ್ನು ಮತ್ತೆ ಸಮಾಜಕ್ಕೆ ನೀಡುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಪಿಇಟಿ ಅಧ್ಯಕ್ಷ ಕೆ.ಎಸ್‌.ವಿಜಯಾನಂದ ಮಾತನಾಡಿ ‘ಇಂದಿನ ದಿನಗಳಲ್ಲಿ ಬೆರಳ ತುದಿಯಲ್ಲೇ ಎಲ್ಲಾ ಸಿಗುತ್ತದೆ. ಶ್ರಮ ಪಟ್ಟು ಪದವಿ ಪಡೆದು ಎಷ್ಟೇ ಎತ್ತರಕ್ಕೆ ಏರಿದರೂ ವಿದ್ಯಾರ್ಥಿಗಳು ತಾವು ನಡೆದು ಬಂದ ದಾರಿ, ಪೋಷಕರು, ಗುರು ಹಿರಿಯರನ್ನು ಎಂದಿಗೂ ಮರೆಯಬಾರದು. ತಂತ್ರಜ್ಞಾನದ ಬೇರಿನೊಂದಿಗೆ ಸಾಮಾನ್ಯ ಶಿಸ್ತು, ಮಾನ ಸಂಬಂಧಗಳನ್ನು ಸದಾ ಕಾಯ್ದುಕೊಳ್ಳಬೇಕು’ ಎಂದರು.

ನ್ಯೂಯಾರ್ಕ್‌ನ ಬಿಂಗಮ್‌ಟ್ಯಾನ್‌ ವಿಶ್ವವಿದ್ಯಾಲಯದ ಡೀನ್‌ ಪ್ರೊ. ಪಿ. ಜೆ ಪಾರ್ಟೆಲ್‌ ಅವರು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಶುಭ ಕೋರಿದರು. ಪ್ರಾಂಶುಪಾಲ ಡಾ.ಎಚ್‌.ವಿ.ರವೀಂದ್ರ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎನ್‌.ಎನ್‌.ಮುರಳಿಕೃಷ್ಣ, ಡೀನ್‌ ನಾಗರತ್ನಾ, ಪಿಇಟಿ ಪ್ರಧಾನ ಕಾರ್ಯದರ್ಶಿ ಎಸ್‌.ಎಲ್‌.ಶಿವಪ್ರಸಾದ್‌ ಇದ್ದರು.

*********

15 ವಿದ್ಯಾರ್ಥಿಗಳ ಚಿನ್ನದ ಸಾಧನೆ

ಎಂಜಿನಿಯರಿಂಗ್‌ ಪದವಿ ವಿಭಾಗದಲ್ಲಿ ರ‍್ಯಾಂಕ್‌ ಹಾಗೂ ಅತೀ ಹೆಚ್ಚು ಅಂಕ ಪಡೆದ ಕೆ.ಆರ್‌. ವಾಸುದೇವರಾವ್‌, ಎನ್‌.ಹೇಮಲತಾ, ಎಂ.ಆರ್‌.ಮೇಘಾ, ಆರ್‌.ಭವ್ಯಾ, ಟಿ.ಆರ್‌.ಸ್ವರೂಪ್‌, ಚಿರಾಗ್‌ ನಾರಾಯಣ್‌, ಎಲ್‌.ಅಭಿಷೇಕ್‌, ಯು.ಅನುಶ್ರೀ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ಎಂ.ಎನ್‌.ಅನಿಲ್‌ಕುಮಾರ್‌, ಎಚ್‌.ಎಂ.ಶ್ರುತಿ, ಎಂ.ಎಸ್‌.ರಾಜೇಶ್ವರಿ, ಎಂ.ಸಿ.ಅಶ್ವಿನಿ, ಬಿ.ಎಸ್‌.ಪವಿತ್ರಾ, ಜಿ.ಎಸ್‌.ನಿಸರ್ಗಾ, ಪ್ರಿಯಾಂಕಾ ರೆಬೆಲ್ಲೋ ಅವರಿಗೆ ಚಿನ್ನದ ಪ್ರದಕ ಪ್ರದಾನ ಮಾಡಲಾಯಿತು. 77 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT