ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿಯ ಉತ್ತಮ ಗುಣ ದುರುಪಯೋಗ: ರೇವಣ್ಣ

Last Updated 20 ನವೆಂಬರ್ 2019, 17:33 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ‘ಜೆಡಿಎಸ್ ಪಕ್ಷದಿಂದ ಎರಡು ಬಾರಿ ಗೆದ್ದು ಪಕ್ಷಕ್ಕೆ ದ್ರೋಹ ಮಾಡಿದ ಅನರ್ಹ ಶಾಸಕ ನಾರಾಯಣಗೌಡನ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ. ಆತ ಎಚ್‌.ಡಿ.ಕುಮಾರಸ್ವಾಮಿ ಅವರ ಒಳ್ಳೆಯ ಗುಣವನ್ನು ದುರುಪಯೋಗ ಮಾಡಿಕೊಂಡಿದ್ದಾನೆ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಬಿ.ಹರೀಶ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.

‘ಕೆ.ಆರ್.ಪೇಟೆಗೆ ಇಂತಹ ಕೆಲಸ ಆಗಬೇಕು ಎಂದು ಸರ್ಕಾರ ಇದ್ದ 14 ತಿಂಗಳಲ್ಲಿ ಒಂದು ದಿನವೂ ಕೇಳಲಿಲ್ಲ. ಅವನೇನು ಮಾಡಿದ್ದಾನೆ ಅಂತಾ ಮುಂದೆ ಹೇಳುತ್ತೇನೆ’ ಎಂದು ಹೇಳಿದರು.

‘ಕಳೆದ ಬಾರಿ ದೇವರಾಜುಗೆ ಟಿಕೆಟ್ ಕೊಡಬೇಕು ಎಂದು ನಿರ್ಧಾರವಾಗಿತ್ತು. ಕುಮಾರಸ್ವಾಮಿ ನಂಬುವ ಗುಣವನ್ನು ದುರುಪಯೋಗ ಮಾಡಿಕೊಂಡ ನಾರಾಯಣಗೌಡ ಟಿಕೆಟ್ ಪಡೆದು ಶಾಸಕನಾದ. ಜೆಡಿಎಸ್‌ನಲ್ಲಿ ಚೆನ್ನಾಗಿ ಮೇಯ್ದುಕೊಂಡು, ಬೇರೆಡೆಗೆ ಮೇಯಲು ಈಗ ಹೋಗುತಿದ್ದಾನೆ. ಅವನಿಗೆ ಭಗವಂತ ಒಳ್ಳೆಯದು ಮಾಡಲಿ. ದೇವರಾಜು ಅವರಿಗೆ ಅವರ ಜಿ.ಪಂ ಕ್ಷೇತ್ರಕ್ಕೆ ₹6 ಕೋಟಿ ಅನುದಾನವನ್ನು ಲೋಕೋಪಯೋಗಿ ಇಲಾಖೆಯಿಂದ ಕೊಟ್ಟಿದ್ದಕ್ಕೆ ನಾರಾಯಣಗೌಡ ಗಲಾಟೆ ಮಾಡಿದ್ದ. ನಾನು ಮಾತನಾಡಲ್ಲ, ಅವರು ತಾಯಿ ಸಮಾನವಾದ ಪಕ್ಷಕ್ಕೆ ದ್ರೋಹ ಮಾಡಿರುವ ಅವನಿಗೆ ದೇವರೆ ಶಿಕ್ಷೆ ಕೊಡುತ್ತಾನೆ’ ಎಂದರು.

‘ಕುಮಾರಣ್ಣ ಇಲ್ಲದಿದ್ದರೆ ಅಘಲಯ ಏತ ನೀರಾವರಿ ಆಗುತ್ತಿರಲಿಲ್ಲ. ಸರ್ಕಾರಿ ಕಡತ ತೆಗೆದು ನೋಡಿದರೆ ಗೊತ್ತಾಗುತ್ತದೆ. ಅಘಲಯ ಕೆರೆಗೆ ನೀರು ತುಂಬಿಸಲು ಹಣ ಕೊಟ್ಟಿದ್ದಾರೆ ಅಂದು. ಬಿಜೆಪಿಯವರಿಗೆ ಕ್ಷೇತ್ರದಲ್ಲಿ ಮತ ಕೇಳಲು ನೈತಿಕತೆ ಇಲ್ಲ. ಕುಮಾರಣ್ಣ ಇಲ್ಲಿನ ಎಂಜಿನಿಯರಿಂಗ್‌ ಕಾಲೇಜಿಗೆ ₹60 ಕೋಟಿ ನೀಡಿದ್ದರು. ಯಡಿಯೂರಪ್ಪ ₹ 15 ಕೋಟಿಗೆ ಇಳಿಸಿದ್ದರು. ಕೆ.ಆರ್.ಪೇಟೆಗೆ ಯಡಿಯೂರಪ್ಪ ಅವರ ಕೊಡುಗೆ ಏನೂ ಇಲ್ಲ’ ಎಂದು ದೂರಿದರು.

‘ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಡೆದ ಗಲಾಟೆಯಿಂದ 20 ಮಂದಿ ವಿರುದ್ಧ ಕೇಸ್‌ ಮಾಡಿಸಿದ್ದಾರೆ. ಸಚಿವ ಮಾಧುಸ್ವಾಮಿ, ನನ್ನ ಮೇಲೆ ಹಲ್ಲೆ ಆಗಿಲ್ಲ. ಪೊಲೀಸರ ವೈಫಲ್ಯದಿಂದ ಈಗಾಗಿದೆ ಎಂದು ಹೇಳಿದ್ದಾರೆ. ಆದರೂ 20 ಮಂದಿ ವಿರುದ್ಧ ಪ್ರಕರಣ ಏಕೆ’ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಂ ಮತ್ತು ಪಕ್ಷದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT