ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ಕೊಟ್ಟಿರಿ, ಚುನಾವಣೆಯಲ್ಲಿ ಕೈಬಿಟ್ಟಿರಿ: ಎಚ್‌ಡಿಕೆ ಬೇಸರ

Last Updated 21 ನವೆಂಬರ್ 2020, 15:17 IST
ಅಕ್ಷರ ಗಾತ್ರ

ಮದ್ದೂರು: ‘ಮಂಡ್ಯ ಜಿಲ್ಲೆಗೆ ಬಂದಾಗ ನೀವು ಪ್ರೀತಿ, ವಿಶ್ವಾಸ ತೋರಿಸುತ್ತೀರಿ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಕೈಬಿಟ್ಟಿರಿ’ ಎಂದು ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಮಾರುತಿ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಆಂಜನೇಯಸ್ವಾಮಿ ದೇವಾಲಯ ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು.

‘ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದೆ. ಅದನ್ನೇ ಬಿಜೆಪಿ ಮುಖಂಡರು ಮಂಡ್ಯ ಬಜೆಟ್ ಎಂದು ಜರಿದರು. ಆದರೂ ನಾನೂ ಜಿಲ್ಲೆಗೆ ₹ 9 ಸಾವಿರ ಕೋಟಿ ನೀಡಿದೆ. ಚುನಾವಣೆಗಳಿಂದ ಬೇಸತ್ತು ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ್ದೆ. ಆದರೆ ನಿಮ್ಮ ಪ್ರೀತಿ, ವಿಶ್ವಾಸ ಕಂಡು ಆ ನಿರ್ಧಾರದಿಂದ ಹಿಂದೆ ಸರಿದು ರಾಜಕಾರಣದಲ್ಲಿ ಮುಂದುವರಿಯುತ್ತೇನೆ. ದೇವೇಗೌಡರ ಕುಟುಂಬ ಸದಾ ಮಂಡ್ಯ ಜಿಲ್ಲೆಯ ಪರ ನಿಲ್ಲುತ್ತದೆ’ ಎಂದರು.

‘ರಾಜ್ಯದ ರೈತರ ಹಿತದೃಷ್ಟಿಯಿಂದ ₹ 25 ಸಾವಿರ ಕೋಟಿ ಸಾಲಮನ್ನಾ ಘೋಷಣೆ ಮಾಡಿದೆ. ಯಾವ ಮುಖ್ಯಮಂತ್ರಿಯೂ ಮಾಡದ ಕೆಲಸವನ್ನು ನಾನು ಮಾಡಿದ್ದೆ. ಜಿಲ್ಲೆಯ ರೈತರ ₹ 550 ಕೋಟಿ ಸಾಲಮನ್ನಾ ಮಾಡಿದ್ದೆ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಜಿಲ್ಲೆಗೆ ಬಂದು ಮೃತ ರೈತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದೇನೆ. 200 ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಆತ್ಮಸ್ಥೈರ್ಯ ತುಂಬಿದ್ದೇನೆ’ ಎಂದರು.

‘ನಾನು ಅಧಿಕಾರಕ್ಕಾಗಿ ಎಂದೂ ಮುಖ್ಯಮಂತ್ರಿಯಾದವನಲ್ಲ. ಕಾಂಗ್ರೆಸ್‌ನ ದೆಹಲಿ ನಾಯಕರು ಬಲವಂತ ಮಾಡಿದ್ದರಿಂದ ಅನಿವಾರ್ಯವಾಗಿ ಮುಖ್ಯಮಂತ್ರಿ ಆಗಬೇಕಾಯಿತು. ಆದರೆ ರಾಜ್ಯ ನಾಯಕರು ನನಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಬಿಡಲಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ತೊಡಕು ಮಾಡುತ್ತಾ, ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕುತಂತ್ರ ಮಾಡಿದರು. ಆದರೂ 14 ತಿಂಗಳು ಸಂಕಷ್ಟದಲ್ಲಿಯೇ ನಿಮ್ಮ ಸೇವೆ ಮಾಡಿದ್ದೇನೆ’ ಎಂದರು.

‘ಬಿಜೆಪಿ ಬೆಳೆದಂತೆ ದೇಶಕ್ಕೆ ದೊಡ್ಡ ಅನಾಹುತ ತಂದೊಡ್ಡಲಿದೆ. ಬಿಜೆಪಿ ಸರ್ಕಾರ ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಲು ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕು. ನಾನು ಮುಖ್ಯಮಂತ್ರಿ ಆಗಿದ್ದಾಗ ಹೊಸ ಮಿಲ್‌ ಆರಂಭಿಸಲು ಯೋಜನೆ ರೂಪಿಸಿದ್ದೆ’ ಎಂದರು.

ಶಾಸಕ ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್‌ ಸದಸ್ಯ ಎನ್.ಅಪ್ಪಾಜಿಗೌಡ, ಕಲ್ಪನಾಸಿದ್ದರಾಜು, ರಾಜಣ್ಣ, ಕುಮಾರ್, ಯೋಗೇಶ್, ರಾಮಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT