ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ: ಹಳ್ಳಿಗಳಲ್ಲಿ ಹರಿಯುತ್ತಿದೆ ಹಣದ ಹೊಳೆ!

ಬಹುತೇಕ ಆಕಾಂಕ್ಷಿಗಳಿಗೆ ಚುನಾವಣೆಯೇ ಬೇಕಿಲ್ಲ, ಸದಸ್ಯ ಸ್ಥಾನಗಳ ಖರೀದಿಯತ್ತ ಚಿತ್ತ
Last Updated 10 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಮಂಡ್ಯ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಹಳ್ಳಿಗಳ ಅರಳಿಕಟ್ಟೆ, ರಂಗದ ಬೀದಿ, ಗಲ್ಲಿಗಲ್ಲಿಗಳಲ್ಲಿ ಹಣದ ಮಾತೇ ಜೋರಾಗಿದೆ. ಬಹುತೇಕ ಆಕಾಂಕ್ಷಿಗಳಿಗೆ ಚುನಾವಣೆ ಎದುರಿಸುವುದು ಬೇಡವಾಗಿದ್ದು ಅವಿರೋಧ ಆಯ್ಕೆ ಹೆಸರಿನಲ್ಲಿ ಸದಸ್ಯ ಸ್ಥಾನಗಳ ಖರೀದಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ಬಹುತೇಕ ಗ್ರಾಮೀಣ ಯುವಕರು ಹಳ್ಳಿಗಳಲ್ಲೇ ಉಳಿದಿದ್ದಾರೆ. ಕೃಷಿ ಮಾತ್ರವಲ್ಲದೇ ಸಣ್ಣಪುಟ್ಟ ವ್ಯಾಪಾರ, ವಹಿವಾಟು ನಡೆಸುತ್ತಾ ಹಳ್ಳಿಗಳಲ್ಲೇ ಜೀವನ ಕಂಡುಕೊಂಡಿದ್ದಾರೆ. ಇದಕ್ಕೂ ಮೊದಲು ಇವರೆಲ್ಲರೂ ಚುನಾವಣೆ ದಿನ ಮತದಾನಕ್ಕಷ್ಟೇ ಬಂದು ಹೋಗುತ್ತಿದ್ದರು. ಆದರೆ ಈಗ ಹಲವರು ಹಳ್ಳಿಗಳಲ್ಲೇ ಇರುವ ಕಾರಣ ಚುನಾವಣಾ ಕಣ ಪಟ್ಟಣ, ನಗರಗಳ ರೀತಿಯಲ್ಲಿ ರಂಗು ಪಡೆದುಕೊಂಡಿದೆ.

ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗಿರುವ ಹೆಚ್ಚಿನ ಮಂದಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಮಹಿಳೆಗೆ ಮೀಸಲಾಗಿರುವ ಸ್ಥಾನಗಳಲ್ಲಿ ವಲಸಿಗರು ತಮ್ಮ ಪತ್ನಿಯರನ್ನು ಕಣಕ್ಕಿಳಿಸುತ್ತಿದ್ದಾರೆ. ಇವರು ಹಣವನ್ನು ನೀರಿನಂತೆ ಖರ್ಚು ಮಾಡಲು ಸಿದ್ಧರಿದ್ದು ಸ್ಥಾನಗಳನ್ನು ಹರಾಜಿನ ಮೂಲಕ ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಹಳ್ಳಿಗಳಿಗೆ ಬೇಕಿರುವ ದೇವಾಲಯ, ಸಮುದಾಯ ಭವನ ಸೇರಿ ಮೂಲ ಸೌಕರ್ಯ ಒದಗಿಸಲು ಲಕ್ಷಾಂತರ ರೂಪಾಯಿ ನೀಡಲು ಮುಂದೆ ಬಂದಿದ್ದಾರೆ.

ಹಳ್ಳಿಗಳಿಗೆ ಮೂಲಸೌಲಭ್ಯ ಮಾತ್ರವಲ್ಲದೇ ನಾಮಪತ್ರ ಸಲ್ಲಿಸಲು ಮುಂದಾಗಿದ್ದ ಸ್ಥಳೀಯರನ್ನೂ ಕಣದಿಂದ ಹಿಂದೆ ಸರಿಯುವಂತೆ ಮಾಡುತ್ತಿದ್ದಾರೆ. ಅವರಿಗೂ ಹಣದ ರುಚಿ ತೋರಿಸುತ್ತಿದ್ದು ನಾಮಪತ್ರ ಸಲ್ಲಿಸದಂತೆ ನೋಡಿಕೊಳ್ಳುತ್ತಿದ್ದಾರೆ. ಈಗಾಗಲೇ ಸಲ್ಲಿಸುವವರು ನಾಮಪತ್ರ ಹಿಂದಕ್ಕೆ ಪಡೆಯುವಂತೆ ಪ್ರಭಾವ ಬೀರುತ್ತಿದ್ದಾರೆ. ಹೆಚ್ಚಿನ ಜನರು ಚುನಾವಣೆಗೆ ನಿರಾಸಕ್ತಿ ತೋರುತ್ತಿದ್ದು ಸದಸ್ಯ ಸ್ಥಾನಗಳನ್ನು ಹಣಕೊಟ್ಟು ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಹಳ್ಳಿಹಳ್ಳಿಗಳಲ್ಲಿ ಸ್ಥಾನಗಳ ಬಹಿರಂಗ ಹರಾಜು ಪ್ರಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ಕೋವಿಡ್‌ ಸನ್ನಿವೇಶದಲ್ಲಿ ಮನೆಮನೆಗೆ ತೆರಳಿ ಮತಯಾಚನೆ ಮಾಡುವುದು ಕಷ್ಟ. ಸಮಯವೂ ಕಡಿಮೆ ಇರುವ ಕಾರಣ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಎಷ್ಟೇ ಖರ್ಚು ಮಾಡಿದರೂ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇಲ್ಲ. ಚುನಾವಣೆಗೆ ಖರ್ಚು ಮಾಡುವ ಹಣವನ್ನು ಅವಿರೋಧ ಆಯ್ಕೆಗೆ ಹಾಕಿದರೆ ಗೆದ್ದಂತಾಗುತ್ತದೆ. ಊರಿಗೆ ಉಪಕಾರವನ್ನೂ ಮಾಡಿದಂತಾಗುತ್ತದೆ’ ಎಂದು ತಾಲ್ಲೂಕಿನ ಸದಸ್ಯ ಆಕಾಂಕ್ಷಿಯೊಬ್ಬರು ತಿಳಿಸಿದರು.

ಎಫ್‌ಐಆರ್‌ ಹಾಕ್ತಾರೆ: ಸದಸ್ಯ ಸ್ಥಾನಗಳ ಹರಾಜು ಪ್ರಕ್ರಿಯೆ ಹೆಚ್ಚಳಗೊಳ್ಳುತ್ತಿದ್ದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಹರಾಜು ಹಾಕುವವರ ವಿರುದ್ಧ ಎಫ್‌ಐಆರ್‌ ಹಾಕುವಂತೆ ಸ್ಥಳೀಯ ಪೊಲೀಸ್‌ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಚುನಾವಣಾಧಿಕಾರಿಗಳು, ಪೊಲೀಸರು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು ಎಲ್ಲಾ ಬೆಳವಣಿಗೆಗಳ ಮೇಲೆ ನಿಗಾ ವಹಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.

ಇಷ್ಟಾದರೂ ಜನರು ಅವಿರೋಧ ಆಯ್ಕೆ, ಹರಾಜು ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿಲ್ಲ. ಕಬ್ಬಿನಗದ್ದೆ, ತೆಂಗಿನ ತೋಟ, ತೋಟದ ಮನೆ, ಫಾರಂ ಹೌಸ್‌ ಮುಂತಾದ ಕಡೆಗಳಲ್ಲಿ ರಹಸ್ಯ ಸಭೆ ನಡೆಸುತ್ತಿದ್ದಾರೆ. ‘ಸಭೆಗೆ ಮೊಬೈಲ್‌ ಫೋನ್‌ ತರದಂತೆ ಯುವಕರಿಗೆ ತಿಳಿಸಲಾಗುತ್ತಿದೆ. ಯಾರಿಗೂ ತಿಳಿಯದಂತೆ ಸಭೆ ನಡೆಸಿ ಸ್ಥಾನಗಳನ್ನು ಹರಾಜು ಹಾಕಲಾಗುತ್ತಿದೆ’ ಎಂದು ಕೆರಗೋಡು ಸಮೀಪದ ಹಳ್ಳಿಯೊಂದರ ಯುವಕ ತಿಳಿಸಿದರು.

‘ನ್ಯಾಯಸಮ್ಮತ ಚುನಾವಣೆಗೆ ಗ್ರಾಮಗಳ ಪ್ರತಿಯೊಬ್ಬರೂ ಸಹಕರಿಸಬೇಕು. ಸ್ಥಾನಗಳನ್ನು ಹರಾಜು ಹಾಕಿದ ಹಲವರ ವಿರುದ್ಧ ಈಗಾಗಲೇ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಮುಂದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಎಚ್ಚರಿಕೆ ನೀಡಿದರು.

***

ಬಾಡೂಟಕ್ಕೆ ಬೇಡಿಕೆ, ಮದ್ಯಾಭಿಷೇಕ

ಕಾರ್ತೀಕ ಮಾಸವಾಗಿರುವ ಕಾರಣ ಸದ್ಯ ಬೀಗರೂಟಕ್ಕೆ ಬ್ರೇಕ್‌ ಬಿದ್ದಿದೆ. ಆದರೆ ಗ್ರಾ.ಪಂ ಚುನಾವಣಾ ಬಾಡೂಟ ಪಾರ್ಟಿಗಳಿಗೆ ಕೊರತೆ ಇಲ್ಲ. ಗ್ರಾಮಗಳ ಹೊರವಲಯದಲ್ಲಿ ನಿತ್ಯವೂ ಬಾಡೂಟ ಪಾರ್ಟಿಗಳು ಸಾಮಾನ್ಯವಾಗುತ್ತಿವೆ. ಚುನಾವಣೆ ಮುಗಿಯುವವರೆಗೂ ಹಳ್ಳಿಗರಿಗೆ ಬಾಡೂಟದ ಹಬ್ಬವೇ ನಡೆಯುತ್ತಿದೆ.

ಚುನಾವಣೆ ಹಿನ್ನೆಲೆಯಲ್ಲಿ ಮದ್ಯಕ್ಕೆ ಬೇಡಿಕೆ ಹೆಚ್ಚಾಗಿದೆ. ಕೋವಿಡ್‌ ಅಂಗವಾಗಿ ನಗರದ ಬಾರ್‌, ವೈನ್‌ಶಾಪ್‌ಗಳಲ್ಲಿ ವ್ಯಾಪಾರ ಕುಂಠಿತವಾಗಿತ್ತು. ಗ್ರಾ.ಪಂ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಾರ್‌, ವೈನ್‌ಶಾಪ್‌ಗಳ ವಹಿವಾಟು ಹೆಚ್ಚಳಗೊಂಡಿದೆ. ಹಳ್ಳಿಗಳಿಗೆ ಅಪಾರ ಪ್ರಮಾಣದ ಮದ್ಯ ಹರಿದು ಹೋಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT