ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲಿ ಜಲ್ಲಿ ರಾಶಿ; ಜನರ ಪರದಾಟ

Last Updated 8 ನವೆಂಬರ್ 2021, 5:45 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಚೊಟ್ಟನಹಳ್ಳಿ ಹಾಗೂ ಹುಣಸನಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ಮೂರು ತಿಂಗಳ ಹಿಂದೆಯೇ ಜಲ್ಲಿ ತಂದು ಸುರಿದು ಹಾಗೇ ಬಿಟ್ಟಿದ್ದು ಜನರು ತೊಂದರೆ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನ ಅರಕೆರೆ ಹೋಬಳಿಯ ಹುಣಸನಹಳ್ಳಿ ಮತ್ತು ಚೊಟ್ಟನಹಳ್ಳಿ ಗ್ರಾಮಗಳ ಮಧ್ಯ ಭಾಗದಲ್ಲಿ ಜಲ್ಲಿಯನ್ನು ತಂದು ಗುಡ್ಡೆ ಹಾಕಲಾಗಿದೆ. ಜನರು ಓಡಾಡುವ ರಸ್ತೆಯಲ್ಲಿ ಮೂರು
ತಿಂಗಳ ಹಿಂದೆ ಜಲ್ಲಿ ಸುರಿಯಲಾಗಿದೆ. ರಸ್ತೆಯಲ್ಲಿ ಜಲ್ಲಿ ಗುಡ್ಡೆಗಳು ಬಿದ್ದಿರುವುದರಿಂದ ಎತ್ತಿನ ಗಾಡಿ, ಟ್ರಾಕ್ಟರ್‌, ಕಾರುಗಳು ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ.

ಆ.11ರಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಎರಡೂ ಗ್ರಾಮಗಳಲ್ಲಿ ಹತ್ತಾರು ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಮೆಂಟ್‌ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಮಾಡಿದ್ದರು. ಆದಷ್ಟು ಶೀಘ್ರ ಕಾಮಗಾರಿ ಮುಗಿಸುವ ಭರವಸೆಯನ್ನೂ ನೀಡಿದ್ದರು. ಇದಾಗಿ ಮೂರು ತಿಂಗಳು ಕಳೆದರೂ ಇದುವರೆಗೆ ಕಾಮಗಾರಿ ಆರಂಭವಾಗಿಲ್ಲ. ರಸ್ತೆಗಳಲ್ಲಿ ಜಲ್ಲಿ ಗುಡ್ಡೆ ಹಾಕಿರುವುದರಿಂದ ಉಂಟಾಗುತ್ತಿರುವ ತೊಂದರೆ ಕುರಿತು ಎರಡೂ ಗ್ರಾಮಗಳ ಜನರು ಅಧಿಕಾರಿಗಳು ಮತ್ತು ಶಾಸಕರ ಗಮನ ಸೆಳೆದಿದ್ದಾರೆ. ಆದರೆ ಯಾರೊಬ್ಬರೂ ಇತ್ತ ಗಮನ ಹರಿಸುತ್ತಿಲ್ಲ ಎಂದು ಚೊಟ್ಟನಹಳ್ಳಿ ಅಭಿಷೇಕ್‌ ದೂರಿದ್ದಾರೆ.

ಹುಣಸನಹಳ್ಳಿ ಮತ್ತು ಚೊಟ್ಟನಹಳ್ಳಿ ಗ್ರಾಮಗಳಲ್ಲಿ ಊರೊಳಗಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ವಿನಯ್‌ ಎಂಬವರು ಟೆಂಡರ್‌ ಪಡೆದಿದ್ದಾರೆ. ಕಾಮಗಾರಿಗೆ ಚಾಲನೆ ನೀಡುವ ದಿನ ಬಂದು ಹೋದ ಗುತ್ತಿಗೆದಾರ ಮತ್ತೆ ಬಂದಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT