ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ನಿಮ್ಮ ಮನೆ ಮಗ, ನನ್ನ ಕೈಬಿಡಬೇಡಿ

ಸಂತೇಬಾಚಹಳ್ಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮನವಿ
Last Updated 29 ನವೆಂಬರ್ 2019, 10:42 IST
ಅಕ್ಷರ ಗಾತ್ರ

ಸಂತೇಬಾಚಹಳ್ಳಿ: ‘ನಾಡಿನ ಮುಖ್ಯಮಂತ್ರಿಯಾಗಿ 14 ತಿಂಗಳ ಕಾಲ ಜನಪರವಾದ ಸರ್ಕಾರವನ್ನು ನೀಡಿ ರೈತರ ₹25 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿ ರಾಜ್ಯದ ಇತಿಹಾಸದಲ್ಲಿ ಚರಿತ್ರಾರ್ಹವಾದ ತೀರ್ಮಾನ ಕೈಗೊಂಡಿದ್ದೇನೆ. ನನಗೆ ಇನ್ನೇನು ಬೇಕು ಹೇಳಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸಂತೇಬಾಚಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಪರವಾಗಿ ಮತಪ್ರಚಾರ ನಡೆಸಿದ ಬಳಿಕ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

‘ನನಗೆ ಬೆಲೆ ಕಟ್ಟಲಾಗದ ಪ್ರೀತಿ, ಅಭಿಮಾನ ಸಿಕ್ಕಿದೆ. ರಾಜ್ಯದ ಜನತೆ ನೀಡಿದ 37 ಸ್ಥಾನಗಳ ಪೈಕಿ ಜಿಲ್ಲೆಯಿಂದ ನನಗೆ ಎಲ್ಲಾ 7 ಸ್ಥಾನಗಳಲ್ಲಿ ಗೆಲ್ಲಿಸಿಕೊಟ್ಟು ಜಿಲ್ಲೆಯಲ್ಲಿ ಇತಿಹಾಸವನ್ನೇ ನಿರ್ಮಾಣ ಮಾಡಿದ್ದೀರಿ. ನಾನು ಹಾಸನ ಜಿಲ್ಲೆಯಲ್ಲಿ ಹುಟ್ಟಿ ರಾಮನಗರದಲ್ಲಿ ರಾಜಕಾರಣ ಮಾಡಿದರೂ ರಾಜಕೀಯವಾಗಿ ನನಗೆ ಶಕ್ತಿ ತುಂಬಿದ್ದು ಮಂಡ್ಯ ಜಿಲ್ಲೆ. ಈ ಸತ್ಯ ನನಗೆ ಚೆನ್ನಾಗಿ ಗೊತ್ತಿದೆ. ದಯಮಾಡಿ ನನ್ನ ಕೈಬಿಡಬೇಡಿ. ನಿಮ್ಮ ಮನೆ ಮಗ ಕುಮಾರಸ್ವಾಮಿಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಿ, ಜಿಲ್ಲೆಯ ಸ್ವಾಭಿಮಾನವನ್ನು ಎತ್ತಿಹಿಡಿಯಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.

‘ನಾನು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ₹8,500 ಕೋಟಿ ವೆಚ್ಚದ ಕಾರ್ಯಕ್ರಮಗಳನ್ನು ರೂಪಿಸಿದ್ದೆ. ಆದರೆ, ನಾರಾಯಣಗೌಡ ಸೇರಿದಂತೆ ಅನರ್ಹ ಶಾಸಕರು ಮುಖ್ಯಮಂತ್ರಿ ಸ್ಥಾನದಿಂದ ನನ್ನನ್ನುಕೆಳಕ್ಕಿಳಿಸಿದರು. ನನ್ನ ಯೋಜನೆಗಳು ಸಾಕಾರಗೊಳ್ಳಲು ಯಡಿಯೂರಪ್ಪ ತಡೆ ಹಿಡಿದರು. ಮೈಷುಗರ್ ಮತ್ತು ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಇಂದಿನದಲ್ಲ, ಮೊದಲಿನಿಂದಲೂ ಇದೆ. ಈ ಎರಡೂ ಸಕ್ಕರೆ ಕಾರ್ಖಾನೆಗಳಿಗೆ ಕಾಯಕಲ್ಪ ನೀಡಲು ಆಲೋಚಿಸಿದ್ದೆ. ಆದರೆ, ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅಧಿಕಾರ ಕಿತ್ತುಕೊಂಡರು. ಮುಖ್ಯಮಂತ್ರಿ ಸ್ಥಾನ ಶಾಶ್ವತವಲ್ಲ ಎಂಬ ಸತ್ಯ ಗೊತ್ತಿದೆ. ಆಪರೇಷನ್ ಕಮಲ ನಡೆಸಿ ಶಾಸಕರ ಕೈಯಲ್ಲಿ ರಾಜೀನಾಮೆ ಕೊಡಿಸಿ ನನ್ನ ನೇತೃತ್ವದ ಮೈತ್ರಿ ಸರ್ಕಾರವನ್ನು ಪತನಗೊಳಿಸಿದರು’ ಎಂದು ಕುಮಾರಸ್ವಾಮಿ ಕಿಡಿಕಾರಿದರು.

‘ಜಿಲ್ಲಾ ಪಂಚಾಯಿತಿ ಸದಸ್ಯನಾಗಲೂ ನಾಲಾಯಕ್ ಆಗಿದ್ದ ವ್ಯಕ್ತಿಯನ್ನು ಜೆಡಿಎಸ್ ಟಿಕೆಟ್ ಕೊಟ್ಟು ಎರಡು ಬಾರಿ ಶಾಸಕನನ್ನಾಗಿ ಮಾಡಿದೆ. ಈ ವ್ಯಕ್ತಿ ನಮ್ಮ ಕುಟುಂಬವನ್ನು ಹಾಡಿ ಹೊಗಳಿ ಪತ್ರ ಬರೆದು, ತನಗೆ ಕೊಳಚೆ ನಿರ್ಮೂಲನಾ ಮಂಡಳಿ ಇಲ್ಲವೇ ಗೃಹ ಮಂಡಳಿಯ ಅಧ್ಯಕ್ಷ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದರು. ತಾಲ್ಲೂಕಿನ ಅಭಿವೃದ್ಧಿಗೆ ಈ ಆಸಾಮಿ ಮನವಿ ಮಾಡಲೇ ಇಲ್ಲ’ ಎಂದರು.

ಸಭೆಯಲ್ಲಿ ಶಾಸಕ ಎಚ್.ಡಿ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇ ಗೌಡ, ಶಾಸಕರಾದ ಬಾಲಕೃಷ್ಣ, ಡಿ.ಸಿ.ತಮ್ಮಣ್ಣ, ಡಾ.ಕೆ.ಅನ್ನದಾನಿ, ಶ್ರೀನಿವಾಸ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಜಾನಕಿರಾಂ ಇದ್ದರು.

‘ಏತನೀರಾವರಿ ಯೋಜನೆ ನನ್ನ ಕೊಡುಗೆ’

₹212 ಕೋಟಿ ವೆಚ್ಚದಲ್ಲಿ ಹೇಮಾವತಿ ನದಿಯಿಂದ ಗೂಡೇಹೊಸಳ್ಳಿ ಬಳಿಯಿಂದ ಸಂತೇಬಾಚಹಳ್ಳಿ ಹೋಬಳಿಯ ಕೆರೆ ಕಟ್ಟೆಗಳನ್ನು ತುಂಬಿಸುವ, ರೈತರ ಬದುಕನ್ನು ಹಸನುಗೊಳಿಸುವ ಏತನೀರಾವರಿ ಯೋಜನೆಗೆ ಮಂಜೂರಾತಿ ನೀಡಿದ್ದೆ. ಕಾಮಗಾರಿಗೆ ಟೆಂಡರ್ ಮಾಡಿಸಿ ಕಾರ್ಯಾದೇಶ ನೀಡಲಾಗಿತ್ತು. ಈ ವ್ಯಕ್ತಿ ಸುಳ್ಳು ಹೇಳಬಹುದು ಅಥವಾ ನಾನೇ ಸುಳ್ಳು ಹೇಳಬಹುದು. ಆದರೆ, ಕಡತಗಳು ಸುಳ್ಳು ಹೇಳ್ತಾವಾ? ಸಂತೇಬಾಚಹಳ್ಳಿ ಹೋಬಳಿಯ ಕೆರೆ ಕಟ್ಟೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ನನ್ನ ಕೊಡುಗೆ’ ಎಂದು ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT